Advertisement

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

01:41 AM Dec 25, 2024 | Team Udayavani |

ಮಂಗಳೂರು: ಏಸು ಕ್ರಿಸ್ತರ ಜನ್ಮ ಸ್ಮರಣೆಗಾಗಿ ಆಚರಿಸುವ ಕ್ರಿಸ್ಮಸ್‌ ಹಬ್ಬವನ್ನು ಕ್ರೈಸ್ತ ಬಾಂಧವರು ಕರಾವಳಿಯಾದ್ಯಂತ ಮಂಗಳವಾರ ರಾತ್ರಿ ಭಕ್ತಿ, ಶ್ರದ್ಧೆ, ಸಂಭ್ರಮ ಸಡಗರದಿಂದ ಆಚರಿಸಿದರು.

Advertisement

ಜಿಲ್ಲೆಯ ವಿವಿಧ ಚರ್ಚ್‌ಗಳನ್ನು ವಿದ್ಯುದ್ದೀಪಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಚರ್ಚ್‌ ಆವರಣದಲ್ಲಿ ಮತ್ತು ಕ್ರೈಸ್ತರ ಮನೆ ಆವರಣದಲ್ಲಿ ಆಕರ್ಷಕ ಕ್ರಿಬ್‌ಗಳನ್ನು (ಗೋದಲಿ) ನಿರ್ಮಿಸಲಾಗಿತ್ತು, ನಕ್ಷತ್ರಗಳನ್ನು ಜೋಡಿಸಲಾಗಿತ್ತು. ಚರ್ಚ್‌ಗಳಲ್ಲಿ ರಾತ್ರಿ ವೇಳೆ ಜರಗಿದ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕ್ರಿಸ್ಮಸ್‌ ಗೀತೆಗಳನ್ನು (ಕ್ಯಾರಲ್ಸ್‌) ಹಾಡಿ ಯೇಸು ಕ್ರಿಸ್ತರ ಜನನವನ್ನು ಸ್ಮರಿಸಿ ಯೇಸು ಕಂದನಿಗೆ ನಮಿಸಿದರು.

ನಗರದ ಪ್ರಮುಖ ಚರ್ಚ್‌ ಗಳಾದ ರೊಸಾರಿಯೋ ಕೆಥೆಡ್ರಲ್‌, ಮಿಲಾಗ್ರಿಸ್‌, ಉರ್ವ, ಬಿಜೈ, ಬೆಂದೂರ್‌ವೆಲ್‌, ಕುಲಶೇಖರ, ಶಕ್ತಿನಗರ, ಬಿಕರ್ನಕಟ್ಟೆ, ಕೂಳೂರು, ಅಶೋಕನಗರ, ವಾಮಂಜೂರು, ಪಾಲ್ದನೆ, ಬೋಂದೆಲ್‌ ಹಾಗೂ ಗ್ರಾಮಾಂತರದ ಪುತ್ತೂರು, ಬಂಟ್ವಾಳ, ಮುಡಿಪು, ಪೆರ್ಮನ್ನೂರು ಸಹಿತ ಎಲ್ಲ ಚರ್ಚ್‌ಗಳಲ್ಲಿ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿದರು. ಬುಧವಾರ ಚರ್ಚ್‌ ಗಳಲ್ಲಿ ಹಬ್ಬದ ಬಲಿ ಪೂಜೆ, ಇತ್ಯಾದಿ ನಡೆಯಲಿದೆ.

ಬಿಷಪ್‌ ಅವರು ಮಂಗಳೂರಿನ ನಂತೂರಿನ ಭಗಿನಿಯರ ಕಾನ್ವೆಂಟ್‌ನಲ್ಲಿ ಹಬ್ಬದ ವಿಶೇಷ ಬಲಿಪೂಜೆ ಹಾಗೂ ಸಂದೇಶವನ್ನು ನೀಡಲಿದ್ದಾರೆ.

ಸಮಾಜಕ್ಕೆ ಪ್ರೀತಿ ಹಂಚೋಣ
ಮಂಗಳೂರು ಧರ್ಮಪ್ರಾಂತದ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ರೊಸಾರಿಯೊ ಕೆಥೆಡ್ರಲ್‌ನಲ್ಲಿ ಕ್ರಿಸ್ಮಸ್‌ ಹಬ್ಬದ ಬಲಿ ಪೂಜೆ ಅರ್ಪಿಸಿ ಸಂದೇಶ ನೀಡಿ, ಕ್ರೆçಸ್ತ ಪವಿತ್ರಗ್ರಂಥಗಳಲ್ಲಿ ದೇವರು ಕೋಪ, ದ್ವೇಷದ ಮಾತುಗಳನ್ನು ಎಲ್ಲಿಯೂ ಆಡಿಲ್ಲ. ಪ್ರೀತಿಯ ಮಾತುಗಳನ್ನೇ ಹೇಳುತ್ತಾ ಸಾಗಿದರು.

Advertisement

ಗೋದಲಿಯಲ್ಲಿ ಶ್ರೀಸಾಮಾನ್ಯರಂತೆ ಹುಟ್ಟಿದ ಯೇಸು ಜಗತ್ತಿನಲ್ಲಿ ತನ್ನ ಸರಳತೆಯ ಮೂಲಕ ಪ್ರೀತಿ, ಶಾಂತಿ, ನೆಮ್ಮದಿ ಜತೆಗೆ ಕ್ಷಮಿಸುವ ಗುಣವನ್ನು ಮೈಗೂಡಿಸಿಕೊಳ್ಳಲು ಸೂಚಿಸಿದರು. ಪ್ರೀತಿಗೆ ಹೆಚ್ಚು ಮಹತ್ವ ಕೊಡುವ ಮೂಲಕ ನಾವು ಸಮಾಜದಲ್ಲಿರುವ ನೆರೆಹೊರೆಯವರ ಜತೆಗೆ ಪ್ರೀತಿಯನ್ನು ಹಂಚುವ ಕೆಲಸ ಮಾಡಬೇಕು ಎಂದರು.

ಉಡುಪಿ: ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸುವಿನ ಜನ್ಮದಿನ ಕ್ರಿಸ್ಮಸ್‌ ಈವ್‌ ಹಬ್ಬವನ್ನು ಮಂಗಳವಾರ ಕ್ರೈಸ್ತ ಬಾಂಧವರು ಸಂಭ್ರಮದಿಂದ ಆಚರಿಸಿದರು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ| ಫಾ| ಡಾ| ಜೆರಾಲ್ಡ್ ಐಸಾಕ್‌ ಲೋಬೊ ಅವರು ಸಂಜೆಯ ಬಲಿಪೂಜೆಯನ್ನು ಕಲ್ಯಾಣಪುರ ಮಿಲಾಗ್ರಿಸ್‌ ಕೆಥೆಡ್ರಲ್‌ನಲ್ಲಿ ಅರ್ಪಿಸಿ ಹಬ್ಬದ ಸಂದೇಶ ನೀಡಿದರು.

ಕ್ರಿಸ್ತ ಜಯಂತಿ ಶಾಂತಿ ಮತ್ತು ಭರವಸೆಯ ಸಮಯವಾಗಿದ್ದು, ಬೆತ್ಲೆಹೇಮಿನ ದನದ ಕೊಟ್ಟಿಗೆಯಲ್ಲಿ ದೀನನಾಗಿ ಜನಿಸಿದ ಪ್ರಭು ಯೇಸು ವಿನ ಜನನ, ದೇವರು ನಮ್ಮ ಮೇಲಿರಿಸಿದ ಪ್ರೀತಿ ಸ್ಮರಣೆಯಾಗಿದೆ. ದ್ವೇಷ, ಕಲಹ ವಿಭಜನೆ ಹಾಗೂ ಪ್ರಾಕೃತಿಕ ವಿಕೋಪಗಳಿಂದ ನಲು ಗಿದ ಜಗತ್ತಿಗೆ ಕ್ರಿಸ್ತಜಯಂತಿಯ ಸಂದೇಶವು ದೇವರ ಅಪರಿಮಿತ ಪ್ರೀತಿ ಮತ್ತು ನಿರಂತರ ಪ್ರಸನ್ನತೆಯ ಪ್ರತೀಕವಾಗಿದೆ ಎಂದರು.

ಧರ್ಮಪ್ರಾಂತ್ಯದ ಶ್ರೇಷ್ಠಗುರು ಹಾಗೂ ಕಲ್ಯಾಣಪುರ ಮಿಲಾಗ್ರಿಸ್‌ ಕೆಥೆಡ್ರಲ್‌ ಪ್ರಧಾನ ಧರ್ಮಗುರು ಮೊನ್ಸಿಂಜೊರ್‌ ಫರ್ಡಿನಾಂಡ್‌ ಗೊನ್ಸಾಲ್ವಿಸ್‌, ಸಹಾಯಕ ಧರ್ಮ ಗುರು ವಂ| ಪ್ರದೀಪ್‌ ಕಾಡೋಜಾ, ವಂ| ಡಾ| ಜೆನ್ಸಿಲ್‌ ಆಳ್ವಾ, ಪಿಲಾರ್‌ ಸಭೆಯ ವಂ| ಮನೋಜ್‌ ಫುರ್ಟಾಡೊ, ವಂ| ಪರೇಲ್‌ ಫೆರ್ನಾಂಡಿಸ್‌, ಹೋಲಿ ಕ್ರಾಸ್‌ ಹೋಮ್‌ ಕಟಪಾಡಿ ಮುಖಸ್ಥರಾದ ವಂ| ರೋನ್ಸನ್‌ ಉಪಸ್ಥಿತರಿದ್ದರು.

ಜಿಲ್ಲೆಯ ಪ್ರಮುಖ ಚರ್ಚ್‌ಗಳಾದ ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾದಲ್ಲಿ ವಂ| ಆಲ್ಬನ್‌ ಡಿ’ಸೋಜಾ, ತೊಟ್ಟಂ ಸಂತ ಅನ್ನಮ್ಮ ಚರ್ಚ್‌ನಲ್ಲಿ ಧರ್ಮಗುರು ವಂ| ಡೆನಿಸ್‌ ಡೇಸಾ, ಸಾಸ್ತಾನ ಸಂತ ಅಂತೋನಿ ಚರ್ಚ್‌ ನಲ್ಲಿ ವಂ| ಸುನೀಲ್‌ ಡಿ’ ಸಿಲ್ವಾ, ಶೋಕ ಮಾತಾ ಚರ್ಚಿನಲ್ಲಿ ವಂ| ಚಾರ್ಲ್ಸ್‌ ಮಿನೇಜಸ್‌ ನೇತೃತ್ವದಲ್ಲಿ ವಿಶೇಷ ಬಲಿಪೂಜೆಗಳು ನಡೆದವು.

ಕ್ರಿಸ್ಮಸ್‌ ಸಂದೇಶ
ಕ್ರಿಸ್ತರ ಬೆಳಕು ನಮ್ಮ ಅಂಧಕಾರ ದೂರ ಮಾಡಲಿ
ದೇವರು ಮಾನವರಾಗಿ ಈ ಧರೆಯಲ್ಲಿ ಜನಿಸಿದ ಹಬ್ಬ ಕ್ರಿಸ್ಮಸ್‌. ದೇವರು ನಮ್ಮೊಡನೆ ಇದ್ದಾರೆಂಬ ಭಾವನೆಯಿಂದ ಈ ಕ್ರಿಸ್ತಜಯಂತಿಯನ್ನು ನಾವು ಸರ್ವರೊಂದಿಗೆ ಸಂತೋಷ, ಸಂಭ್ರಮದಿಂದ ಜಗತ್ತಿ ನಾದ್ಯಂತ ಆಚರಿಸುತ್ತೇವೆ. ದೇವರು ಲೋಕವನ್ನು ಎಷ್ಟು ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆ ಎರೆದರು. ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯಜೀವನ ಪಡೆಯಬೇಕೆಂಬುದೇ ದೇವರ ಉದ್ದೇಶ.ಪ್ರಸ್ತುತ ಪ್ರಪಂಚದಲ್ಲಿ ದ್ವೇಷ, ಹಿಂಸೆ, ಯುದ್ಧ, ಪ್ರಕೃತಿ ವಿಕೋಪ, ವಿಭಜನೆಗಳು ಹಿಂದೆಂದಿಗಿಂತ ಹೆಚ್ಚಾಗಿದೆ. ಯೇಸು ಜನಿಸಿದ ದನದ ಕೊಟ್ಟಿಗೆಯಲ್ಲಿ ಸ್ವರ್ಗದ ದೂತರು ಸಾರಿದ ಶಾಂತಿ, ಸಹೋದರತ್ವ, ಸಂಧಾನ, ಪ್ರೀತಿ ಮತ್ತು ಕ್ಷಮೆ ನಮ್ಮ ಸಮಾಜಕ್ಕೆ ಅಗತ್ಯವಾಗಿದೆ. ಈ ಕ್ರಿಸ್ಮಸ್‌ನಂದು ನಾವು ಅನುಭವಿಸಿದ ಪ್ರಭು ಯೇಸುವಿನ ದೈವಿ ಗುಣಗಳನ್ನು ಎಲ್ಲರಿಗೂ ಹಂಚೋಣ. ವಿವಿಧ ಕಷ್ಟಗಳಿಗೆ ಸಿಲುಕಿದವರ ಕಡೆಗೆ ಕೈಚಾಚಿ ಅವರ ಬಾಳಿಗೆ ಭರವಸೆಯ ಕಿರಣವಾಗೋಣ. ಕ್ರಿಸ್ತರ ಬೆಳಕು ನಮ್ಮ ಹೃದಯಗಳಲ್ಲಿ ಇರುವ ಅಂಧಕಾರವನ್ನು ಹೋಗಲಾಡಿಸಿ, ನಮ್ಮನ್ನು ಶಾಂತಿಯ ಸಾಧನವಾಗಿ ಮಾಡಲಿ. ಶಾಂತಿ, ಪ್ರೀತಿ ಮತ್ತು ಸೌಹಾರ್ದದ ನೆಲೆಗಳಲ್ಲಿ ಹೊಸ ಸಮಾಜವನ್ನು ನಿರ್ಮಿಸೋಣ. ಎಲ್ಲರಿಗೂ ಕ್ರಿಸ್ಮಸ್‌ ಹಾಗೂ ಹೊಸ ವರ್ಷದ ಶುಭಾಶಯಗಳು.
– ರೆ| ಫಾ| ಜೆರಾಲ್ಡ್‌ ಐಸಾಕ್‌ ಲೋಬೊ, ಬಿಷಪ್‌, ಉಡುಪಿ

ಯೇಸುಕ್ರಿಸ್ತ ಎಲ್ಲರಲ್ಲೂ ಶಾಂತಿ, ಏಕತೆ ತರಲಿ
ಯೇಸುಕ್ರಿಸ್ತನ ಜನ್ಮ ದಿನವನ್ನು ಕ್ರೈಸ್ತರು ಬಹು ಸಂತೋಷ, ಸಡಗರದಿಂದ ಪರಸ್ಪರ ಶುಭಕೋರಿ, ಸಿಹಿ ತಿನಿಸಿಗಳನ್ನು ಹಂಚಿ ಸಂಭ್ರಮಿಸುವುದುಂಟು. ಕ್ರಿಸ್ಮಸ್‌ ಹಬ್ಬದಂದು ಕೊಡುಗೆಯನ್ನು ಹಂಚಿಕೊಳ್ಳುವ ಮತ್ತು ಇತರರಿಗೆ ಕೊಡುವ ಸಂಪ್ರದಾಯವಿದೆ. ಇದು ದೇವರು ಮಾನವರಿಗಾಗಿ ತನ್ನ ಮಗನಾದ ಯೇಸುಕ್ರಿಸ್ತನನ್ನು ದಾನವಾಗಿ, ಕೊಡುಗೆಯಾಗಿ ಈ ಲೋಕಕ್ಕೆ ನೀಡಿದ್ದಾನೆ ಎಂಬ ನಂಬಿಕೆಯಲ್ಲಿ ಕೊಡುಗೆಯ ಹಬ್ಬವಾಗಿ ಆಚರಿಸುವುದು ವಾಡಿಕೆಯಾಗಿದೆ. ಯೇಸುಕ್ರಿಸ್ತನ ಜನನಕ್ಕೆ ದೇವರ ನಿಯೋಗಿಕ ಉದ್ದೇಶವಿದೆ. ಬಡವರಿಗೆ ಶುಭವರ್ತಮಾನ, ಸೆರೆಯವರಿಗೆ ಬಿಡುಗಡೆ, ಕುರುಡರಿಗೆ ಕಣ್ಣು ಬರುವದನ್ನು, ಮನಮುರಿದವರಿಗೆ ಬಿಡಿಸಿ ಕಳುಹಿಸುವುದು, ದೇವರ ಶುಭವರ್ಷವನ್ನು ಪ್ರಚುರಪಡಿಸುವುದು ನಿಯೋಗಿಕ ಉದ್ದೇಶವಾಗಿದೆ. ಮಾನವನಾಗಿ ಜನಿಸಿದ ಯೇಸು ಮಾನವರ ಮಧ್ಯೆ ಮಾನವತೆ ಕಾಪಾಡಿಕೊಂಡು ಜೀವಿಸಿ ತೋರಿಸಿದ್ದಾನೆ. ಯೇಸುಕ್ರಿಸ್ತನ ಬೋಧನೆಯ ಬೆಳಕು ಮತ್ತೂಮೆ ಜನಿಸಿ ಲೋಕದಲ್ಲಿ ಪ್ರಕಾಶಿಸಲಿ. ಎಲ್ಲರಲ್ಲೂ ಸಮಾಧಾನ, ಶಾಂತಿ, ಏಕತೆ ತರಲಿ. ನೂತನ ವರ್ಷವು ಪರಸ್ಪರ ಗೌರವಿಸುವ ಹರ್ಷದ ವರ್ಷವಾಗಲಿ, ದೇವರು ಎಲ್ಲರನ್ನೂ ಆಶೀರ್ವದಿಸಲಿ.
-ರೆ|ಫಾ| ಹೇಮಚಂದ್ರ ಕುಮಾರ್‌, ಬಿಷಪ್‌,
ಚರ್ಚ್‌ ಆಫ್‌ ಸೌತ್‌ ಇಂಡಿಯಾ, ಕರ್ನಾಟಕ ದಕ್ಷಿಣ ಪ್ರಾಂತ್ಯ ಸಭೆ

Advertisement

Udayavani is now on Telegram. Click here to join our channel and stay updated with the latest news.

Next