ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ನೃತ್ಯ ಗುರು ವಿದ್ಯಾಶ್ರೀ ನಿರ್ದೇಶನದಲ್ಲಿ ಕ್ರಿಸ್ತನ ಪುನರುತ್ಥಾನದ ದಿನ ಮಂಗಳೂರಿನ ಪುರಭವನದಲ್ಲಿ ಅವರ ಶಿಷ್ಯೆ ರುತ್ ಪ್ರೀತಿಕಾ ಮೂಲಕ ಕ್ರಿಸ್ತ ಪಥ ಎಂಬ ವಿಶಿಷ್ಟ ಭರತನಾಟ್ಯ ಪ್ರದರ್ಶನಗೊಂಡಿತು.
ವೈದ್ಯ ದಂಪತಿ ರೋಶನ್ ಮೆಬೆನ್ ಮತ್ತು ಇ. ವಿ. ಸುರಂಜನ್ ಮೆಬೆನ್ ಪುತ್ರಿಯಾದ ರುತ್ ಪ್ರೀತಿಕಾ ಎನ್‌ಎಂಎ ಎಂಐಟಿಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ. ಐದನೆಯ ತರಗತಿಯಲ್ಲೇ ಭರತನಾಟ್ಯ ಕಲಿಕೆ ಆರಂಭ. ವಿದ್ಯಾಶ್ರೀ ರಾಧಾಕೃಷ್ಣರ ನಿರ್ದೇಶನದಡಿ ವಿದ್ವತ್ ಮುಗಿಸಿ ವಿದುಷಿಯಾಗಿದ್ದಾರೆ. ಕರ್ನಾಟಕ ಸಂಗೀತದಲ್ಲೂ ಜ್ಯೂನಿಯರ್ ಮುಗಿಸಿದ್ದಾರೆ.
ಕ್ರಿಸ್ತ ಪಥಕ್ಕೆ ಸಿದ್ಧ ಸಾಹಿತ್ಯವಿಲ್ಲದ ಸವಾಲು ಒಂದೆಡೆ, ಶಾಸ್ತ್ರೀಯತೆಗೆ ಎಲ್ಲೂ ಚ್ಯುತಿ ಬರದಂತೆ ಸಾಹಿತ್ಯ ರಚನೆಯ ಸೀಮಿತ ಪರಿಧಿ ಒಂದೆಡೆ. ಎರಡನ್ನೂ ಧನಾತ್ಮಕವಾಗಿಯೇ ಸ್ವೀಕರಿಸಿ ನೃತ್ಯ ಸಂಯೋಜನೆಯೊಂದಿಗೆ ಸಾಹಿತ್ಯವನ್ನೂ ರಚಿಸಿದವರು ವಿದ್ಯಾಶ್ರೀ. ಭರತನಾಟ್ಯ ಪ್ರಕಾರದ ಎಲ್ಲಾ ಮೂಲ ಹಂತಗಳನ್ನು ನೃತ್ಯದುದ್ದಕ್ಕೂ ಬಳಸಿಕೊಳ್ಳಲಾಗಿತ್ತು. ಆರಂಭದ ಪುಷ್ಪಾಂಜಲಿ, ಸತ್ಯವೇದ ಆದಿಕಾಂಡದಲ್ಲಿ ಆರು ದಿನ ನಡೆದ ಸೃಷ್ಟಿ ಕಾರ್ಯದ ಮೂಲಕ ಪ್ರಕೃತಿ ಮತ್ತು ಜೀವಕೋಟಿಗಳ ಅಸ್ತಿತ್ವಕ್ಕೆ ಕಾರಣನಾದ ಭಗವಂತನಿಗೆ ಅರ್ಪಿತವಾಗಿತ್ತು. ವಿಶೇಷ ಎಂದರೆ ಆರೂ ದಿನಗಳ ಸೃಷ್ಟಿ ಕಾರ್ಯವನ್ನು ಸವಿಸ್ತಾರವಾಗಿ ರಾಗಮಾಲಿಕೆ, ಆದಿತಾಳದಲ್ಲಿ ಸಾಹಿತ್ಯದೊಳಗೆ ವಿಸ್ತೃತಗೊಂಡರೆ, ಅದಕ್ಕೆ ನೃತ್ತ, ನೃತ್ಯ ಮತ್ತು ನಾಟ್ಯದ ಮೂಲಕ ಜೀವ ಕೊಟ್ಟವರು ರುತ್. ಎರಡನೆಯ ಪ್ರದರ್ಶನ ವರ್ಣ. ದೀನ ದಲಿತರನ್ನು ಉದ್ಧರಿಸುವ ದಯಾಮಯನಾದ ಭಗವಂತಾ, ಕರುಣೆಯಾ ತೋರೆಯಾ ಎಂದು ಭಕ್ತಿ ಭಾವದಲ್ಲಿ ತನ್ನ ಕಲಾತ್ಮಕ ವರ್ಣನೆಯೊಂದಿಗೆ ಗಮನ ಸೆಳೆದರು. ಸಂಕಷ್ಟದಲ್ಲಿರುವ ಮಾನವನನ್ನು ನೀನೇ ಉದ್ಧರಿಸಬೇಕು ಎಂಬ ಪ್ರಾರ್ಥನೆ, ತುಂಬು ಗರ್ಭಿಣಿ ಮರಿಯಾಳಿಗೆ ತಂಗಲು ಸ್ಥಳ ಸಿಗದಾದಾಗ ಕುರಿಗಳ ಗೋದಲಿಯಲ್ಲಾಗುವ ಕ್ರಿಸ್ತ ಜನನ, ಪುಟ್ಟ ಬಾಲಕ ಯೇಸು, ಧರ್ಮ ಬೋಧಕರ ಜೊತೆಯಲ್ಲಿ ಉಪದೇಶ ಕೇಳುವುದನ್ನು ಕಂಡು ಚಕಿತಳಾಗುವ ತಾಯಿ ಮರಿಯಾ…ಪ್ರತಿ ಘಟನೆಯನ್ನೂ ಕಣ್ಣೆದುರು ತೆರೆದಿಟ್ಟಂತೆ ಅಭಿನಯಿಸಿದರು.ಸಿಂಹೇಂದ್ರ ಮಧ್ಯಮ ಆದಿತಾಳದಲ್ಲಿ ಪದವರ್ಣ ಪ್ರಸ್ತುತಿಗೊಂಡಿತು.
ಕಲ್ಪನೆ, ಭಾವನೆ, ಕಾಮನೆಗಳ ವಿಶಿಷ್ಟ ಸಂಚಾರಿ ಭಾವ ಪದಂ. ಕ್ರಿಸ್ತ ಪಥದಲ್ಲಿ ಇದನ್ನು ಹೇಗೆ ತರಬಹುದು ಎಂಬ ಪ್ರಶ್ನೆಗೆ ಉತ್ತರವಾದದ್ದು ಯೋಹಾನನು ಬರೆದ ಸುವಾರ್ತೆಯ ನಾಲ್ಕನೇ ಅಧ್ಯಾಯದ ಆಧಾರದ ಮೇಲೆ ರಚಿತವಾಗಿದ್ದ ಸಾಹಿತ್ಯಕ್ಕೆ ರುತ್ ಅಭಿನಯ ಭೇಷ್ ಅನಿಸಿಕೊಂಡದ್ದು.
ಭಕ್ತಿರಿಗಾಗಿ ತಾನು ಕಷ್ಟಗಳನ್ನು ಅನುಭವಿಸುತ್ತಾ, ತ್ಯಾಗದ ಸಂಕೇತವಾಗಿ ಕ್ರಿಸ್ತ ಶಿಲುಬೆಯನ್ನು ನೀಡುವ, ಶಿಲುಬೆಗೆ ಏರಿಸಲ್ಪಟ್ಟ ಯೇಸು ಮೂರನೆಯ ದಿನ ಪುನರುತ್ಥಾನವಾದಾಗ ಸಂಭ್ರಮಿಸುವ ಜನ ಸಮುದಾಯ ಶಿಲುಬೆಯನ್ನು ಪಡೆದುಕೊಳ್ಳುವ ಸನ್ನಿವೇಶವನ್ನು ಲಘು ಶಾಸ್ತ್ರೀಯ ನೃತ್ಯದ ಮೂಲಕ ಕೀರ್ತನೆಯಾಗಿ ಪ್ರದರ್ಶಿಸಲಾಯಿತು. ಶಿಲುಬೆ ಹೊತ್ತ ಜನ ಸಮುದಾಯದ ಹೆಜ್ಜೆಗಳನ್ನು ತನ್ನ ಹೆಜ್ಜೆಗಳ ಮೂಲಕ, ಆಂಗಿಕ ಚಲನೆಯ ಜೊತೆಗೆ, ಭಾವಾವೇಶದೊಂದಿಗೆ ರುತ್ ಪ್ರದರ್ಶಿಸಿದ ರೀತಿ ಅನನ್ಯ. ಕೀರ್ತನಾ ಸಾಹಿತ್ಯ ರಚನೆ ಸಾಮ್ಯುವೆಲ್ ಸಾಧುವರದ್ದಾಗಿದ್ದು ದೇಶ ರಾಗ, ತಾಳಮಾಲಿಕೆಯಲ್ಲಿ ಸಂಯೋಜಿಸಲ್ಪಟ್ಟಿತ್ತು.
ಭರತನಾಟ್ಯ ಪ್ರಸ್ತುತಿಯ ಕೊನೆಯ ಅಂಗ ತಿಲ್ಲಾನ. ಮಾರ್ಕನ ಸುವಾರ್ತೆಯ 16ನೆಯ ಅಧ್ಯಾಯದ ಆಧಾರದಲ್ಲಿ ಸಮಾಧಿಯೊಳಗಿದ್ದ ಕ್ರಿಸ್ತ ಎದ್ದ ಸೋಜಿಗವನ್ನು ವಿವರಿಸುತ್ತಾ ನೃತ್ಯವಾದದ್ದು ವಿಶೇಷ. ಇದರ ಸಾಹಿತ್ಯ ಡಾ| ಮಾಬೆನ್ ಅವರದ್ದು.
ಅರೆಹೊಳೆ ಸದಾಶಿವ ರಾವ್