Advertisement

ಕ್ರಿಸ್ಮಸ್‌ ಆಚರಣೆಯ ಪ್ರಮುಖ ಆಕರ್ಷಣೆ ಗೋದಲಿ

02:39 PM Dec 24, 2020 | Nagendra Trasi |

ಕ್ರಿಸ್ಮಸ್‌ ಅರ್ಥಾತ್‌ ಕ್ರಿಸ್ತ ಜಯಂತಿ ವಿಶ್ವದಾದ್ಯಂತ ಕ್ರೈಸ್ತರು ಆಚರಿಸುವ ಸಂಭ್ರಮದ, ಸಡಗರದ, ಉಲ್ಲಾಸಭರಿತವಾದ ಹಬ್ಬ. ಹಿರಿಯರು – ಕಿರಿಯರು ಜತೆ ಸೇರಿ ಆನಂದ ಸಂತೋಷದಿಂದ ಖುಶಿಯಿಂದ ತುಂಬಿ ಆಚರಿಸುವ ಹಬ್ಬ. ಕ್ರಿಸ್ಮಸ್‌ (ನತಾಲಾ ಫೆಸ್ತ್) ಅಂದರೆ ಮೈ ಮನಸ್ಸುಗಳು ಪುಳಕಿತಗೊಳ್ಳುವ ಹಬ್ಬ. ಹಗೆತನ, ಕೋಪ, ಮತ್ಸರಗಳೆಂಬ ಕತ್ತಲೆಯನ್ನು ದೂರ ಮಾಡಿ ಶಾಂತಿ, ಪ್ರೀತಿ ವಾತ್ಸಲ್ಯಗಳೆಂಬ ಬೆಳಕನ್ನೂ ಬರಮಾಡಿಕೊಳ್ಳುವ ಹಬ್ಬ. ಆದರೆ ಈ ಬಾರಿ (ಡಿಸೆಂಬರ್ 25, 2020) ಕೋವಿಡ್ ನಿಯಮಾವಳಿ ಪ್ರಕಾರ ಸರಳವಾಗಿ ಕ್ರಿಸ್ಮಸ್ ಹಬ್ಬ ಆಚರಿಸಲಾಗುತ್ತಿದೆ.

Advertisement

ಕ್ರಿಸ್‌ಮಸ್‌ ಹಬ್ಬ ವರ್ಷಂಪ್ರತಿ ಬರುತ್ತದೆ, ಹೋಗುತ್ತದೆ. ಆದರೆ ನಾವು ಆಚರಿಸುವ ರೀತಿ ಮಾತ್ರ ಹಚ್ಚ ಹಸುರಾಗಿ ನಮ್ಮ ಮನದಲ್ಲಿ ಉಳಿಯುತ್ತದೆ. ಮಗದೊಮ್ಮೆ ಹಬ್ಬ ಬಂದಾಗ ಹಿಂದಿನ ಕ್ರಿಸ್ಮಸ್‌ ಆಚರಣೆಯ ನೆನಪುಗಳು ಮನಪಟಲದಲ್ಲಿ ಸಿನೆಮಾದ ದೃಶ್ಯಗಳಂತೆ ಮರುಕಳಿಸುತ್ತವೆ. ಕ್ರಿಸ್ಮಸ್‌ ಹಬ್ಬವೆಂದರೆ ಎಳೆಯವರಿಗಂತೂ ಏನೋ ಒಂದು ವಿಶೇಷ ಹುರುಪು ಲವಲವಿಕೆ .

ಕ್ರಿಸ್ಮಸ್‌ ಹಬ್ಬ ಆಚರಣೆಗಾಗಿ ಕ್ರೈಸ್ತರ ಮನೆಗಳಲ್ಲಿ ಹತ್ತು – ಹದಿನೈದು ದಿನಗಳ ಮುಂಚಿತವಾಗಿ ಸಿದ್ಧತೆಗಳು ಆರಂಭವಾಗುತ್ತವೆ. ಇದರಲ್ಲಿ ಬಹಳಷ್ಟು ವಿಷಯ – ವಿಶೇಷಗಳಿವೆ. ಬಗೆ ಬಗೆಯ ತಿಂಡಿ ತಿನಿಸುಗಳು (ಕುಸ್ವಾರ್‌), ಕ್ರಿಬ್‌ ಅಥವಾ ಗೋದಲಿ ನಿರ್ಮಾಣ, ನಕ್ಷತ್ರ- ಗೂಡುದೀಪ ನೇತಾಡಿಸುವುದು, ಕ್ರಿಸ್ಮಸ್‌ ಡ್ಯಾನ್ಸ್‌, ಕ್ಯಾರಲ್‌ ಸಿಂಗಿಂಗ್‌, ಕ್ರಿಸ್ಮಸ್‌ ಶುಭಾಶಯ ಕೋರಿ ಗ್ರೀಟಿಂಗ್‌ ಕಳುಹಿಸುವುದು, ಹೊಸ ಉಡುಗೆ-ತೊಡುಗೆ, ಸಾಂತಾಕ್ಲೊಸ್‌, ಮನೆ ಅಲಂಕಾರ, ಕ್ರಿಸ್‌ಮಸ್‌ ಟ್ರೀ – ಹೀಗೆ ಹಬ್ಬದ ಸಂಭ್ರಮಕ್ಕೆ ವಿಧ ವಿಧವಾಗಿ ಸಿದ್ಧತೆಗಳು ನಡೆಯುತ್ತವೆ.

ಇವುಗಳ ಪೈಕಿ ಗೋದಲಿ ಅತ್ಯಂತ ಪ್ರಮುಖ ಹಾಗೂ ಮಹತ್ವವಾದುದು. ಗೋದಲಿ ನಿರ್ಮಾಣ ಮಾಡುವುದು ತುಂಬಾ ಶ್ರಮದಾಯಕ. ಒಂದು ಸುಂದರವಾದ, ಆಕರ್ಷಕ ಕ್ರಿಬ್‌ ನಿರ್ಮಾಣ ಒಂದು ದಿನದಲ್ಲಿ ಅಥವಾ ತತ್‌ಕ್ಷಣದಲ್ಲಿ ಸಾಧ್ಯವಿಲ್ಲ. ಇದರ ನಿರ್ಮಾಣಕ್ಕೆ ಬಹಳಷ್ಟು ಸಮಯ ಹಿಡಿಯುತ್ತದೆ, ಶ್ರಮವೂ ಅಗತ್ಯ.

ಹೀಗೆ ನಿರ್ಮಾಣ ಮಾಡುತ್ತಾರೆ ಮನೆಯ ಆವರಣದೊಳಗಿನ ಅಂಗಳದಲ್ಲಿ ಒಂದು ಸೂಕ್ತ ಸ್ಥಳವನ್ನು ಆಯ್ದು ಅಲ್ಲಿ ಕಲ್ಲು ಅಥವಾ ಮರದ ಕಂಬಗಳನ್ನು ಉಪಯೋಗಿಸಿ ಸಣ್ಣ ಮಂಟಪದ ರೀತಿಯ ನಿರ್ಮಾಣವನ್ನು ಮಾಡಬೇಕು. ಬಳಿಕ ಅದರ ಮೇಲ್ಭಾಗದಲ್ಲಿ ಹೆಣೆದ ತೆಂಗಿನ ಗರಿಗಳನ್ನು ಅಥವಾ ಈಚಲು ಮರದ ಗರಿಗಳನ್ನು ಉಪಯೋಗಿಸಿ ಛಾವಣಿಯನ್ನು ನಿರ್ಮಾಣ ಮಾಡ ಬೇಕು.

Advertisement

ಒಂದೊಮ್ಮೆ ತೆಂಗಿನ ಗರಿ ಅಥವಾ ಈಚಲು ಮರದ ರೆಂಬೆಗಳು ಸಿಗದಿದ್ದ ಪಕ್ಷದಲ್ಲಿ ಸೀರೆ ಅಥವಾ ಗೋಣಿಗಳನ್ನು ಉಪಯೋಗಿಸಿ ಮುಚ್ಚಬಹುದು. ಗೋದಲಿಯನ್ನು ಆಕರ್ಷಕವಾಗಿ ರಚಿಸಬೇಕಾದರೆ ಹಲವಾರು ಸಾಮಾಗ್ರಿಗಳ ಆವಶ್ಯಕತೆ ಇದೆ. ಸಣ್ಣ ಮತ್ತು ದೊಡ್ಡ ಗಾತ್ರದ ಶಿಲೆ ಅಥವಾ ಇತರ ಕಲ್ಲುಗಳನ್ನೂ ಉಪಯೋಗಿಸಿ ಕೃತಕ ಗುಡ್ಡ, ಬೆಟ್ಟ, ಪರ್ವತ ಪ್ರದೇಶದವನ್ನು ನಿರ್ಮಿಸಬೇಕಾಗುತ್ತದೆ.

ಗದ್ದೆ – ತೋಟಗಳ ಬದಿಯಿಂದ ಹಸಿರು ಹುಲ್ಲಿನ ದಿಣ್ಣೆಗಳನ್ನು ತಂದು ಗುಡ್ಡಗಳ ಮೇಲೆ ಜೋಡಿಸ ಬೇಕು. ಕ್ರಿಬ್‌ನ ಬದಿಯಲ್ಲಿ ಒಂದು ಜಾನುವಾರುಗಳ ಕೊಟ್ಟಿಗೆ (ಹಟ್ಟಿ) ಮಾದರಿಯ ಕೃತಕ ಗುಹೆ ರಚಿಸಿ ಅದರ ಒಳಗೆ ಬಲ ಬದಿಯಲ್ಲಿ ಯೇಸು ಕ್ರಿಸ್ತರ ತಂದೆ ಜೋಸೆಫ್‌ ಮತ್ತು ಎಡ ಬದಿಯಲ್ಲಿ ಯೇಸು ಕ್ರಿಸ್ತರ ತಾಯಿ ಮರಿಯಮ್ಮಹಾಗೂ ಮಧ್ಯದಲ್ಲಿ ಪುಟ್ಟ ಶಿಶು ಯೇಸು ಕ್ರಿಸ್ತರ ಪ್ರತಿಮೆಯನ್ನು ಇರಿಸಬೇಕು.

ಹಿಂಬದಿಯಲ್ಲಿ ದನ, ಕರು, ಆಡು, ಕುರಿ ಇತ್ಯಾದಿ ಜಾನುವಾರುಗಳ ಪ್ರತಿಮೆಗಳನ್ನು ಜೋಡಿಸಬೇಕು. ಒಂದು ವಿದ್ಯುತ್‌ ದೀಪ ಇಟ್ಟು ಮೆರಗು ನೀಡ ಬಹುದು. ಗುಹೆಯ ಮೇಲೆಲ್ಲಾ ಹುಲ್ಲು ಹಾಸುವುದು. ಅಲ್ಲಲ್ಲಿ ಗದ್ದೆಗಳನ್ನು ಹಾಗೂ ಸಣ್ಣ ಕೆರೆಯನ್ನೂ ನಿರ್ಮಾಣ ಮಾಡಿ ಸಣ್ಣ ನಳ್ಳಿ ಮುಖಾಂತರ ನೀರು ಕಾರಂಜಿಯಂತೆ ಹೊರಸೂಸುವ ಅಥವಾ ಗುಡ್ಡಗಾಡು ಪ್ರದೇಶದಿಂದ ನೀರು ಹರಿದು ಬರುವಂತೆ ತೋಡು ನಿರ್ಮಾಣ ಮಾಡ ಬಹುದು.

ಗದ್ದೆಯಲ್ಲಿ ಅಕ್ಕಿ ಅಥವಾ ರಾಗಿ ಬೆಳೆಸ ಬಹುದು. ಅಲ್ಲಲ್ಲಿ ಕುರಿಗಳ ಪ್ರತಿಮೆಗಳನ್ನು ಇರಿಸಿ ಕುರಿ ಕಾಯುವವರು ಕುರಿ ಮರಿಯನ್ನು ಹೊತ್ತು ತಮ್ಮ ಕುರಿ ಮಂದೆಯ ಜತೆ ಬಂದು ಆಗ ತಾನೆ ಹುಟ್ಟಿದ ಯೇಸು ಶಿಶುವನ್ನು ನೋಡಲು ಹೊರಟಿರುವಂತೆ ತೋರಿಸ ಬಹುದು. ಕಾಡಿನಲ್ಲಿ ಹುಲಿ, ಚಿರತೆ, ಸಿಂಹ, ಆನೆ, ಒಂಟೆ ಇತ್ಯಾದಿ ಮೃಗಗಳ ಪ್ರತಿಮೆ ಇಟ್ಟು ಗೋದಲಿಗೆ ಇನ್ನಷ್ಟು ಮೆರಗು ನೀಡಲು ಸಾಧ್ಯವಿದೆ. ಹೀಗೆ ವಿವಿಧ ವೈಶಿಷ್ಟ್ಯಗಳಿಂದ ಕಲಾತ್ಮಕವಾಗಿ ಗೋದಲಿಯನ್ನು ನಿರ್ಮಿಸಿ ಮನೆಮಂದಿ ಎಲ್ಲ ಅದನ್ನು ನೋಡಿ ಖುಷಿಪಡಬಹುದು. ಹಿಂದಿನ ಕಾಲದಲ್ಲಿ ಒಂದು ಗೋದಲಿ (ಕ್ರಿಬ್‌) ಮಾಡುವುದೆಂದರೆ ಮಕ್ಕಳು – ದೊಡ್ಡವರೆನ್ನದೆ ಎಲ್ಲರೂ ಸೇರಿ ನಿರ್ಮಾಣ ಮಾಡಿ ಸಂತಸ ಪಡುತ್ತಿದ್ದರು. ಅದೊಂದು ಸಂಘಟಿತ ಕಾರ್ಯವಾಗಿತ್ತು.

‘ಗೋದಲಿಯನ್ನು ತಮ್ಮ ಮನೆಗಳಲ್ಲಿ ತಯಾರಿಸುವುದು ಒಂದೆಡೆಯಾದರೆ ಇತರರು ನಿರ್ಮಾಣ ಮಾಡಿದ ಗೋದಲಿಗಳನ್ನು ಹುಡುಕಿ ಅವುಗಳ ಅಂದ ಚೆಂದವನ್ನು ನೋಡುವ ಕುತೂಹಲ – ಆಸಕ್ತಿ ಬೇರೆ. ಸುಮಾರು 4- 5 ದಶಕಗಳ ಹಿಂದೆ ಜೆಪ್ಪು ಸೈಂಟ್‌ ಜೊಸೆಫ್‌ ಸೆಮಿನರಿಯ ವಿದ್ಯಾರ್ಥಿಗಳು ಸಮೀಪದ ಅನಾಥಾಶ್ರಮದ ಆವರಣದಲ್ಲಿ ದೊಡ್ಡ ಗಾತ್ರದ ಗೋದಲಿ ನಿರ್ಮಾಣ ಮಾಡುತ್ತಿದ್ದು, ಅದನ್ನು ವೀಕ್ಷಿಸಲು ಬಹಳಷ್ಟು ಮಂದಿ ತೆರಳುತ್ತಿದ್ದರು.

ವಿವಿಧ ವಿನ್ಯಾಸಗಳಿಂದ ಕೂಡಿದ ಗೋದಲಿಗಳನ್ನು ವೀಕ್ಷಿಸುವುದೇ ಖುಶಿಯ ಸಂಗತಿ. ಪ್ರತಿ ವರ್ಷ ವಿಭಿನ್ನ ರೀತಿಯಲ್ಲಿ ನಿರ್ಮಾಣ ಮಾಡುವ ಗೋದಲಿಗಳು ಮಂಗಳೂರಿನ ಜನತೆಯನ್ನು ಆರ್ಕಸುತಿವೆ. 1960 ದಶಕದಲ್ಲಿ ಲಾರೆನ್ಸ್‌ ಬ್ರದರ್ (ಎಲೆಕ್ಟ್ರಿಕಲ್‌ ಕಂಟ್ರಾಕ್ಟರ್) ಜೆಪ್ಪು ಬಪ್ಪಾಲ್‌ನ ತಮ್ಮ ಮನೆಯಲ್ಲಿ ಬೃಹತ್‌ ಗೋದಲಿ ತಯಾರಿಸಿ ಅದರಲ್ಲಿ ಹತ್ತು ಹಲವು ಹೊಸತನವನ್ನು ಜೋಡಿಸುತ್ತಿದ್ದರು. ಅದನ್ನು ಕಣ್ತುಂಬ ನೋಡಲು ಜಾತಿ ಮತ ತಾರತಮ್ಯವಿಲ್ಲದೆ ಎಲ್ಲಾ ವರ್ಗಗಳ ಜನರು ಜಾತ್ರೆಯೋಪಾದಿಯಲ್ಲಿ ಸೇರುತ್ತಿದ್ದರು.

ಆದರೆ ಆವಾಗ ಇದ್ದ ಮಕ್ಕಳ-ಯುವಜನತೆಯ ಹುರುಪಿನ ಚಟುವಟಿಕೆ ಈಗ ಕಂಡು ಬರುತ್ತಿಲ್ಲ. ಕ್ರಮೇಣ ದಿನಗಳು – ವರುಷಗಳು ಉರುಳಿದಂತೆ ಕ್ರಿಬ್‌ ನಿರ್ಮಾಣ ಬಗೆಗಿನ ಆಸಕ್ತಿ ಕಡಿಮೆಯಾಗಿದೆ. ಈಗ ಮನೆ ಅಂಗಳದಲ್ಲಿ ಅಂತಹ ಗೋದಲಿಗಳ ಸಂಖ್ಯೆ ವಿರಳವಾಗಿದೆ. ಬದಲಾಗಿ ಈಗಿನ ಐಟಿ ಯುಗದಲ್ಲಿ ಎಲ್ಲಾ ರೆಡಿಮೆಡ್‌- ಕೃತಕ ಕ್ರಿಬ್‌ಗಳೇ ಜಾಸ್ತಿ. ಅದು ಕೂಡಾ ಎಲ್ಲರ ಮನೆಗಳಲ್ಲಿ ಇಲ್ಲ; ಕೆಲವು ಮನೆಗಳಲ್ಲಿ ಮಾತ್ರ ಕಾಣ ಸಿಗುತ್ತವೆ.

ಕೆಲವು ಕಡೆ ಮನೆಯ ಒಳಗೆ ಮೇಜಿನ ಮೇಲೆ ಅಥವಾ ಟೀಪಾಯ್‌ಗೆ ಸೀಮಿತವಾಗಿವೆ. ಅವರವರ ಮನೆಯ ಗೋದಲಿಗಳನ್ನು ಅವರವರೇ ನೋಡಿ ಆನಂದಿಸ ಬೇಕು. ಅದನ್ನು ನೋಡಲು ಮೊದಲಿನಂತೆ ಜನ ಬರುವುದಿಲ್ಲ. ಬರಲುವುದಕ್ಕೆ ಹೆಚ್ಚಿನವರಿಗೆ ಸಮಯವೂ ಇಲ್ಲ. ಎಲ್ಲವೂ ಫಾಸ್ಟ್‌ ಫುಡ್‌ನ‌ಂತೆ. ಗೋದಲಿಯನ್ನು ದಿಢೀರ್‌ ಆಗಿ ನಿರ್ಮಾಣ ಮಾಡುತ್ತಾರೆ. ಹಾಗೆ ನಿರ್ಮಾಣ ಮಾಡುವ ಗೋದಲಿಗಳು ಈ ಹಿಂದಿನಂತೆ ಇಲ್ಲ; ಆಗಿನ ದಿನಗಳಲ್ಲಿ ಗೋದಲಿಗಳಲ್ಲಿ ಪಾವಿತ್ರ್ಯತೆ ಹೆಚ್ಚು ಎದ್ದು ಕಾಣುತ್ತಿತ್ತು. ಈಗ ನವೀನತೆ ಮಾತ್ರ ಕಾಣ ಸಿಗುತ್ತದೆ.

ಮೊದಲಿನ ಸೊಗಸು- ಮೆರಗು ಇಲ್ಲವಾಗಿದೆ. ಜನರ ಚಿಂತನೆಯೇ ಬದಲಾಗಿದೆ. ಇಂದಿನ ಯುವ ಪೀಳಿಗೆ ಕ್ರಿಸ್ಮಸ್‌ ಹಬ್ಬದ ಸಂದರ್ಭವನ್ನು ಅಷ್ಟೊಂದು ಮಹತ್ವದ್ದಾಗಿ ಪರಿಗಣಿಸಿದಂತೆ ಕಂಡು ಬರುವುದಿಲ್ಲ. ಕೆಲವರು ಇದನ್ನು ಮೋಜು ಮಾಡುವ ಸಮಯವೆಂದೇ ಅರ್ಥೈಸಿರುವಂತೆ ಕಂಡು ಬರುತ್ತಿದೆ.

ಆದರೆ ಒಂದು ವಿಶೇಷ ಏನೆಂದರೆ ಎಲ್ಲಾ ಚರ್ಚ್‌ಗಳಲ್ಲಿ ಈಗಲೂ ಉತ್ತಮ ಹಾಗೂ ಆಕರ್ಷಕವಾದ ಗೋದಲಿಗಳು ಕಾಣ ಸಿಗುತ್ತವೆ. ಚರ್ಚ್‌ನ ಧರ್ಮಗುರುಗಳ ಮಾರ್ಗದರ್ಶನದಲ್ಲಿ ಚರ್ಚ್‌ ಸದಸ್ಯರು, ಯುವಕರು ಸೇರಿಕೊಂಡು ಇದನ್ನು ನಿರ್ಮಾಣ ಮಾಡುತ್ತಾರೆ. ಹಾಗಾಗಿ ಇದರಲ್ಲಿ ಸ್ವಲ್ಪವಾದರೂ ಒರಿಜಿನಾಲಿಟಿಯನ್ನು ಗುರುತಿಸಬಹುದಾಗಿದೆ.

ಕ್ರಿಸ್ಮಸ್‌ ಗೋದಲಿ ಹಿನ್ನೆಲೆ: 2000 ವರ್ಷಗಳ ಹಿಂದೆ ಯೇಸು ಕ್ರಿಸ್ತ ಒಂದು ದನದ ಕೊಟ್ಟಿಗೆಯಲ್ಲಿ ಹುಟ್ಟಿದರು ಎಂಬ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಗೋದಲಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಯೇಸು ಕ್ರಿಸ್ತರ ತಂದೆ ಜೋಸೆಫ್‌ ಅವರು ಜನಗಣತಿಯ ಸಂದರ್ಭದಲ್ಲಿ ತನ್ನ ಹೆಸರು ನೋಂದಣಿಗೆ ಬೆತ್ಲೆಹೇಮಿಗೆ ತುಂಬು ಗರ್ಭಿಣಿಯಾಗಿದ್ದ ಮಡದಿ ಮರಿಯಳ ಜತೆ ಹೋದಾಗ ಅಲ್ಲಿ ಮರಿಯಳಿಗೆ ಹೆರಿಗೆಯ ಬೇನೆ ಕಾಣಿಸಿಕೊಂಡಿತ್ತು.

ಹೆರಿಗೆಗೆ ಎಲ್ಲೂ ಜಾಗ ಸಿಗದ ಕಾರಣ ಲಭ್ಯವಿದ್ದ ಒಂದು ದನದ ಕೊಟ್ಟಿಗೆಯಲ್ಲಿ ಮರಿಯ ಅವರು ಯೇಸು ಕಂದನಿಗೆ ಜನ್ಮ ನೀಡಿದರು ಎನ್ನುವುದು ನಂಬಿಕೆ. ಹಾಗಾಗಿ ಗೋದಲಿ ನಿರ್ಮಾಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಆದರೆ ಈ ಗೊದಲಿ ನಿರ್ಮಾಣ ಮಾಡುವ ಪದ್ಧತಿ ಯಾವಾಗ ಜಾರಿಗೆ ಬಂತು ಎನ್ನುವುದನ್ನು ನಿಖರವಾಗಿ ಹೇಳುವಂತಿಲ್ಲ. ಆದರೆ ಲಭ್ಯ ಆಧಾರಗಳ ಪ್ರಕಾರ 1223 ರಲ್ಲಿ ಇದು ಅನುಷ್ಠಾನಕ್ಕೆ ಬಂತೆಂದು ಹೇಳಲಾಗುತ್ತಿದೆ.

ಆಸ್ಸಿಸಿಯ ಸಂತ ಫ್ರಾನ್ಸಿಸ್‌ ಅವರು 1223 ರಲ್ಲಿ ಈ ಪದ್ಧತಿಯನ್ನು ಆರಂಭಿಸಿದರು ಎಂಬ ಉಲ್ಲೇಖವಿದೆ. ಸಂತ ಫ್ರಾನ್ಸಿಸ್‌ ಅಸಿಸ್ಸಿ ಅವರು ಇಟೆಲಿಯ ಒಂದು ಚಾಪೆಲ್‌ನಲ್ಲಿ
(ಪ್ರಾರ್ಥನಾ ಮಂದಿರ) ಯೇಸು ಕಂದ ಹಾಗೂ ಮರಿಯಮ್ಮ ಅವರ ಪ್ರತಿಮೆಗಳ ಜತೆ ಜೀವಂತ ಪ್ರಾಣಿಗಳನ್ನಿಟ್ಟು ಯೇಸು ಕ್ರಿಸ್ತರ ಜನನದ ಹಬ್ಬದ ಆಚರಣೆಯನ್ನು ಜನರಿಗೆ ತಿಳಿಯುವಂತೆ ಮಾಡಿದರು. ಹಾಗೆ ಬೆಳೆದು ಬಂದ ಗೋದಲಿ ನಿರ್ಮಾಣ ಸಂಸ್ಕೃತಿ ಆನೂಚೂನವಾಗಿ ಇವತ್ತಿಗೂ ಮುಂದುವರಿದಿದೆ. ಈಗ ಆಯಾ ಸಂಸ್ಕೃತಿ – ಪದ್ಧತಿಗೆ ಅನುಗುಣವಾಗಿ ಗೋದಲಿ ನಿರ್ಮಾಣ ಮಾಡುವ ಸಂಪ್ರದಾಯ ಬೆಳೆದು ಬಂದಿದೆ.

ಗೋದಲಿ ನಿರ್ಮಾಣ ಸಂಸ್ಕೃತಿಯನ್ನು ಜೀವಂತವಾಗಿಡಲು ಈಗ ಬಹುತೇಕ ಚರ್ಚ್‌ಗಳು ಅತ್ಯುತ್ತಮ ಗೋದಲಿ ನಿರ್ಮಾಣ ಮಾಡುವ ಬಗ್ಗೆ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಿ ಮಕ್ಕಳನ್ನು – ಯುವಜನತೆಯನ್ನು ಗೋದಲಿ ರಚನೆ ಮಾಡಲು ಹುರಿದುಂಬಿಸುತ್ತಿವೆ. ಸಾಕಷ್ಟು ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.

ಗೋದಲಿ ನಿರ್ಮಾಣ ಪರಂಪರೆ ಮತ್ತು ಸಂಪ್ರದಾಯವನ್ನೂ ಮುಂದುವರಿಸಿ, ಎಲ್ಲರ ಮನೆಗಳ ಅಂಗಳದಲ್ಲಿ ಈ ಹಿಂದಿನಂತೆ ಸುಂದರ ಆಕರ್ಷಕ ಗೋದಲಿಗಳು ಕ್ರಿಸ್ತ ಜಯಂತಿ ಹಬ್ಬದ ಸಂದರ್ಭದಲ್ಲಿ ನಿರ್ಮಾಣ ಆಗಲಿ ಹಾಗೂ ಈ ಮೂಲಕ ಯೇಸು ಕ್ರಿಸ್ತರ ಜನನ ಸಂಕೇತವನ್ನು ಪಸರಿಸುವ ಈ ಪ್ರಕ್ರಿಯೆ ಜೀವಂತವಾಗಿ ಮುಂದವರಿಯಲಿ ಎಂದು ಆಶೀಸೋಣ.

— ಜೆ.ಎಫ್‌.ಡಿ’ಸೋಜಾ, ಅತ್ತಾವರ

Advertisement

Udayavani is now on Telegram. Click here to join our channel and stay updated with the latest news.

Next