Advertisement

ಕ್ರಿಸ್ತ ಜನನದ ಸಂದರ್ಭ ದೇವರ ಮೂರು ಕರೆಗಳು

11:34 AM Dec 26, 2019 | Hari Prasad |

ನಾವೆಲ್ಲರೂ ನಮ್ಮ ಜೀವನದ ಪ್ರತಿದಿನ ಏನನ್ನು ಬಯಸುತ್ತೇವೆ – ದುಃಖವನ್ನೋ ಅಶಾಂತಿಯನ್ನೋ? ಕತ್ತಲೆಯ ಜೀವನವೋ – ಒಂಟಿತನದ ಜೀವನವನ್ನೋ? ನಿಸ್ಸಂಶಯವಾಗಿ ಬೆಳಕನ್ನೂ ಸಂತೋಷವನ್ನೂ ಶಾಂತಿಯನ್ನೂ ಬಯಸುತ್ತೇವೆ. ಸ್ಥೂಲವಾಗಿ ಹೇಳುವುದಾದರೆ, ನಾವೆಲ್ಲರೂ ಬಯಸುವುದು ಒಳಿತನ್ನು.

Advertisement

ಅದಕ್ಕಾಗಿ ದೇವರಲ್ಲಿ ಪ್ರತಿದಿನ ಪ್ರಾರ್ಥಿಸುತ್ತೇವೆ. ದೇವರು ಕೂಡ ಒಳ್ಳೆಯದನ್ನು, ಶ್ರೇಷ್ಠವಾದುದನ್ನು ಮತ್ತು ಉತ್ತಮವಾದುದನ್ನೇ ನಮ್ಮಿಂದ ಬಯಸುತ್ತಾನೆ. ಮನುಷ್ಯರಾದ ನಮಗಾಗಿ, ನಮ್ಮ ಒಳಿತಿಗಾಗಿ ಎರಡು ಸಾವಿರ ವರುಷಗಳ ಹಿಂದೆ ಕರ್ತರು ತಮ್ಮ ಪುತ್ರನನ್ನು ಈ ಲೋಕಕ್ಕೆ ಅರ್ಪಿಸಿದ್ದಾರೆ. ಅದರೊಂದಿಗೆ ದೇವರು ನಮಗೆ ಮೂರು ಮುಖ್ಯವಾದ ಕರೆಗಳನ್ನೂ ನೀಡಿದ್ದಾರೆ.

ಕ್ರಿಸ್ಮಸ್‌ ಹಬ್ಬ ನಮಗೆ ಬೆಳಕಿನ ಮಾನವರಾಗಲು ಕರೆ ನೀಡುತ್ತದೆ
ದೇವರು ಕತ್ತಲೆ ತುಂಬಿದ ಜಗತ್ತಿನಲ್ಲಿ ಒಳಿತಿನ ಬೆಳಕನ್ನು ಹರಡುವುದಕ್ಕಾಗಿ ಚಿಕ್ಕ ಜ್ಯೋತಿಯನ್ನು ಬೆತ್ಲೆಹೇಮ್‌ ಎಂಬ ಒಂದು ಪುಟ್ಟ ಹಳ್ಳಿಯಲ್ಲಿ ಬೆಳಗಿಸಿದ. ಆ ಬೆಳಕೇ ಪ್ರಭು ಯೇಸು ಕ್ರಿಸ್ತ. ನಾವೆಲ್ಲರೂ ಕತ್ತಲೆಗೆ ಭಯಪಡುತ್ತೇವೆ.

ಆ ಚಿಕ್ಕ ಬೆಳಕು ನಮಗೆ ಧೈರ್ಯ ಕೊಡುತ್ತದೆ. ಎರಡು ಸಾವಿರ ವರುಷಗಳ ಹಿಂದೆ ದೇವರು ತನ್ನ ಬಳಿ ಇದ್ದ ಜ್ವಾಜ್ಯಲ್ಯಮಾನವಾದ ಬೆಳಕನ್ನು ಲೋಕಕ್ಕೆ ನೀಡಿದ್ದಾನೆ. ಅದರರ್ಥ ನಾವೂ ಬೆಳಕಿನವರಾಗಬೇಕು, ಅಂದರೆ ಒಳಿತನ್ನು ಈ ಲೋಕದಲ್ಲಿ ಹರಡಬೇಕು. ಹಾಗಾಗಿ ಇಂದು ದೇವರು ಬಯಸುವ ಬೆಳಕು ನಾವಾಗಿರಬೇಕು.

ಕ್ರಿಸ್ಮಸ್‌ ಹಬ್ಬ ಹಂಚಿಕೊಳ್ಳಲು ಕರೆ ನೀಡುತ್ತದೆ
‘ಕೊಟ್ಟದ್ದು ತನಗೆ, ಬಚ್ಚಿಟ್ಟದು ಪರರಿಗೆ’, ಕೊಟ್ಟು ಕೆಟ್ಟವರಿಲ್ಲ…’ ಇದು ಹಿರಿಯರ ಮಾತು. ಕ್ರಿಸ್ಮಸ್‌ ದೇವರು ತನ್ನ ಏಕಮಾತ್ರ ಪುತ್ರನನ್ನು ನಮ್ಮೆಲ್ಲರಿಗೆ ಕೊಟ್ಟ ದಿನ. ತನ್ನ ಪುತ್ರನನ್ನು ತನಗಾಗಿ ಬಚ್ಚಿಟ್ಟುಕೊಳ್ಳದೆ, ಲೋಕದ ರಕ್ಷಣೆಗಾಗಿ ಕಳುಹಿಸಿದುದನ್ನು ಸಂಭ್ರಮದಿಂದ ಆಚರಿಸುವ ದಿನ.

Advertisement

ಆದುದರಿಂದ ಈ ಕ್ರಿಸ್ಮಸ್‌ ದಿನಗಳಲ್ಲಿ ಬಚ್ಚಿಟ್ಟುಕೊಳ್ಳುವವರು ನಾವಾಗಿರದೆ, ದೇವರು ನಮಗೆ ಕೊಟ್ಟ ಸಂತೋಷ, ಸಮಾಧಾನ, ಶಾಂತಿಗಳನ್ನು ಇತರರೊಂದಿಗೆ ಹಂಚಿಕೊಳ್ಳೋಣ. ಈ ದಿನಗಳಲ್ಲಿ ನಾವು ಕೇವಲ ಸಿಹಿತಿಂಡಿ ಹಂಚುವ ಕ್ರೈಸ್ತರಾಗಿ ಉಳಿಯದೆ, ನಮ್ಮ ನಡೆ, ನುಡಿ, ಕ್ರಿಯೆಗಳ ಮೂಲಕ ಇತರರ ಜೀವನದಲ್ಲಿ ನಮ್ಮಿಂದ ಸಾಧ್ಯವಾದಷ್ಟು ಸಂತೋಷದ ಬೆಳಕನ್ನು ಬೀರೋಣ.

ಕ್ರಿಸ್ಮಸ್‌ ನಾವು ಒಂದಾಗಲು ಕರೆ ನೀಡುತ್ತದೆ
ದೇವರು ನಮ್ಮನ್ನು ಚೆಲ್ಲಾಪಿಲ್ಲಿಯಾದ ಸ್ಥಿತಿಯಲ್ಲಿ ನೋಡಲು ಬಯಸುವವನಲ್ಲ. ಆತನ ಸೃಷ್ಟಿಯಾದ ನಾವೆಲ್ಲರೂ ಒಂದಾಗಿ ಇರಲು ಬಯಸುತ್ತಾನೆ. ದೇವರು ನಮ್ಮ ಪಾಪದಿಂದ ಒಡೆದು ಹೋಗಿದ್ದ ಮಾನವ ಮತ್ತು ದೇವರ ಸಂಬಂಧವನ್ನು ಒಂದು ಮಾಡಲು ತನ್ನ ಏಕಪುತ್ರನನ್ನೇ ತ್ಯಾಗ ಮಾಡಿದ. ಯೇಸು ಕೂಡ ತನ್ನ ಜನನದ ಸಮಯದಲ್ಲಿ ಸರ್ವರನ್ನೂ ಒಂದು ಮಾಡುವುದನ್ನು ಕಾಣುತ್ತೇವೆ.

ಗೋದಲಿಯಿಂದ ಕ್ರೂಜೆಯವರೆಗೂ ಈ ಒಗ್ಗೂಡಿಸುವ ಕಾರ್ಯಕ್ಕಾಗಿ ಆತ ಪ್ರಯಾಸಪಡುವುದನ್ನು ಕಾಣುತ್ತೇವೆ. ನಾವು ಶೃಂಗರಿಸುವ ನಮ್ಮ ಆಲಯ ಅಥವಾ ಕ್ರಿಸ್ಮಸ್‌ ಟ್ರೀ ಸುಂದರವಾಗಿ ಕಾಣುತ್ತದೆ. ದೇವರು ನಮ್ಮನ್ನು ವಿಧ ವಿಧವಾಗಿ ಉಂಟು ಮಾಡಿದರೂ ನಾವೆಲ್ಲರೂ ಒಂದಾಗಿ ಏಕ ಮನಸ್ಸಿನಿಂದ ಆತನನ್ನು ಆರಾಧಿಸುತ್ತ, ಸ್ತುತಿಸುತ್ತ, ಕ್ರಿಸ್ತನಿಗಾಗಿ ಜೀವಿಸಿದಾಗ ನಿಜ ಕ್ರಿಸ್ಮಸ್‌ನ ಸಂತೋಷ ನಮಗಾಗುತ್ತದೆ.
ಲೋಕಕ್ಕೆ ರಕ್ಷಕನಾಗಿ ಬಂದ ಕ್ರಿಸ್ತ ಯೇಸುವಿನ ಜನನದ ಶುಭವಂದನೆಗಳು.

– ಅಕ್ಷಯ್‌ ಅಮ್ಮನ್ನ. ಸಿ.ಎಸ್‌.ಐ. ಕ್ರಿಸ್ತಜ್ಯೋತಿ ಚರ್ಚ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next