Advertisement

ಕ್ರಿಸ್ಮಸ್‌ ಆಚರಣೆಗೆ ಮೆರುಗು ನೀಡುವ ಗ್ರೀಟಿಂಗ್ಸ್‌ ಕಾರ್ಡ್‌

11:01 AM Dec 26, 2019 | Hari Prasad |

ಯಾವುದೇ ಪ್ರಮುಖ ಹಬ್ಬ ಆಚರಣೆಯ ಸಂದರ್ಭದಲ್ಲಿ ಶುಭಾಶಯ ಪತ್ರ ಅಥವಾ ಕಾರ್ಡ್‌ಗಳ ಮೂಲಕ ತಮ್ಮ ಹಿತೈಷಿಗಳಿಗೆ, ಬಂಧು ಬಾಂಧವರಿಗೆ, ಮಿತ್ರರಿಗೆ, ನೆಂಟರಿಷ್ಟರಿಗೆ ಹಬ್ಬದ ಶುಭಾಶಯ ಸಲ್ಲಿಸುವುದು ಸಂಪ್ರದಾಯ. ಕ್ರಿಸ್ಮಸ್‌ ಸಂದರ್ಭದಲ್ಲಿಯೂ ಇದು ಸಾಮಾನ್ಯ.

Advertisement

ಕ್ರಿಸ್ಮಸ್‌ ಸಂದರ್ಭದಲ್ಲಿ ವಿಶೇಷ ಗ್ರೀಟಿಂಗ್‌ ಕಾರ್ಡ್‌ಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಬೇರೆ ಬೇರೆ ಗ್ರಾತ್ರದ, ವಿನ್ಯಾಸದ ಗ್ರೀಟಿಂಗ್‌ ಕಾರ್ಡುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಸಂಗೀತದ ನಾದ ಹೊರಡಿಸುವ ಗ್ರೀಟಿಂಗ್‌ ಕಾರ್ಡುಗಳೂ ಇವೆ.

ಗ್ರೀಟಿಂಗ್‌ ಕಾರ್ಡ್‌ ಹಿನ್ನೆಲೆ
ಕ್ರಿ.ಶ.1837ರಲ್ಲಿ ಬ್ರಿಟನ್‌ನಲ್ಲಿ ರೋಲ್ಯಾಂಡ್‌ ಹಿಲ್‌ ಅವರು ಪ್ರಥಮವಾಗಿ ಪ್ರಾರಂಭಿಸಿದ ಪೆನ್ನಿಪೋಸ್ಟ್‌ ಎಂಬ ಶುಭಾಶಯ ಪತ್ರದ (ಗ್ರೀಟಿಂಗ್ಸ್‌ ಕಾರ್ಡ್‌) ಒಂದು ಅಪೂರ್ವ ಪದ್ದತಿ ಮುಂದೆ ಇಡೀ ಜಗತ್ತಿನಿನಲ್ಲೇ ಪ್ರಸಾರಗೊಂಡಿತು. ಅಂದಿನ ದಿನಗಳಲ್ಲಿ ಕೈಯಲ್ಲಿ ಸ್ವಲ್ಪ ಹಣ ಇದ್ದ ಶ್ರೀಮಂತ ವರ್ಗದ ಜನರು ಮಾತ್ರ ಶುಭಾಶಯ ಪತ್ರಗಳನ್ನು ಅವರ ಮೆಚ್ಚುಗೆಯ ಅಥವಾ ಅವರ ಕುಟುಂಬದ ಸದಸ್ಯರಿಗೆ, ಮಿತ್ರರಿಗೆ ಅಥವಾ ಅವರ ಮನಸ್ಸಿಗೆ ಯೋಗ್ಯ ಎಂದು ಅನಿಸಿದ ವ್ಯಕ್ತಿಗಳಿಗೆ ಕಳುಹಿಸುವ ರೂಢಿಯನ್ನು ಬೆಳೆಸಿಕೊಂಡಿದ್ದರು.

1840 ರ ತನಕ ಕ್ರಿಸ್ಮಸ್‌ ಶುಭಾಶಯ ಪತ್ರದ ಪರಿಚಯವೇ ಇರಲಿಲ್ಲ. ಇಂಗ್ಲಿಷ್‌ ಕಲಾವಿದ ವಿಲಿಯಂ ಎಡ್ಲಿನ್‌ ಅವರು ತಯಾರಿಸಿದ ಗ್ರೀಟಿಂಗ್‌ ಕಾರ್ಡ್‌ ಲಂಡನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್‌ ಎಂಬ ವಸ್ತು ಸಂಗ್ರಹಾಲಯದಲ್ಲಿದೆ. 1843ರಲ್ಲಿ ಜೆ.ಸಿ.ಹಾಕ್ಸ್‌ಲೇ ಎಂಬ ಕಲಾವಿದ ಸರ್‌ ಹೆನ್ರಿ ಕೋಲೆ ಅವರ ಜತೆ ಸೇರಿ ಮುದ್ರಣದ ಶುಭಾಶಯ ಪತ್ರವನ್ನು ತಯಾರಿಸಿದರು. ಅದರಲ್ಲಿ ‘ಎ ಮೆರ್ರಿ ಕ್ರಿಸ್ಮಸ್‌ ಆ್ಯಂಡ್‌ ಎ ಹ್ಯಾಪಿ ನ್ಯೂ ಇಯರ್‌’ ಎಂಬ ಪದಗಳನ್ನು ಬಳಸಲಾಯಿತು. ಈ ಶುಭಾಶಯ ಪತ್ರ ಆಕರ್ಷಕವಾಗಿತ್ತು.

ಇಂತಹ ಪತ್ರದಲ್ಲಿನ ಒಂದು ಚಿತ್ರದಲ್ಲಿ ಹಬ್ಬದ ಪ್ರಯುಕ್ತ ಎಲ್ಲರೂ ಪ್ರೀತಿಯಿಂದ ಹಂಚಿ ತಿನ್ನುವುದು, ಇನ್ನೊಂದರಲ್ಲಿ ಎಲ್ಲರೂ ಸೇರಿ ಕುಡಿಯುವುದು, ಮಗದೊಂದರಲ್ಲಿ ಮೈಯಲ್ಲಿ ಬಟ್ಟೆ ಇಲ್ಲದವರಿಗೆ ಬಟ್ಟೆ ಕೊಡುವುದು ಹೀಗೆ ಒಂದೊಂದು ಬಗೆಯ ಚಿತ್ರಗಳು ಇಂತಹ ಶುಭಾಶಯ ಪತ್ರಗಳಲ್ಲಿ ಮೂಡಿ ಬಂದಿವೆ.

Advertisement

ಈಗ ಮಾತ್ರ ಇವು ವಿಭಿನ್ನ ರೀತಿ, ರೂಪಗಳಲ್ಲಿವೆ. ಅಂತೂ ಕ್ರಿಸ್ಮಸ್‌ ಹಬ್ಬದ ಸಂಸ್ಕೃತಿ ಸಾರುವ, ಸಂಸ್ಕೃತಿಯನ್ನು ಎತ್ತಿ ಹಿಡಿಯವ ಕ್ರಿಸ್ಮಸ್‌ ಶುಭಾಶಯ ಪತ್ರಗಳು ಕ್ರಿಸ್ಮಸ್‌ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ. ಆದರೆ ಆಧುನಿಕ ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಗ್ರೀಟಿಂಗ್‌ ಕಾರ್ಡ್‌ಗಳ ಮಹತ್ವ ಸ್ವಲ್ಪ ಕಡಿಮೆಯಾಗಿದೆ. ಈಗ ಈಮೇಲ್‌, ಫೇಸ್‌ಬುಕ್‌, ಮೊಬೈಲ್‌ ಫೋನ್‌ನಲ್ಲಿ ವಾಟ್ಸಪ್‌ ಮೂಲಕ ಕ್ರಿಸ್ಮಸ್‌ ಶುಭಾಶಯಗಳ ವಿನಿಮಯ ನಡೆಯುತ್ತದೆ.

ಒಂದು ಕಾಲದಲ್ಲಿ ಕ್ರಿಸ್ಮಸ್‌ ಸಮೀಪಿಸುತ್ತಿದ್ದಂತೆ ಮಾರುಕಟ್ಟೆಯಲ್ಲಿ ಗ್ರೀಟಿಂಗ್‌ ಕಾರ್ಡ್‌ಗಳ ಮಾರಾಟ ಮತ್ತು ಖರೀದಿ ಜೋರಾಗಿ ನಡೆಯುತ್ತಿತ್ತು. ಭರ್ಜರಿ ವ್ಯಾಪಾರ ನಡೆಯುತ್ತಿತ್ತು. ಅಂಚೆ ಕಚೇರಿಯ ಬಾಕ್ಸ್‌ಗಳು ಗ್ರಿಟಿಂಗ್ಸ್‌ಗಳಿಂದ ತುಂಬಿ ತುಳುಕುತ್ತಿತ್ತು. ಅಂಚೆ ಬಟವಾಡೆಯಲ್ಲಿಯೂ ವ್ಯತ್ಯಯ ಉಂಟಾಗುತ್ತಿತ್ತು. ಆದರೆ ಈಗ ಈಮೇಲ್‌ ಯುಗದಲ್ಲಿ ಗ್ರೀಟಿಂಗ್‌ ಕಾರ್ಡ್‌ಗಳ ಪ್ರಮಾಣ ಕಡಿಮೆಯಾಗಿದ್ದರಿಂದ ಅಂಚೆ ಕಚೇರಿಗಳಲ್ಲಿ ಅಂತಹ ಒತ್ತಡಗಳು ಕಂಡು ಬರುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next