Advertisement

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

11:39 PM Dec 23, 2024 | Team Udayavani |

ಮಂಗಳೂರು: ಕರಾವಳಿಯಲ್ಲಿ ಕ್ರಿಸ್ಮಸ್‌ ಹಬ್ಬದ ಕೊನೇ ಹಂತದ ಸಿದ್ಧತೆಗಳು ನಡೆಯುತ್ತಿವೆ. ಡಿ. 24ರ ಮಧ್ಯರಾತ್ರಿಯ ವೇಳೆ ಕ್ರಿಸ್ತರು ಜನಿಸಿದ ಘಳಿಗೆಯನ್ನು ಸ್ಮರಿಸಿ ಕ್ರೈಸ್ತ ಸಮುದಾಯ ಇಂದು ರಾತ್ರಿ ಕ್ರಿಸ್ಮಸ್‌ ಸಂಭ್ರಮಾಚರಣೆ ನಡೆಸಲಿದೆ. ಮಂಗಳವಾರ ರಾತ್ರಿ ಎಲ್ಲ ಚರ್ಚ್‌ ಗಳಲ್ಲಿ ಕ್ರಿಸ್ಮಸ್‌ ಹಬ್ಬದ ಜಾಗರಣೆ ಆಚರಿಸಿ ಕ್ರಿಸ್ತ ಜಯಂತಿಯ ವಿಶೇಷ ಬಲಿಪೂಜೆಗಳನ್ನು ಸಲ್ಲಿಸುತ್ತಾರೆ. ಕ್ಯಾರೊಲ್‌ ಗಾಯನದೊಂದಿಗೆ ಸಂಭ್ರಮಾಚರಣೆ ಆರಂಭವಾಗುತ್ತದೆ.

Advertisement

ಮಂಗಳೂರು ಧರ್ಮಪ್ರಾಂತ್ಯದ ಬಂಟ್ವಾಳ, ಪುತ್ತೂರು, ಮೂಡುಬಿದಿರೆ, ಕಾಸರಗೋಡು, ವಿಟ್ಲ, ಮೊಗರ್ನಾಡು, ಮುಡಿಪು, ಮಂಗಳೂರು ನಗರದ ಎಲ್ಲ ಚರ್ಚ್‌ಗಳಲ್ಲಿ ಮಂಗಳವಾರ ಸಂಜೆ 7 ಗಂಟೆಯಿಂದ ಹಬ್ಬದ ಮೆರುಗು ಶುರುವಾಗುತ್ತದೆ. ಕ್ಯಾರೊಲ್‌ಗ‌ಳ ಗಾಯನದ ಬಳಿಕ ಧರ್ಮಗುರುಗಳ ನೇತೃತ್ವದಲ್ಲಿ ಬಲಿಪೂಜೆಗಳು ನಡೆಯುತ್ತವೆ. ಬಲಿಪೂಜೆಯ ಅಂತ್ಯದಲ್ಲಿ ಮೊಂಬತ್ತಿ ವಿತರಿಸುತ್ತಾರೆ. ಬಳಿಕ ಪರಸ್ಪರ ಶುಭಾಶಯ ವಿನಿಮಯದೊಂದಿಗೆ ಮನೋರಂನೆ ಕಾರ್ಯಕ್ರಮಗಳು ನಡೆಯುತ್ತವೆ. ಮಂಗಳವಾರ ರಾತ್ರಿ ನಗರದ ರೊಸಾರಿಯೋ ಕ್ಯಾಥೆಡ್ರಲ್‌ನಲ್ಲಿ ನಡೆಯುವ ಕ್ರಿಸ್ಮಸ್‌ ಜಾಗರಣೆ ಬಲಿಪೂಜೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ಅ|ವಂ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ಭಾಗವಹಿಸಲಿದ್ದಾರೆ.

ಕ್ರಿಸ್ಮಸ್‌ ಗೋದಲಿ, ನಕ್ಷತ್ರಗಳ ಸಾಲು ಎಲ್ಲೆಡೆ ರಾರಾಜಿಸುತ್ತಿವೆ. ವಿಶೇಷ ತಿನಿಸುಗಳಾದ ಕೇಕ್‌ ಕುಸ್ವಾರ್‌ಗಳಿಗೆ ವಿಪರೀತ ಬೇಡಿಕೆ ಇದೆ. ಕ್ರಿಸ್ಮಸ್‌ ತಿಂಡಿಗಳನ್ನು ಚರ್ಚ್‌ ವ್ಯಾಪ್ತಿಯಲ್ಲೇ ವಿವಿಧ ಸಂಘ ಸಂಸ್ಥೆಗಳು ಜತೆಯಾಗಿ ತಯಾರಿಸಿ ಅಗತ್ಯ ಇದ್ದವರಿಗೆ ನೀಡುವ ಕಾರ್ಯವನ್ನು ಕೈಗೊಂಡಿದ್ದಾರೆ. ಮನೆಗಳ ಮುಂಭಾಗದಲ್ಲಿ ಗೋದಲಿಗಳು ನಿರ್ಮಿಸಲಾಗಿದ್ದು, ಮನೆಯಂಗಳದಲ್ಲಿ ನಕ್ಷತ್ರಗಳು ಮಿನುಗುತ್ತಿವೆ. ಗೋದಲಿ (ಕ್ರಿಬ್‌ ಸೆಟ್‌), ಮನೆ, ಮನೆಯ ಆವರಣ, ಚರ್ಚ್‌ಗಳನ್ನು ಅಲಂಕರಿಸುವ ನಕ್ಷತ್ರಗಳು, ಘಂಟೆ (ಬೆಲ್‌)ಗಳ ಸಾಲು, ಕ್ರಿಸ್ಮಸ್‌ ಟ್ರೀ, ಸಾಂತಕ್ಲಾಸ್‌ ವೇಷಭೂಷಣ ಮಾರಾಟ ಜೋರಾಗಿದೆ. ಕ್ರಿಸ್ಮಸ್‌ ಹಬ್ಬದ ಮುಂಚಿತವಾಗಿ ವಿವಿಧ ಚರ್ಚ್‌ಗಳನ್ನು ವಿದ್ಯುತ್‌ ದೀಪಾಲಂಕಾರಗೊಳಿಸಲಾಗಿದೆ. ಉಭಯ ಜಿಲ್ಲೆಗಳಲ್ಲಿ ಕ್ರಿಸ್ಮಸ್‌ ಹಬ್ಬದ ಕಳೆಕಟ್ಟಿದ್ದು, ಕ್ರೈಸ್ತರು ಸಂಭ್ರಮಾಚರಣೆಯಲ್ಲಿದ್ದಾರೆ.

ಕ್ರಿಸ್ಮಸ್‌ ಸಂದೇಶ
ದೇವರು – ಮನುಷ್ಯರ ನಡುವಿನ ಸಂಬಂಧ
ದೇವರು ಮತ್ತು ಮನುಷ್ಯರ ನಡುವೆ ಹಾಗೂ ಮನುಷ್ಯ- ಮನುಷ್ಯರ ನಡುವಿನ ಜೀವನ ಹಾಗೂ ಜೀವ ನೀಡುವ ಸಂಬಂಧಗಳನ್ನು ಕ್ರಿಸ್ಮಸ್‌ ಆಚರಿಸುತ್ತದೆ. ದೇವಪುತ್ರ ಮನುಜರಾಗಿದ್ದಾರೆ ಎಂಬುದೇ ಇಂದಿನ ಸಂತೋಷಕ್ಕೆ ಕಾರಣ. ದೇವರು ನಮ್ಮೊಡನೆ ಇದ್ದಾರೆ ಎಂಬ ಭರವಸೆ ನೀಡುವುದಕ್ಕಾಗಿಯೇ ಅವರು ಭುವಿಗೆ ಇಳಿದು ಬಂದರು.

ಇತ್ತೀಚಿನ ದಿನಗಳಲ್ಲಿ ಯುದ್ಧ, ಆತಂಕ, ಸಾವು ನೋವುಗಳು ಸಹಿತ ಹತ್ತಾರು ರೀತಿಯ ಕಾರ್ಮೋಡಗಳು ನಮ್ಮ ಸುತ್ತಲಿವೆ. ದೇವರು ನಮ್ಮೊಡನೆ ಇದ್ದಿದ್ದರೆ, ಮನುಕುಲದಲ್ಲಿ ಇಂತಹ ಸಂಕಷ್ಟಗಳು ಯಾಕೆ ನಡೆಯುತ್ತಿವೆ ಎನ್ನುವ ಪ್ರಶ್ನೆ ಅನೇಕರಿಗೆ ಕಾಡುತ್ತಿದೆ. ಇಂತಹ ಕಠಿನ ಸಮಯದಲ್ಲಿ ಯೇಸು ಕ್ರಿಸ್ತರು ಶಾಂತಿ ಹಾಗೂ ಭರವಸೆಯ ರಾಜಕುಮಾರನಾಗಿ ಸ್ವರ್ಗದಿಂದ ಇಳಿದು ಬಂದಿದ್ದಾರೆ. ದೇವರು ನಮ್ಮ ಸಂಕಟಗಳಿಗೆ ಕಾರಣರಲ್ಲ. ಬದಲಾಗಿ ಮನುಷ್ಯನ ಸ್ವಾರ್ಥ ಮತ್ತು ಸ್ವಕೇಂದ್ರಿತ ನಿಲುವುಗಳೇ ಕಾರಣ ಎಂದು ತೋರಿಸಿಕೊಟ್ಟಿದ್ದಾರೆ. ಕೆಲವರ ಮುಕ್ತ ಆಯ್ಕೆಯಿಂದಾಗಿ ಹಲವರು ಸಂಕಷ್ಟಕ್ಕೊಳಗಾಗುತ್ತಾರೆ. ಆದರೆ ತಕ್ಕ ಮಟ್ಟಿಗೆ ನಾವೆಲ್ಲರೂ ಈ ಪರಿಸ್ಥಿತಿಗೆ ಹೊಣೆಗಾರರಾಗಿದ್ದೇವೆ ಎಂಬುದನ್ನು ಮರೆಯಬಾರದು. ಯೇಸುವಿನ ಒಳ್ಳೆಯತನದ ಬೆಳಕಿನ ಮುಂದೆ ನಮ್ಮನ್ನು ನಾವೇ ತೆರೆದುಕೊಂಡರೆ ಸುಲಭ ವಾಗಿ ನಮ್ಮ ದೋಷಗಳ ಅರಿವಾಗಬಹುದು. ಈ ಬಾರಿಯ ಕ್ರಿಸ್ಮಸ್‌ ಸಕಲ ಮನುಜಕುಲಕ್ಕೂ ಶಾಂತಿ ಸಮಾಧಾನ ಕರುಣಿಸಲಿ ಎಂದು ಪ್ರಭುಕ್ರಿಸ್ತರಲ್ಲಿ ಬೇಡುತ್ತೇನೆ. ನಿಮಗೆಲ್ಲರಿಗೂ ಕ್ರಿಸ್ಮಸ್‌ ಹಬ್ಬದ ಶುಭಾಶಯಗಳು.

Advertisement


ಅ| ವಂ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು

ಸಹಬಾಳ್ವೆಯ ಸಂದೇಶ ನೀಡಿದ್ದ ಯೇಸು
ನಾಡಿನ ಆತ್ಮೀಯ ಬಾಂಧವರಿಗೆಲ್ಲ ಪ್ರೀತಿಯಿಂದ ಕ್ರಿಸ್ಮಸ್‌ ಹಬ್ಬದ ಶುಭಾಶಯ ಕೋರುತ್ತೇನೆ.
ಲೋಕ ರಕ್ಷಕರಾದ ಯೇಸು ಸ್ವಾಮಿಯವರು ಜನಿಸಿದ ಹಬ್ಬವೇ ಕ್ರಿಸ್ಮಸ್‌. ದೀನರು, ದುಃಖೀತರು ಮತ್ತು ಪಾಪಗ್ರಸ್ಥ ಜೀವನದಿಂದ ತೊಳಲುತ್ತಿದ್ದರಿಗೆ ಮುಕ್ತಿ ಕೊಟ್ಟು ಸ್ವರ್ಗದೊಂದಿಗೆ ಅವರನ್ನು ಜೋಡಿಸಲು ಬಂದವರೇ ಕ್ರಿಸ್ತರು. ಮಾನವರೆಲ್ಲರೂ ಸಹಬಾಳ್ವೆ, ಪ್ರೀತಿ ಮತ್ತು ಪರಿಶುದ್ಧವಾಗಿ ಜೀವಿಸಿದರೆ ಶಾಂತಿಯನ್ನು ಅನುಭವಿಸಬಹುದು ಎಂದು ಅವರು ನಮಗೆ ತಿಳಿ ಹೇಳಿದರು.
ಜೀವನದಲ್ಲಿ ನೆಮ್ಮದಿ ಬಯಸುವ ಪ್ರತಿಯೊಬ್ಬರೂ ದೇವಪುತ್ರರಾದ ಯೇಸುಕ್ರಿಸ್ತರು ಬೋಧಿಸಿದ ಪರಿಶುದ್ಧ ಪ್ರೀತಿಯಲ್ಲಿ ಜೀವಿಸಬೇಕು. ದ್ವೇಷ, ಕಲಹ, ಭಿನ್ನತೆ, ಕೆಡುಕು ಇವೆಲ್ಲವನ್ನೂ ತ್ಯಜಿಸಿ ನಿರ್ಮಲ ಹೃದಯದಿಂದ ಜೀವಿಸಿ, ಸಕಲ ಜನರೂ ಸಂತೋಷ ಅನುಭವಿಸಬೇಕೆಂಬುದೇ ಕ್ರಿಸ್ಮಸ್‌ ಹಬ್ಬದ ಸಂದೇಶ.
ನಾಡಿಗೆ ಒಳ್ಳೆಯ ಹವೆ, ಮಳೆ, ಬೆಳೆ, ನೆಮ್ಮದಿ ಉಂಟಾಗಲೆಂದು ಯೇಸುಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ.


-ಪರಮ ಪೂಜ್ಯ ಲಾರೆನ್ಸ್‌ ಮುಕ್ಕುಯಿ, ಧರ್ಮಾಧ್ಯಕ್ಷರು, ಬೆಳ್ತಂಗಡಿ

ಕ್ರಿಸ್ಮಸ್‌ನಿಂದ ಭರವಸೆಯ ನವ ಚೇತನ
ಪ್ರೀತಿಯ ಸಹೋದರ ಸಹೋದರಿಯರೇ, ಎಲ್ಲರಿಗೂ ಕ್ರಿಸ್ತ ಜಯಂತಿಯ ಹಾರ್ದಿಕ ಶುಭಾ ಶಯಗಳು. ಸಾಮಾನ್ಯ ವಾಡಿಕೆಯಂತೆ ಕ್ರಿಸ್ಮಸ್‌ ಅಂದರೆ ಯೇಸುಕ್ರಿಸ್ತರ ಜನನ ಮತ್ತು ಕ್ರೈಸ್ತ ಧರ್ಮದ ಆಚರಣೆಯಾಗಿದೆ. ಆದರೆ ನಾವು ವಿಶೇಷವಾಗಿ ತಿಳಿಯಬೇಕಾದ ಸಂಗತಿ ಏನೆಂದರೆ, ಕ್ರಿಸ್ಮಸ್‌ ಸಂದೇಶ ಕೇವಲ ಕ್ರೈಸ್ತರಿಗೆ ಮಾತ್ರ ಸೀಮಿತ ವಾಗಿರುವುದಲ್ಲ. ಇದರಲ್ಲಿರುವ ಜಾಗತಿಕ ಸಂದೇಶವನ್ನು ಅರ್ಥ ಮಾಡಿ ಪೂರಕವಾಗಿ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯ. ಯೇಸು ಕ್ರಿಸ್ತರು ಹುಟ್ಟಿದ್ದು ಯಹೂದಿ ಧರ್ಮದಲ್ಲಿ. ಕಾಲಮಾನಗಳಿಗೆ ಅತೀತವಾಗಿರುವ ದೇವರು ಈ ಕಾಲಮಾನದಲ್ಲಿ ಮಾನವನಾಗಿ ಹುಟ್ಟಿ ನಮ್ಮೊಡನೆ ಇರುವ ದೇವರ ಸಾನ್ನಿಧ್ಯವೇ ಕ್ರಿಸ್ಮಸ್‌. ಯೇಸುಕ್ರಿಸ್ತರು ತನ್ನನ್ನು ತಾನೇ ಬರಿದು ಮಾಡಿ ನರ ಮಾನವನಾಗಿ ಎಲ್ಲರಿಗಾಗಿ ತನ್ನನ್ನು ತಾನೇ ಸಮರ್ಪಿಸಿದ ಮಾದರಿಯಲ್ಲಿ ನಾವು ಕೂಡ ನಮ್ಮ ನಮ್ಮ ಸಣ್ಣತನಗಳನ್ನು ಬದಿಗಿಟ್ಟು ನಮ್ಮಿಂದ ಕೈಲಾದ ಮಟ್ಟಿಗೆ ಇತರರ ಬದುಕಿಗೆ ಕಿಂಚಿತ್ತಾದರು ಪೂರಕವಾಗಿ ಸ್ಪಂದಿಸಲು ಸಿದ್ಧರಾಗೋಣ. ಕ್ರಿಸ್ತ ಜಯಂತಿ ಆಚರಣೆಯ ಸಮಯದಲ್ಲಿ ನಮ್ಮ ನಡೆ ನುಡಿಗಳು ಸ್ವಾರ್ಥದ ಅತಿರೇಕದಿಂದ ಹೊರಬಂದು, ಕ್ರಿಸ್ಮಸ್‌ ಸಂದೇಶದಿಂದ ಪ್ರೇರಿತವಾಗಿ ಭರವಸೆಯ ನವ ಚೇತನವನ್ನು ತುಂಬಲಿ ಎಂದು ಪ್ರಾರ್ಥಿಸುತ್ತೇನೆ.


– ವಂ| ಡಾ|ಗೀವರ್ಗೀಸ್‌ ಮಾರ್‌ ಮಕಾರಿಯೋಸ್‌,ಧರ್ಮಾಧ್ಯಕ್ಷರು, ಪುತ್ತೂರು ಧರ್ಮ ಪ್ರಾಂತ

Advertisement

Udayavani is now on Telegram. Click here to join our channel and stay updated with the latest news.

Next