Advertisement

ದೀರ್ಘ‌ಕಾಲಿಕ ಮೂತ್ರಪಿಂಡ ಕಾಯಿಲೆಗಳು

12:35 PM Mar 21, 2021 | Team Udayavani |

ಸಿಕೆಡಿಯ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಆರಂಭಿಸುವುದು ಚಿಕಿತ್ಸೆ ಪರಿಣಾಮಕಾರಿಯಾಗುವಲ್ಲಿ ನಿರ್ಣಾಯಕವಾಗಿರುತ್ತದೆ. ಕಾಯಿಲೆಯು 4ನೇ ಅಥವಾ 5ನೇ ಹಂತ ತಲುಪಿದ ಬಳಿಕ ಈ ಚಿಕಿತ್ಸಾ ವಿಧಾನಗಳು ಕಡಿಮೆ ಫ‌ಲದಾಯಕವಾಗಿರುತ್ತವೆ. ಇದಲ್ಲದೆ, ಸಿಕೆಡಿ ರೋಗಿಗಳಲ್ಲಿ ರಕ್ತಹೀನತೆ, ಎಲುಬು ಕಾಯಿಲೆಗಳು, ಖನಿಜಾಂಶಗಳ ಅಸಹಜ ಮಟ್ಟಗಳು, ದ್ರವಾಂಶ ಹೆಚ್ಚಳದಂತಹ ಸಹ ಸಮಸ್ಯೆಗಳು ಇರುತ್ತವೆ; ಇವುಗಳನ್ನು ನಿಭಾಯಿಸುವುದಕ್ಕೆ ಹೆಚ್ಚುವರಿ ಔಷಧೋಪಚಾರಗಳ ಅಗತ್ಯವಿರುತ್ತದೆ.

Advertisement

ಸಿಕೆಡಿ ರೋಗಿಗಳಲ್ಲಿ ರೋಗ ಪ್ರತಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅವರು ಅನೇಕ ಸೋಂಕು/ ಸಾಂಕ್ರಾಮಿಕ ರೋಗಗಳಿಗೆ ಬೇಗನೆ ತುತ್ತಾಗುವ ಸಾಧ್ಯತೆಯನ್ನು ಹೊಂದಿರುತ್ತಾರೆ. ಕೋವಿಡ್‌-19ರ ಸಂಕೀರ್ಣ ಸಮಸ್ಯೆಗಳಿಗೆ ತುತ್ತಾಗುವ ಮತ್ತು ಕೋವಿಡ್‌ನಿಂದಾಗಿ ಸಾವನ್ನಪ್ಪುವ ಸಾಧ್ಯತೆ ಅವರಲ್ಲಿ ಹೆಚ್ಚು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧಾರಣೆಯಂತಹ ಮುನೆcಚ್ಚರಿಕೆಯನ್ನು ಅವರು ಹೆಚ್ಚು ಕಟ್ಟುನಿಟ್ಟಾಗಿ ಅನುಸರಿಸಬೇಕಾಗುತ್ತದೆ. ಇದಲ್ಲದೆ, ಅವರಿಗೆ ಕೋವಿಡ್‌ ವಿರುದ್ಧ ಲಸಿಕೆಯೂ ಅಗತ್ಯವಾಗಿರುತ್ತದೆ. ಕೋವಿಡ್‌ ಲಕ್ಷಣಗಳನ್ನು ನಿರ್ಲಕ್ಷಿಸುವುದು, ಚಿಕಿತ್ಸೆಯನ್ನು ವಿಳಂಬಿಸುವುದು ಮಾರಣಾಂತಿಕವಾಗಬಹುದು.

ಸಿಕೆಡಿ ರೋಗಿಗಳು ಮೂತ್ರಪಿಂಡ ವೈಫ‌ಲ್ಯಕ್ಕೆ ತುತ್ತಾಗುವುದನ್ನು ತಡೆಯುವ ಏಕೈಕ ಮಂತ್ರ ಎಂದರೆ ಬೇಗನೆ ರೋಗವನ್ನು ಪತ್ತೆ ಹಚ್ಚುವುದು. ಸಿಕೆಡಿ ಉಂಟಾಗುವ ಅಪಾಯ ಹೊಂದಿರುವ ಜನರಿಗೆ ನಮ್ಮ ಸಲಹೆ ಎಂದರೆ, ಬೇಗನೆ ಪರೀಕ್ಷಿಸಿಕೊಳ್ಳಿ, ಬೇಗನೆ ಪತ್ತೆ ಹಚ್ಚಿಕೊಳ್ಳಿ ಮತ್ತು ಆದಷ್ಟು ಬೇಗನೆ ಪ್ರತಿಬಂಧಕಾತ್ಮಕ ಚಿಕಿತ್ಸೆಗೆ ಒಳಪಡಿ.

ಕೆಲವು ತಿಂಗಳುಗಳಿಂದ ಹಿಡಿದು ವರ್ಷಗಳ ಅವಧಿಯಲ್ಲಿ ಮೂತ್ರಪಿಂಡಗಳ ಕಾರ್ಯಚಟುವಟಿಕೆಗಳ ಸಾಮರ್ಥ್ಯ ನಿಧಾನವಾಗಿ ಕುಸಿಯುತ್ತ ಹೋಗುವುದು ಈ ಕಾಯಿಲೆಗಳ ಲಕ್ಷಣ. ದೀರ್ಘ‌ಕಾಲಿಕ ಮೂತ್ರಪಿಂಡ ರೋಗ (ಕ್ರಾನಿಕ್‌ ಕಿಡ್ನಿ ಡಿಸೀಸಸ್‌ – ಸಿಕೆಡಿ)ಗಳು ಐದು ಹಂತಗಳಲ್ಲಿ ಬೆಳವಣಿಗೆ ಹೊಂದುತ್ತವೆ. ಅಂತಿಮ ಹಂತವನ್ನು ಮೂತ್ರಪಿಂಡ ವೈಫ‌ಲ್ಯ ಎಂದು ಕರೆಯಲಾಗುತ್ತದೆ, ಈ ಹಂತದಲ್ಲಿ ರೋಗಿಗಳಿಗೆ ಡಯಾಲಿಸಿಸ್‌/ ಮೂತ್ರಪಿಂಡ ಕಸಿ ಅನಿವಾರ್ಯವಾಗಿರುತ್ತದೆ.

ನಮ್ಮ ದೇಶದಲ್ಲಿ ಸಿಕೆಡಿ ಎಷ್ಟು ಮಟ್ಟಿಗೆ ಇದೆ ಎಂಬ ಸ್ಪಷ್ಟ ಅಂಕಿ ಅಂಶಗಳು ಲಭ್ಯವಿಲ್ಲ. ಹತ್ತು ಲಕ್ಷ ಜನಸಂಖ್ಯೆಯಲ್ಲಿ ಸುಮಾರು 800 ಮಂದಿಗೆ ಸಿಕೆಡಿ ಇರುತ್ತದೆ ಎಂಬುದಾಗಿ ಕೆಲವು ಅಂಕಿಅಂಶಗಳು ಹೇಳುತ್ತವೆ. ಆದರೆ ಸಿಕೆಡಿಯು ಶೇ. 5ರಿಂದ ಶೇ.6ರಷ್ಟು ಪ್ರಮಾಣದಲ್ಲಿ ಇದೆ ಎಂಬ ಕಳವಳಕಾರಿ ಅಂಶವನ್ನು ಕೆಲವು ಕ್ಷೇತ್ರಾಧ್ಯಯನಗಳು ತಿಳಿಸುತ್ತವೆ. ಹಿರಿಯರು, ಮಧುಮೇಹಿಗಳು ಮತ್ತು ಅಧಿಕ ರಕ್ತದೊತ್ತಡ ಹೊಂದಿರುವವರಲ್ಲಿ ಸಿಕೆಡಿ ಇರುವ ಪ್ರಮಾಣ ಇನ್ನೂ ಹೆಚ್ಚಿದೆ. ಮಂಗಳೂರು ಕೆಎಂಸಿಯಲ್ಲಿ ನನ್ನ ಸುಮಾರು 17 ವರ್ಷಗಳ ಅನುಭವದಲ್ಲಿ ಹೇಳುವುದಾದರೆ, ನಮ್ಮ ಜನಸಮುದಾಯಗಳಲ್ಲಿ

Advertisement

ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೆಚ್ಚುತ್ತಿದ್ದು, ಪರಿಣಾಮವಾಗಿ ಸಿಕೆಡಿಯಿಂದ ಬಳಲುವ ರೋಗಿಗಳ ಸಂಖ್ಯೆಯೂ ಅಧಿಕವಾಗಿದೆ.

ಅನಿಯಂತ್ರಿತ ಅಧಿಕ ರಕ್ತದೊತ್ತಡ, ಮಧುಮೇಹ, ಗುÉಮರುಲೊನೆಫ್ರೈಟಿಸ್‌, ಪಾಲಿಸಿಸ್ಟಿಕ್‌ ಕಿಡ್ನಿ ಕಾಯಿಲೆ ಮತ್ತಿತರ ಕಾಯಿಲೆಗಳಂತಹ ವಂಶವಾಹಿ ಕಾಯಿಲೆಗಳು, ನೋವು ನಿವಾರಕ ಔಷಧಗಳನ್ನು ದೀರ್ಘ‌ಕಾಲ ಸೇವಿಸುವುದು, ಸತು. ಆರ್ಸೆನಿಕ್‌, ಪಾದರಸದಂತಹ ಭಾರಲೋಹಗಳು ದೇಹವನ್ನು ಸೇರುವುದು, ಮೂತ್ರಜನನಾಂಗ ವ್ಯೂಹದ ಸತತ ಸೋಂಕುಗಳು, ಆಗಾಗ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಿ ಮೂತ್ರನಾಳಗಳಲ್ಲಿ ತಡೆ ಉಂಟಾಗುವುದು, ಎಸ್‌ಎಲ್‌ಇಯಂತಹ ಆಟೊಇಮ್ಯೂನ್‌ ಕಾಯಿಲೆಗಳು ಸಿಕೆಡಿಗೆ ಸಾಮಾನ್ಯವಾದ ಕಾರಣಗಳಾಗಿವೆ.

ಆರಂಭ ದಲ್ಲಿಯೇ ಪತ್ತೆಹಚ್ಚುವುದು ಸಾಧ್ಯವಾದರೆ ಸಿಕೆಡಿಯಿಂದಾಗಿ ಮೂತ್ರಪಿಂಡ ವೈಫ‌ಲ್ಯ ಉಂಟಾಗುವುದನ್ನು ತಡೆಯಬಹುದಾಗಿದೆ. ಆದರೆ ಸಿಕೆಡಿಗಳು ಆರಂಭಿಕ ಹಂತದಲ್ಲಿ ಲಕ್ಷಣರಹಿತವಾಗಿರುತ್ತವೆ. ಹೊಟ್ಟೆತೊಳೆಸುವಿಕೆ, ವಾಂತಿ, ಊದಿಕೊಳ್ಳುವಿಕೆ, ಉಸಿರುಗಟ್ಟುವಿಕೆ, ಮೂತ್ರ ವಿಸರ್ಜನೆ ಕಡಿಮೆಯಾಗುವುದು ಮತ್ತಿತರ ಲಕ್ಷಣಗಳು ವಿಳಂಬವಾಗಿ ಕಾಣಿಸಿಕೊಳ್ಳುತ್ತವೆಯಾಗಿದ್ದು, ಆಗ ರೋಗಿಗೆ ಡಯಾಲಿಸಿಸ್‌ ಅಥವಾ ಮೂತ್ರಪಿಂಡ ಕಸಿ ಅನಿವಾರ್ಯವಾಗಿರುತ್ತದೆ. ಮಧುಮೇಹ, ಅಧಿಕ ರಕ್ತದೊತ್ತಡ, ಮೂತ್ರಪಿಂಡ ಕಾಯಿಲೆಗಳ ಕೌಟುಂಬಿಕ ಇತಿಹಾಸ, ಬೊಜ್ಜು, ಪದೇಪದೆ ಮೂತ್ರಪಿಂಡದಲ್ಲಿ ಕಲ್ಲುಗಳು/ ಸೋಂಕುಗಳು ಉಂಟಾಗುವುದು, ಆಟೊ ಇಮ್ಯೂನ್‌ ಕಾಯಿಲೆಗಳನ್ನು ಹೊಂದಿರು ವವರು ನಿಯಮಿತವಾಗಿ ಮೂತ್ರಪಿಂಡ ಕಾಯಿಲೆಗಳನ್ನು ಪತ್ತೆಹಚ್ಚುವ ಪರೀಕ್ಷೆಗಳಿಗೆ ಒಳಗಾಗ ಬೇಕಾಗುತ್ತದೆ. ರಕ್ತದಲ್ಲಿ ಕ್ರಿಯಾಟಿನಿನ್‌ ಮಟ್ಟದ ಪರೀಕ್ಷೆ, ರಕ್ತದಲ್ಲಿ ಪ್ರೊಟೀನ್‌ ವಿಸರ್ಜನೆಯಾಗು ತ್ತಿದೆಯೇ ಎಂಬುದನ್ನು ಪತ್ತೆ ಹಚ್ಚುವ ಪರೀಕ್ಷೆಗಳು ಇವುಗಳಲ್ಲಿ ಸೇರಿವೆ.

ಇದರಿಂದ ಸಿಕೆಡಿಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸುವುದು ಸಾಧ್ಯವಾಗುತ್ತದೆ.

ಸಿಕೆಡಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿದರೆ ಅವುಗಳ ಬೆಳವಣಿಗೆಯನ್ನು ಸ್ಥಗಿತಗೊಳಿಸುವುದು ಅಥವಾ ವಿಳಂಬಿಸುವುದಕ್ಕಾಗಿ ಪ್ರತಿರೋಧಕ ಕ್ರಮಗಳನ್ನು ಅನುಸರಿಸಬಹುದಾಗಿದೆ.

ಸಿಕೆಡಿಯನ್ನು ಗುಣಪಡಿಸಬಹುದಾದ ಯಾವುದೇ ಚಿಕಿತ್ಸೆಗಳು ಪ್ರಸ್ತುತ ಲಭ್ಯವಿಲ್ಲ. ಒದಗಿಸುವ ಚಿಕಿತ್ಸೆಯ ಗುರಿ ಕಾಯಿಲೆಯ ಪ್ರಗತಿಯನ್ನು ವಿಳಂಬಿಸುವುದು ಆಗಿರುತ್ತದೆ. ಕೆಳಕಂಡ ಕ್ರಮಗಳ ಮೂಲಕ ಇದನ್ನು ಸಾಧಿಸಲಾಗುತ್ತದೆ:

ರಕ್ತದೊತ್ತಡದ ಮೇಲೆ ಉತ್ತಮ ನಿಯಂತ್ರಣ (ಬಿಪಿ 130/80ಕ್ಕಿಂತ ಕೆಳಗಿರುವುದು)

ಮಧುಮೇಹಿಯಾಗಿದ್ದರೆ, ರಕ್ತದಲ್ಲಿರುವ ಸಕ್ಕರೆಯ ಅಂಶದ ಮೇಲೆ ಸಾಧಿಸುವ ಮೂಲಕ ಸಿಕೆಡಿ ಪ್ರಗತಿಯನ್ನು ವಿಳಂಬಿಸಬಹುದು

ಧೂಮಪಾನ ಮತ್ತು ಮದ್ಯಪಾನವನ್ನು ವರ್ಜಿಸುವುದು

ತೂಕವನ್ನು ಇಳಿಸಿಕೊಳ್ಳುವುದು (ಅಧಿಕ ದೇಹತೂಕ ಹೊಂದಿದ್ದಲ್ಲಿ)

ಮೂತ್ರದಲ್ಲಿ ಪ್ರೊಟೀನ್‌ ವಿಸರ್ಜನೆಯನ್ನು ಕಡಿಮೆ ಮಾಡಲು ಔಷಧಗಳ ಬಳಕೆ (ಎಸಿಇ1/ಎಆರ್‌ಬಿ)

ಮೂತ್ರಪಿಂಡಗಳಿಗೆ ಹಾನಿ ಉಂಟು ಮಾಡುವ ಔಷಧಗಳನ್ನು ವರ್ಜಿಸುವುದು

ರಕ್ತದಲ್ಲಿ ಆಮ್ಲ ಮಟ್ಟವನ್ನು ಕಡಿಮೆ ಮಾಡಲು ಔಷಧಗಳ ಬಳಕೆ

ಆಹಾರಶೈಲಿಯಲ್ಲಿ ಬದಲಾವಣೆ – ಉಪ್ಪಿನಂಶವನ್ನು ಕಡಿಮೆ ಮಾಡುವುದು. ವಿಶೇಷವಾಗಿ ಪ್ರಾಣಿಜನ್ಯ ಪ್ರೊಟೀನ್‌ ಸಹಿತ ಪ್ರೊಟೀನ್‌ಯಕ್ತ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದು

Advertisement

Udayavani is now on Telegram. Click here to join our channel and stay updated with the latest news.

Next