ವಾಡಿ (ಚಿತ್ತಾಪುರ): ಕ್ರಿಸ್ತ ಜಯಂತಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಪಟ್ಟಣದ ಸಂತ ಅಂಬ್ರೂಸ್ ಕಾನ್ವೆಂಟ್ ಶಾಲೆಯಲ್ಲಿ ಗುರುವಾರ ಮಕ್ಕಳ ಸಂಭ್ರಮ ಮನೆಮಾಡಿತ್ತು.
ಯೇಸು ಕ್ರಿಸ್ತನ ಜನನ ಪ್ರಸಂಗವನ್ನು ವಿದ್ಯಾರ್ಥಿಗಳು ಕಿರುನಾಟಕದ ಮೂಲಕ ಅನಾವರಣಗೊಳಿಸಿದರು. ಯೇಸುವಿನ ತಂದೆ ಜೋಸೆಫ್, ತಾಯಿ ಮರಿಯಳು ದೇವರ ಪ್ರತಿರೂಪವಾದ ಮಗುವಿಗೆ ಜನ್ಮ ನೀಡಿದ ಗಳಿಗೆಯನ್ನು ಅಭಿನಯದ ಮೂಲಕ ಜೀವನ ಕಥೆ ಪ್ರದರ್ಶಿಸಿದರು.
ಈ ವೇಳೆ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕ್ರಿಸ್ಮಸ್ ಹಾಡಿಗೆ ಹೆಜ್ಜೆಹಾಕಿ ಪ್ರೇಕ್ಷಕರ ಗಮನ ಸೆಳೆದರು. ದೇವದೂತರು ಮತ್ತು ಸಂತಕ್ಲೋಸ್ ಪಾತ್ರಗಳು ಕಾರ್ಯಕ್ರಮದ ಆಕರ್ಷಣೆಯಾಗಿದ್ದವು.
ಕ್ರೈಸ್ತ ಧರ್ಮ ಪ್ರಚಾರಕ ಎಸ್.ಆರ್.ಆನಂದ ಕಾರ್ಯಕ್ರಮ ಉದ್ಘಾಟಿಸಿ ಕ್ರಿಸ್ಮಸ್ ಸಂದೇಶ ನೀಡಿದರು. ಬ್ರದರ್ ಜಾರ್ಜ್ ಪ್ರಕಾಶ ಯೇಸುವಿನ ಜನನದ ಉದ್ದೇಶ ಹೇಳಿದರು.
ಸಂತ ಅಂಬ್ರೂಸ್ ಕಾನ್ವೆಂಟ್ ಶಾಲೆಯ ಮುಖ್ಯಶಿಕ್ಷಕರಾದ ಸಿಸ್ಟರ್ ಗ್ರೇಸಿ, ಸಿಸ್ಟರ್ ತೆಕಲಾಮೇರಿ, ಶಿಕ್ಷಕರಾದ ಇಮಾನ್ವೆಲ್, ಡಾನ್ ಬಾಸ್ಕೋ, ಪ್ರಕಾಶ ಸೇರಿದಂತೆ ಸಿಬಂದಿಗಳು ಮತ್ತು ಶಿಕ್ಷಕರು, ಪೋಷಕರು ಪಾಲ್ಗೊಂಡಿದ್ದರು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.91 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.