Advertisement

ಕ್ರಿಸ್ಮಸ್‌ ಆಚರಣೆಗೆ ರಂಗು ನೀಡುವ ಕ್ರಿಸ್ಮಸ್‌ ಟ್ರೀ

11:03 AM Dec 26, 2019 | Hari Prasad |

ಕ್ರಿಸ್ಮಸ್‌ ಸಂದರ್ಭದಲ್ಲಿ ಕ್ರೈಸ್ತರ ಮನೆ ಅಥವಾ ಮನೆ ಆವರಣದಲ್ಲಿ, ಚರ್ಚ್‌ ಮತ್ತು ಇತರ ಪ್ರಾರ್ಥನಾ ಮಂದಿರಗಳಲ್ಲಿ ಸ್ಥಾಪಿಸಲಾಗುವ ಹಚ್ಚ ಹಸುರಿನ ಮರ ಕ್ರಿಸ್ಮಸ್‌ ಟ್ರೀ.
ಅದು ಕೃತಕ ಮರ ಆಗಿರಬಹುದು ಅಥವಾ ನೈಜ ಮರವೂ ಆಗಿರಬಹುದು. ಆದರೆ ಇವತ್ತಿನ ಕಾಲದಲ್ಲಿ ಕೃತಕವಾಗಿ ತಯಾರಿಸಿದ ಮಾರುಕಟ್ಟೆಯಲ್ಲಿ ಲಭಿಸುವ ಕೃತಕ ಮರವೇ ಬಹುತೇಕ ಎಲ್ಲೆಡೆ ರಾರಾಜಿಸುತ್ತಿದೆ. ಮಾರುಕಟ್ಟೆಯಲ್ಲಿ ದೇಶ ವಿದೇಶಗಳ ಕ್ರಿಸ್ಮಸ್‌ ಟ್ರೀಗಳು ಸಾಕಷ್ಟು ಪ್ರಾಮಾಣದಲ್ಲಿ ಲಭ್ಯವಿವೆ.

Advertisement

ಕ್ರಿಸ್ಮಸ್‌ ಟ್ರೀ ಹಿನ್ನೆಲೆ
ಕ್ರಿಸ್ಮಸ್‌ ಟ್ರಿಯೊಂದಿಗೆ ಕ್ರಿಸ್ಮಸ್‌ ಆಚರಿಸುವ ಸಂಪ್ರದಾಯ ಉತ್ತರ ಯುರೋಪ್‌ನಲ್ಲಿ ಮೊದಲು ಆರಂಭವಾಯಿತು ಎಂದು ಕೆಲವು ಉಲ್ಲೇಖಗಳಿಂದ ತಿಳಿದು ಬರುತ್ತದೆ. ಮಧ್ಯಕಾಲೀನ ಲಿವೋನಿಯಾದಲ್ಲಿ (ಪ್ರಸ್ತುತ ಎಸ್ತೋನಿಯಾ ಮತ್ತು ಲಾತ್ವಿಯಾ) ಈ ಸಂಪ್ರದಾಯ ಬೆಳೆದು ಬಂದಿತ್ತು. ಆಧುನಿಕ ಜರ್ಮನಿಯ ಪ್ರಾರಂಭಿಕ ಘಟ್ಟದಲ್ಲಿ ಅಂದರೆ 16 ನೇ ಶತಮಾನದಲ್ಲಿ ಪ್ರೊಟೆಸ್ಟೆಂಟ್‌ ಜರ್ಮನರು ಅಲಂಕೃತ ಮರಗಳನ್ನು ತಮ್ಮ ಮನೆಗೆ ತರುತ್ತಿದ್ದರು. ಹಾಗೆ ಕ್ರಮೇಣ ಈ ಪದ್ಧತಿ ಜನಪ್ರಿಯತೆ ಗಳಿಸಿಕೊಂಡಿದೆ.

ಮರವನ್ನು ಸಾಂಪ್ರದಾಯಿಕವಾಗಿ ಬಣ್ಣದ ಕಾಗದಗಳಿಂದ ತಯಾರಿಸಿದ ಗುಲಾಬಿ ಹೂವು, ಸೇಬು ಹಣ್ಣು, ತೆಳು ಕಾಗದ, ಬೇಗಡೆ ಇತ್ಯಾದಿಗಳಿಂದ ಅಲಂಕರಿಸಲಾಗುತ್ತಿತ್ತು. 18 ನೇ ಶತಮಾನದ ವೇಳೆಗೆ ಮರದಲ್ಲಿ ಮೇಣದ ಬತ್ತಿ ಇರಿಸಿ ಉರಿಸುವ ಸಂಪ್ರದಾಯವಿದ್ದು, ಕಾಲಕ್ರಮೇಣ ವಿದ್ಯುತ್‌ ಶಕ್ತಿಯ ಆವಿಷ್ಕಾರ ಆದ ಬಳಿಕ ವಿದ್ಯುತ್‌ ದೀಪಗಳಿಂದ ಅಲಂಕರಿಸುವ ಸಂಪ್ರದಾಯ ರೂಢಿಗೆ ಬಂತು.

ಇವತ್ತಿನ ಕಾಲದಲ್ಲಿ ಕ್ರಿಸ್ಮಸ್‌ ಮರಕ್ಕೆ ಮಾಲೆ, ಬಲೂನ್‌, ಬೇಗಡೆ ಮತ್ತಿತರ ಸಾಂಪ್ರದಾಯಿಕ ಆಭರಣಗಳನ್ನು ಜೋಡಣೆ ಮಾಡಲಾಗುತ್ತಿದೆ. ಮರದ ತುದಿಯಲ್ಲಿ ದೇವ ದೂತ ಗ್ಯಾಬ್ರಿಯೆಲ್‌ ಪ್ರತಿಮೆ ಅಥವಾ ಬೆತ್ಲೆಹೇಮ್‌ನ ತಾರೆಯನ್ನು ಪ್ರತಿನಿಧಿಸುವ ನಕ್ಷತ್ರವನ್ನು ಅಳವಡಿಸಲಾಗುತ್ತಿದೆ.

ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಕ್ರಿಸ್ಮಸ್‌ ಟ್ರೀಯನ್ನು ಕ್ರಿಸ್ಮಸ್‌ ದಿನಕ್ಕಿಂತ ಒಂದು ತಿಂಗಳ ಮೊದಲು ಅಂದರೆ ಪೂರ್ವ ಸಿದ್ಧತೆಯ ಆರಂಭದ ದಿನ (ಅಡ್ವೆಂಟ್‌) ದಂದೇ ಸ್ಥಾಪಿಸಲಾಗುತ್ತಿದೆ. ಭಾರತದಲ್ಲಿ ಸಾಮಾನ್ಯವಾಗಿ ಕ್ರಿಸ್ಮಸ್‌ ಹಬ್ಬಕ್ಕೆ ಒಂದು ವಾರ ಇರುವಾಗ ಕ್ರಿಸ್ಮಸ್‌ಟ್ರೀ ಇರಿಸುವ ಸಂಪ್ರದಾಯ ಚಾಲ್ತಿಯಲ್ಲಿದೆ. ಹಚ್ಚ ಹಸಿರಿನ ಮರಗಳು, ರೀದ್‌ಗಳು, ಮಾಲೆಗಳು ಶಾಶ್ವತ ಬದುಕಿನ ಸಂಕೇತ. ಇವುಗಳನ್ನು ಬಳಕೆ ಮಾಡುವ ಪದ್ಧತಿ ಪುರಾತನ ಈಜಿಪ್ಟ್, ಚೀನಾ ಮತ್ತು ಹಿಬ್ರೂ ಜನಾಂಗದವರಲ್ಲಿತ್ತು.

Advertisement

ಕ್ರೈಸ್ತ ಧರ್ಮ ಬರುವ ಮೊದಲು ಯುರೋಪಿನ ಜನರು ವೃಕ್ಷಗಳನ್ನು ಆರಾಧಿಸುತ್ತಿದ್ದರು ಹಾಗೂ ಈ ಜನರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಾಗ ಈ ವೃಕ್ಷಾರಾಧನೆಯ ಪದ್ಧತಿಯನ್ನು ಉಳಿಸಿಕೊಂಡು ಬಂದರು. ಅಲ್ಲದೆ ಸ್ಕ್ಯಾಂಡಿನೇವಿಯನ್‌ ಸಂಪ್ರದಾಯದಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಪ್ರೇತವನ್ನು ಓಡಿಸಲು ಕ್ರಿಸ್ಮಸ್‌ ಸಂದರ್ಭದಲ್ಲಿ ಹಚ್ಚ ಹಸಿರಿನ ಮರವನ್ನು ನೆಟ್ಟು ಅದರಲ್ಲಿ ಹಕ್ಕಿಗಳು ವಾಸವಿರುವಂತೆ ನೋಡಿಕೊಳ್ಳುತ್ತಿದ್ದರು.

ಫ್ರಾಂಕೊ – ಪ್ರಶ್ಯನ್‌ ಯುದ್ಧದ ಸಂದರ್ಭದಲ್ಲಿ ಜರ್ಮನ್‌ ಸೈನಿಕರು ತಮ್ಮ ನೆಲೆಗಳಲ್ಲಿ ಮತ್ತು ಮಿಲಿಟರಿ ಆಸ್ಪತ್ರೆಗಳಲ್ಲಿ ಕ್ರಿಸ್ಮಸ್‌ ಟ್ರೀಗಳನ್ನು ಸ್ಥಾಪಿಸಿದ್ದು, ಇದು ಬಹಳಷ್ಟು ಜನಪ್ರಿಯತೆ ಪಡೆದಿತ್ತು. ಹೀಗೆ ಕ್ರಿಸ್ಮಸ್‌ ಟ್ರೀ ಗೆ ಬಹಳಷ್ಟು ಹಿನ್ನೆಲೆ ಇದೆ. ಆದರೆ ಈ ಕ್ರಿಸ್ಮಸ್‌ ಟ್ರೀ ಚರ್ಚ್‌ ಆವರಣದ ಒಳಗೆ ಪ್ರವೇಶ ಪಡೆದದ್ದು 20 ನೇ ಶತಮಾನದ ಬಳಿಕ ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಕೃತಕ ಕ್ರಿಸ್ಮಸ್‌ ಟ್ರೀ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ಇದೊಂದು ಭರ್ಜರಿ ವ್ಯಾಪಾರದ ಮಾರಾಟದ ವಸ್ತುವೂ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next