ಮೂಡಬಿದಿರೆ: ವಿಶ್ವದ ಶಾಂತಿಯ ಪ್ರತೀಕವಾಗಿರುವ ಕ್ರಿಸ್ಮಸ್ ಹಬ್ಬವು ಪ್ರತಿಯೊಬ್ಬರಿಗೆ ಒಳಿತನ್ನು ಉಂಟು ಮಾಡಲಿ ಎಂದು ಮಂಗಳೂರು ಧರ್ಮ ಪ್ರಾಂತದ ಜ್ಯುಡಿಷಿಯಲ್ ವಿಕಾರ್ ವಂ. ವೋಲ್ಟರ್ ಡಿ’ಮೆಲ್ಲೊ ನುಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನುಡಿಸಿರಿ ವೇದಿಕೆಯಲ್ಲಿ ಬುಧವಾರ ರಾತ್ರಿ ನಡೆದ ‘ಆಳ್ವಾಸ್ ಕ್ರಿಸ್ಮಸ್ 2017 ಕಾರ್ಯಕ್ರಮದಲ್ಲಿ ಅವರು ಆಶೀರ್ವಚನವಿತ್ತರು.
ಬೆಳ್ತಂಗಡಿಯ ಬಿಷಪ್ ಲೋರೆನ್ಸ್ ಮುಕ್ಕುಯಿ ಕ್ರಿಸ್ಮಸ್ ಕೇಕ್ ಕತ್ತರಿಸಿ ಆಶೀರ್ವಚನ ನೀಡಿದರು. ಒಳಿತು ಕೆಡುಕುಗಳ ನಡುವೆ ನಿಂತ ನಾವು ನಮ್ಮ ವಿವೇಚನೆಯನ್ನು ಬಳಸಿಕೊಂಡು ಬದುಕಬೇಕು ಎಂದು ಅವರು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ‘ಪ್ರೀತಿಯೇ ಮಾನವ ಕುಲದ ಆಧಾರವಾಗಿದೆ. ಆದರೆ, ಸಾಮರಸ್ಯದ ಕೊರತೆ, ಮತಗಳ ಸಾರವನ್ನು ಅರ್ಥಮಾಡಿಕೊಳ್ಳದ ಮನಸ್ಥಿತಿ ಸಮಾಜದಲ್ಲಿ ವ್ಯಕ್ತಿ, ವ್ಯಕ್ತಿಗಳ ನಡುವೆ ಕಂದಕ ಉಂಟಾಗಲು ಕಾರಣವಾಗಿದೆ. ಅಹಿಂಸೆ, ಸತ್ಯಶೋಧನೆಯಂತಹ ಸದ್ವಿಚಾರಗಳು ಎಲ್ಲ ಮತಗಳಲ್ಲಿರುವ ಧರ್ಮಸಾರ. ಈ ಬಗ್ಗೆ ಇಂದಿನ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವಾಗಬೇಕು ಎಂದರು.
ಕೊಂಕಣಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ , ಮೂಲ್ಕಿಯ ವಂ. ಎಫ್.ಎಕ್ಸ್ ಗೋಮ್ಸ್, ವಂ.ಎವ್ಜನ್ ಮುಖ್ಯ ಅತಿಥಿಯಾಗಿದ್ದರು. ಆಳ್ವಾಸ್‌ನ ಪ್ರವೇಶಾತಿ ವಿಭಾಗದ ಅಧಿಕಾರಿ ಎಲ್. ಜೆ. ಫೆರ್ನಾಂಡಿಸ್ ಸ್ವಾಗತಿಸಿದರು .
ಸಾಂಸ್ಕೃತಿಕ ಸಂಭ್ರಮ
ಕ್ರಿಸ್ಮಸ್ ಸಂಭ್ರಮದ ಪ್ರಯುಕ್ತ ವಿದ್ಯಾಗಿರಿಯಲ್ಲಿರುವ ನುಡಿಸಿರಿ ವೇದಿಕೆಯನ್ನು ನಕ್ಷತ್ರಗಳು, ವಿಭಿನ್ನ ರೀತಿಯ ವಿದ್ಯುತ್ ದೀಪಾಲಂಕಾರ, ಅಲಂಕಾರಿಕ ವಸ್ತುಗಳಿಂದ ಶೃಂಗರಿಸಲಾಗಿತ್ತು. ಆಳ್ವಾಸ್ ವಿದ್ಯಾರ್ಥಿಗಳು ಹಾಗೂ ಮಂಗಳೂರಿನ ಬ್ಲೂ ಏಜೆಂಲ್ಸ್ ತಂಡದಿಂದ ಕ್ರಿಸ್ಮಸ್ ವಿಶೇಷ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸಮ್ಮಾನ
ಮಂಗಳೂರಿನ ಮದರ್ ಥೆರೆಸಾ ಎಂದೇ ಹೆಸರಾಗಿರುವ, ‘ವೈಟ್ ಡವ್ಸ್ ‘ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಕೊರಿನ್ ರಸ್ಕಿನ್ಹ ಅವರ ಸಮಾಜಸೇವೆಯನ್ನು ಗುರುತಿಸಿ ಆಳ್ವಾಸ್ ಸಂಸ್ಥೆಯ ಪರವಾಗಿ ಅವರನ್ನು ಡಾ| ಮೋಹನ ಆಳ್ವರು ಸಮ್ಮಾನಿಸಿದರು.