Advertisement
ಆಧ್ಯಾತ್ಮಿಕ ಸಿದ್ಧತೆಕ್ರಿಸ್ಮಸ್ ಕ್ರೈಸ್ತರ ಅತಿ ದೊಡ್ಡ ಹಬ್ಬ. ಕ್ರೈಸ್ತರು ಆಚರಿಸುವ ಪ್ರತಿಯೊಂದು ಹಬ್ಬದಲ್ಲೂ ಆಧ್ಯಾತ್ಮದ ಚಿಂತನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಕ್ರಿಸ್ಮಸ್ ಆಚರಣೆ ಪ್ರಯುಕ್ತ ನಾಲ್ಕು ವಾರಗಳ ಕಾಲ ಆಧ್ಯಾತ್ಮಿಕ ಸಿದ್ಧತೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಅದ್ವಂತ್ ಎಂದು ಕರೆಯುವ ಈ ಆಧ್ಯಾತ್ಮಿಕ ಪ್ರಕ್ರಿಯೆಯಡಿ ಆಧ್ಯಾತ್ಮಿಕ ಶುದ್ದಿ, ಪ್ರಾರ್ಥನೆ, ಸತ್ಕಾರ್ಯ ಕೈಗೊಳ್ಳಲಾಗುತ್ತದೆ. ಅದ್ವಂತ್ ಅಂದರೆ ಆಗಮನ ಅಥವಾ ನಿರೀಕ್ಷೆಯ ಕಾಲವೆಂದರ್ಥ.
ಡಿ.24ರ ರಾತ್ರಿ ವಿಶೇಷ ಪೂಜೆ, ಕ್ರಿಸ್ಮಸ್ ನಕ್ಷತ್ರ, ಕ್ರಿಸ್ಮಸ್ ಕೇಕ್, ಕ್ರಿಸ್ಮಸ್ ಮರ, ಕ್ರಿಸ್ಮಸ್ ಶುಭಾಶಯ ಪತ್ರ, ಕ್ರಿಸ್ಮಸ್ ತಾತ ಸಾಂತಾಕ್ಲಾಸ್ ಆಗಮನ ಮತ್ತು ಅವರ ಉಡುಗೊರೆಗಳು, ಕ್ರಿಸ್ಮಸ್ ಕ್ಯಾರಲ್ ಗೀತೆಗಳು, ಕ್ರಿಸ್ಮಸ್ ವಿಶೇಷ ತಿನಿಸುಗಳಾದ ಕುಸ್ವಾರ್, ಯೇಸುವಿನ ಜನ್ಮ ಸಂದೇಶ ಸಾರುವ ಪ್ರತಿಕೃತಿ ರಚನೆ, ಕ್ರಿಸ್ಮಸ್ ಕ್ರಿಬ್ ಅಥವಾ ಗೋದಲಿ ಇವೆ ಮೊದಲಾದವು ಕ್ರಿಸ್ಮಸ್ ಹಬ್ಬದ ಆಚರಣೆಯ ಪ್ರಮುಖ ಅಂಗಗಳಾಗಿವೆ. ಇವೆಲ್ಲದರ ಸಲುವಾಗಿ ಜನ ಸಂಭ್ರಮದಿಂದ ಓಡಾಡುತ್ತಿದ್ದಾರೆ. ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಚರ್ಚ್‌ಗಳನ್ನು ದೀಪಾಲಂಕಾರಗೊಳಿಸಲಾಗುತ್ತಿದೆ. ಮನೆಗಳ ಎದುರು ಕ್ರಿಸ್ಮಸ್ ಗೂಡುದೀಪ ತೂಗಲಾರಂಭಿಸಿದೆ. ರಜೆಗಾಗಿ ಊರಿಗೆ ಬರುವ ಬಂಧುಗಳ ಆಗಮನಕ್ಕೆ ಕಾಯಲಾಗುತ್ತಿದೆ. ಹೊಸವರ್ಷದ ಸಡಗರವೂ, ಕ್ರಿಸ್ಮಸ್ ಸಂಭ್ರಮವೂ ಸದಾ ಜತೆಜತೆಗೇ ಕಾಣಿಸಿಕೊಳ್ಳುವ ಆಚರಣೆಗಳ ಸಾಲಿನಲ್ಲಿರುವ ಕಾರಣ ಬಂಧು ಬಳಗ ಸ್ನೇಹಿತರಿಗೆ ಒಟ್ಟಾಗಲು ಇದು ಸಕಾಲವಾಗಿದೆ.