ದಾವಣಗೆರೆ: ಏಸುವಿನ ಜನ್ಮದಿನದ ಕ್ರಿಸ್‌ಮಸ್ ಆಚರಣೆ ಹೊರ ನೋಟಕ್ಕೆ ಸೀಮಿತವಾಗದೇ ಅದು ಪ್ರತಿಯೊಬ್ಬರ ಹೃದಯದಲ್ಲಿಯೂ ಆರಾಧಿಸುವಂತಾಗಲಿ ಎಂದು ಹರಿಹರ ಮಾತೆ ದೇವಾಲಯದ ಪ್ರಧಾನ ಧರ್ಮಗುರು ಫಾದರ್‌ಆಂಥೋನಿ ಪೀಟರ್ ಹೇಳಿದ್ದಾರೆ.
ಶನಿವಾರ, ಪಿ.ಜೆ.ಬಡಾವಣೆಯ ಸೆಂಟ್ ಪಾಲ್ಸ್ ಕಾನ್ವೆಂಟ್‌ನಲ್ಲಿ ಆಯೋಜಿಸಿದ್ದ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏಸು ಸ್ವಾಮಿಯು ಅರಮನೆಯಲ್ಲಿ ಜನಿಸದೇ ಮಾನವನಾಗಿ ಗೋದಲಿಯಲ್ಲಿ ಜನ್ಮ ತಾಳಿದರು. ಏಸುವಿನ ಪ್ರೀತಿಯ ಸಂದೇಶಗಳು ಎಲ್ಲರ ಮನದಲ್ಲಿ ಉಳಿಯಬೇಕು ಎಂದರು.
ಹಸಿದವರು, ಬಾಯಾರಿದವರು, ನಿರ್ಗತಿಕರು, ರೋಗಿಗಳು ಹಾಗೂ ಸೆರೆಮನೆಯಲ್ಲಿದ್ದವರಿಗೆ ಏಸು ಸಹಾಯ ಮಾಡುತ್ತಿದ್ದರು. ಏಸುಸ್ವಾಮಿ ತಾನು ಶಿಲುಬೆಗೆ ಏರುವಾಗ ಕೂಡಾ ಅವರಿಗೆ ಒಳ್ಳೆಯದಾಗಲಿ ಎಂಬುದಾಗಿ ಹರಸಿದ ಮಹಾನ್ ದಾರ್ಶನಿಕರು. ನೊಂದವರು, ಹಸಿದವರು ಹಾಗೂ ಒಬ್ಬರಿಗೊಬ್ಬರು ಸಹಾಯ ಮಾಡುವ ಮೂಲಕ ಸ್ವಾಮಿಯ ಸಂದೇಶ, ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು. ಶಾಲೆಯ ಮುಖ್ಯಸ್ಥರಾದ ಸಿಸ್ಟರ್ ಸಮಂತ ಮಾತನಾಡಿ, ಕ್ರಿಸ್‌ಮಸ್ ಹಬ್ಬವನ್ನು ಪ್ರಪಂಚದಾದ್ಯಂತ ಅನ್ಯರಿಗೆ ಸಹಾಯ, ರೋಗಿಗಳಿಗೆ ಔಷಧೋಪಚಾರ, ಅಂಧ, ಅಂಗವಿಕಲ ಮಕ್ಕಳಿಗೆ ಸಿಹಿ, ಕಾಣಿಕೆ ನೀಡುವ ಮೂಲಕ ಆಚರಿಸುತ್ತಾರೆ ಎಂದರು. ಕಾಲೇಜಿನ ಆಡಳಿತಾಧಿಕಾರಿ ಸಿಸ್ಟರ್ ಆಲ್ಬಿನಾ, ಪ್ರೌಢಶಾಲೆ ವಿಭಾಗದ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಬೆರಿ, ಸಿಸ್ಟರ್ ಸುಜಯ, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳು ಏಸು ಸ್ವಾಮಿ ಕುರಿತ ಹಾಡು, ನಾಟಕ, ನೃತ್ಯ ಪ್ರಸ್ತುತ ಪಡಿಸಿದರು.