ಕ್ರಿಕೆಟ್ ಪ್ರೇಮಿಗಳಿಂದ ಹಿಟ್ ಮ್ಯಾನ್ ಎಂದು ಕರೆಸಿಕೊಂಡಾತ ರೋಹಿತ್ ಶರ್ಮ. ರೋಹಿತ್ ಕ್ರೀಸ್ನಲ್ಲಿ ಇದ್ದಾರೆಂದರೆ ಬೌಂಡರಿ, ಸಿಕ್ಸಗರ್‌ಗಳಿಗೆ ಬರವಿಲ್ಲ. ಯಾವುದೇ ಪಂದ್ಯದಲ್ಲಿ ಭಾರತ ತಂಡ ಹೆಚ್ಚು ಮೊತ್ತ ದಾಖಲಿಸಿದೆ ಅಂದರೆ, ಆಟ ನೋಡದೇ ಇದ್ದವರು ಕೇಳುವ ಮೊದಲ ಪ್ರಶ್ನೆ: ರೋಹಿತ್ ಜಾಸ್ತಿ ರನ್ ಹೊಡೆದಿರಬೇಕು ಅಲ್ವಾ? ಎಂಬುದೇ ಆಗಿರುತ್ತದೆ. ಅಷ್ಟರಮಟ್ಟಿಗೆ ಭರವಸೆಯ ನಂಬಿಗಸ್ತ ಆಟಗಾರ ಎಂಬ ಹೆಗ್ಗಳಿಕೆ ಈಚೀಚಿನ ದಿನಗಳಲ್ಲಿ ರೋಹಿತ್ ಅವರಿಗೆ ಸಿಕ್ಕಿದೆ. ಇಂಗ್ಲಿಷಲ್ಲಿ ರೋಹಿತ್ ಎಂದು ಬರೆಯುವಾಗ Rohit ಬರೆಯುತ್ತಾರೆ.
ಆ ಕಡೆಯ ಮೂರು ಅಕ್ಷರಗಳನ್ನು ತೆಗೆದುಕೊಂಡು ಹಿಟ್ ಮ್ಯಾನ್ ಎಂಬ ಶಬ್ದ ಬಳಸಲು ಆರಂಭವಾಗಿದೆ. ಇವತ್ತು ಪ್ರಚಂಡ ಬ್ಯಾಟ್ಸ್‌ಮ್ಯಾನ್ ಎಂಬ ಹೆಗ್ಗಳಿಕೆ ಹೊಂದಿರುವ ರೋಹಿತ್ ಶರ್ಮಗೆ, ಆರಂಭಿಕ ದಿನಗಳಲ್ಲಿ ಆಫ್ ಸ್ಪಿನ್ನರ್ ಆಗಬೇಕೆಂಬ ಆಸೆ-ಕನಸು. ಆದರೆ ಈ ಹುಡುಗನಲ್ಲಿ ಬೌಲರ್ ಆಗುವುದಕ್ಕಿಂತ ಬ್ಯಾಟ್ಸ್‌ಮ್ಯಾನ್ ಆಗುವ ಲಕ್ಷಣವೇ ಹೆಚ್ಚಾಗಿದೆ ಎಂದು ಗುರುತಿಸಿದ ತರಬೇತುದಾರ, ರೋಹಿತ್‌ಗೆ ಬ್ಯಾಟಿಂಗ್ ಪಾಠ, ಗುಟ್ಟು, ತಂತ್ರಗಳನ್ನೆಲ್ಲ ಹೇಳಿಕೊಟ್ಟರು. ಶಾಲಾ ದಿನಗಳಲ್ಲಿ ಈ ರೋಹಿತ್ ಶರ್ಮಗೆ ಮಾದರಿ ಆಟಗಾರ ಆಗಿದ್ದದ್ದು ಯಾರು ಗೊತ್ತೇ?
ಈ ಹಿಂದೆ ಭಾರತ ತಂಡದ ಆರಂಭಿಕರಾಗಿದ್ದ ವೀರೇಂದ್ರ ಸೆಹ್ವಾಗ್. ತನ್ನ ಮೆಚ್ಚಿನ ಆಟಗಾರನನ್ನು ನೋಡುವ, ಭೇಟಿಯಾಗುವ ಉದ್ದೇಶದಿಂದ ಈ ರೋಹಿತ್ ಆಗಿಂದಾಗ್ಗೆ ಶಾಲೆಗೆ ಚಕ್ಕರ್ ಹೊಡೆಯುತ್ತಿದ್ದನಂತೆ. ಕ್ರಿಕೆಟ್ ಆಟವನ್ನು ಅಪಾರವಾಗಿ ಪ್ರೀತಿಸುತ್ತಿದ್ದದ್ದು ಮಾತ್ರವಲ್ಲ, ಶಾಲೆ ಕಾಲೇಜುಗಳ ಪರವಾಗಿ ಆಡಿ, ಗೆಲುವು ತಂದುಕೊಡುತ್ತಿದ್ದರಿಂದ, ಶಿಕ್ಷಕರು ಹಾಜರಾತಿ ಕೊಟ್ಟು, ನಿನ್ನ ಆಟಕ್ಕೋಸ್ಕರ ಎಲ್ಲ ತಪ್ಪುಗಳನ್ನು ಮಾಫ್ ಮಾಡಿದ್ದೀವಿ, ಹೋಗು’ ಎನ್ನುತ್ತಿದ್ದರಂತೆ. ಒಂದು ಕಾಲದಲ್ಲಿ ಸೆಹ್ವಾಗ್ ಅವರನ್ನು ಆರಾಧಿಸುತ್ತಿದ್ದ ಹುಡುಗನೇ ಈಗ ಸೆಹ್ವಾಗ್‌ರಂತೆ ಉತ್ತರಾಧಿಕಾರಿಯಂತೆ ಬ್ಯಾಟ್ ಬೀಸುತ್ತಿದ್ದಾನಲ್ಲ, ಅದು ಅಚ್ಚರಿಯೂ ಹೌದು, ಸ್ವಾರಸ್ಯವೂ ಹೌದು.
ಆಟಗಾರನ ತಲೆಗೂದಲು ಕತ್ತರಿಸಿದ ಅಂಪೈರ್
ಅಂಪೈರ್‌ಗಳು, ಆಟಗಾರರಿಗೆ ಸಲಹೆ ಕೊಡುವುದನ್ನು, ಎಚ್ಚರಿಕೆ ನೀಡುವುದನ್ನು ನಾವು ನೀವೆಲ್ಲ ನೋಡಿದ್ದೇವೆ. ಆದರೆ, ಅಂಪೈರ್ ಒಬ್ಬರು, ಬ್ಯಾಟ್ಸ್‌ಮ್ಯಾನ್ ಒಬ್ಬರಿಗೆ ಮೈದಾನದಲ್ಲಿಯೇ ಕೂದಲು ಕತ್ತರಿಸಿದ ಸುದ್ದಿಯನ್ನು ಯಾರೂ ನೋಡಿರಲಿಕ್ಕಿಲ್ಲ. ಅಷ್ಟೇ ಯಾಕೆ ಕೇಳಿರುವ ಸಾಧ್ಯತೆಯೂ ಇಲ್ಲ. ಆದರೆ, ಇಂಥದೊಂದು ಅಪರೂಪದ ಪ್ರಸಂಗ ನಡೆದಿದ್ದು ನಿಜ. ಅಂದ ಹಾಗೆ, ಅಂಪೈರಿಂದ ಕೂದಲು ಕತ್ತರಿಸಿಕೊಂಡ ಆಟಗಾರ ಯಾರು ಗೊತ್ತೇ? ನಮ್ಮ ಸುನೀಲ್ ಗಾವಸ್ಕರ್.
ಅಷ್ಟಕ್ಕೂ ಏನಾಯಿತೆಂದರೆ, 1974ರಲ್ಲಿ ಭಾರತ ಕ್ರಿಕೆಟ್ ತಂಡ, ಇಂಗ್ಲೆಂಡಿಗೆ ಟೆಸ್ಟ್ ಪಂದ್ಯ ಆಡಲು ಹೋಗಿತ್ತು. ಓಲ್ಡ… ಟ್ರಾಫಡರ್‌ಲ್ಲಿ ನಡೆದ ಪಂದ್ಯದ ಅಂಪೈರ್ ಆಗಿದ್ದವರು, ಡಿಕೆ ಬರ್ಡ್. ಅವತ್ತು ಬ್ಯಾಟಿಂಗ್‌ಗೆ ಇಳಿದಾಗ, ಉದ್ದಕ್ಕಿದ್ದ ತಲೆಗೂದಲು ಪದೇಪದೇ ಕಣ್ಣಿನ ಮೇಲೆ ಬಿದ್ದು ತೊಂದರೆ ಕೊಡುತ್ತಿತ್ತು. ಗಾವಸ್ಕರ್ ವಿಶೇಷತೆಯೆಂದರೆ, ಎಂಥ ವೇಗದ ಬೌಲಿಂಗ್ ಸಂದರ್ಭದಲ್ಲೂ ಆತ ಹೆಲ್ಮೆಟ್ ಹಾಕುತ್ತಿರಲಿಲ್ಲ.
ಒಂದು ಟೊಪ್ಪಿ ಹಾಕಿಕೊಂಡೇ ಆಡುತ್ತಿದ್ದ. ಆಗ ಗಾವಸ್ಕರ್ ನೇರವಾಗಿ ಅಂಪೈರ್ ಬಳಿ ಹೋಗಿ, ತಲೆಗೂದಲು ಪದೇ ಪದೆ ಕಣ್ಣಿನ ಮೇಲೆ ಬಿದ್ದು ತೊಂದರೆ ಕೊಡುತ್ತಿದೆ. ಇದನ್ನು ಕತ್ತರಿಸಲು ಸಾಧ್ಯವೇ ಎಂದು ಕೇಳಿದರಂತೆ. ಅಯ್ಯೋ ಅದಕ್ಕೇನಂತೆ ಎಂದ ಡಿಕೆ ಬರ್ಡ್, ತಮ್ಮ ಕೋಟಿನ ಜೇಬಲ್ಲಿದ್ದ ಕತ್ತರಿ ತೆಗೆದು, ಗಾವಸ್ಕರ್ ತಲೆಗೂದಲನ್ನು ಕತ್ತರಿಸಿಯೇ ಬಿಟ್ಟರು. ಅಂಪೈರ್ ಒಬ್ಬ ಕ್ರಿಕೆಟ್ ಆಟಗಾರನ ತಲೆಗೂದಲು ತೆಗೆದ ಮತ್ತೂಂದು ಪ್ರಸಂಗ ಕ್ರಿಕೆಟ್ ಇತಿಹಾಸದಲ್ಲಿ ಇಲ್ಲ.