ಬೀದರ: ವೆಲ್‌ಮೆಗ್ನಾ ಗುಡ್ ನ್ಯೂಸ್ ಸಂಸ್ಥೆ ವತಿಯಿಂದ ತಾಲೂಕಿನ ಚಟ್ನಳ್ಳಿ ಸಮೀಪದ ನವಜೀವನ ಕುಷ್ಠರೋಗಿಗಳ ಕೇಂದ್ರದಲ್ಲಿ ಕೇಕ್ ಕತ್ತರಿಸಿ ಕ್ರಿಸ್‌ಮಸ್ ಆಚರಿಸಲಾಯಿತು.
ಸಂಸ್ಥೆಯ ನಿರ್ದೇಶಕಿ ಡಾ| ಸಿಬಿಲ್ ಸಾಲಿನ್ಸ್ ಅವರು ಕೇಂದ್ರದಲ್ಲಿ ವಾಸವಾಗಿರುವ 26 ಕುಟುಂಬಗಳಿಗೆ ಬಟ್ಟೆ ವಿತರಿಸಿದರು. ಕುಷ್ಠರೋಗಿಗಳ ಮುಖದಲ್ಲಿ ಸಂತಸ ಕಾಣಲು ಕೇಂದ್ರದಲ್ಲಿ ಪ್ರತಿ ವರ್ಷ ಕ್ರಿಸ್‌ಮಸ್ ಆಚರಿಸುತ್ತ ಬರಲಾಗುತ್ತಿದೆ. ರೋಗಿಗಳು, ನಿರ್ಗತಿಕರ ಸೇವೆ ದೇವರ ಸೇವೆಗೆ ಸಮಾನವಾಗಿದೆ ಎಂದು ಅವರು ಹೇಳಿದರು.
ನಗರಸಭೆ ಮಾಜಿ ಉಪಾಧ್ಯಕ್ಷ ಫೆಲೋಮನ್ ರಾಜ್ ಪ್ರಸಾದ್ ಮಾತನಾಡಿ, ಡಾ| ಸಿಬಿಲ್ ಸಾಲಿನ್ಸ್ ಅವರು ಕುಷ್ಠರೋಗಿಗಳ ಬಾಳಲ್ಲಿ ಹೊಸ ಬೆಳಕು ಮೂಡಿಸಿದ್ದಾರೆ. ಕೇಂದ್ರದಲ್ಲಿ 26 ಕುಟುಂಬಗಳ 60 ಜನರಿಗೆ ಪಡಿತರ, ವೈದ್ಯಕೀಯ ಉಪಚಾರ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದಾರೆ. ನಿರ್ಗತಿಕ ಮಕ್ಕಳಿಗೆ ತಮ್ಮ ಆಸ್ಪತ್ರೆಯಲ್ಲಿ ಆಸರೆ ಒದಗಿಸಿದ್ದಾರೆ. ಅವರ ಮಾನವೀಯ ಸೇವೆ ಮಾದರಿಯಾಗಿದೆ ಎಂದರು.
ಡಾ| ಸಾಲಿನ್ಸ್ ನೇತ್ರ ಆಸ್ಪತ್ರೆ ಮೂಲಕ ಜಿಲ್ಲೆಯಲ್ಲಿ ಅಂಧತ್ವ ನಿವಾರಣೆಗೆ ಶ್ರಮಿಸುತ್ತಿದ್ದಾರೆ. ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಶಿಬಿರಗಳ ಮೂಲಕ ಬಡವರಿಗೆ ನೆರವಾಗುತ್ತಿದ್ದಾರೆ ಎಂದು ಹೇಳಿದರು.
ಡಾ| ವೀರೇಂದ್ರ ಪಾಟೀಲ, ಆಸ್ಪತ್ರೆಯ ವ್ಯವಸ್ಥಾಪಕ ಸತೀಶ, ಕೋಮಲ್, ಪುಟ್ಟರಾಜ ಬಲ್ಲೂರಕರ್, ಶಿಬಾ ಮೋಹನ್, ರೆಬೆಕಾ, ಪ್ರಕಾಶ, ಸುದೇಶ್ ಇದ್ದರು.