Advertisement

ಲವ್‌ ಜೆಹಾದ್‌ ಸತ್ಯ: ಕೇರಳದ ಕೆಥೋಲಿಕ್‌ ಚರ್ಚ್‌ನಿಂದ ಹೇಳಿಕೆ

10:00 AM Jan 17, 2020 | sudhir |

ಕೊಚ್ಚಿ: ದೇಶಾದ್ಯಂತ ಹಿಂದೂ ಸಂಘಟನೆಗಳು ಲವ್‌ ಜೆಹಾದ್‌ ಬಗ್ಗೆ ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದವು. ಈಗ ಕೇರಳದ ಕೆಥೋಲಿಕ್‌ ಚರ್ಚ್‌ ಕೂಡ ಆ ಬಗ್ಗೆ ಧ್ವನಿ ಎತ್ತಿದೆ. “ಲವ್‌ ಜೆಹಾದ್‌ ಒಂದು ವಾಸ್ತವ ಮತ್ತು ಸತ್ಯ’ ಎಂದು ಕೆಥೋಲಿಕ್‌ ಬಿಷಪ್‌ಗ್ಳ ಒಕ್ಕೂಟ ಸೈರೋ- ಮಲಬಾರ್‌ ಚರ್ಚ್‌ ಪ್ರತಿ ಪಾದಿಸಿದೆ. ವಿಶ್ವ ಹಿಂದೂ ಪರಿಷತ್‌ ಈ ಅಂಶವನ್ನು ಸ್ವಾಗತಿಸಿದ್ದರೆ, ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ ತಿರಸ್ಕರಿಸಿದೆ.

Advertisement

ಕೆಥೋಲಿಕ್‌ ಬಿಷಪ್‌ಗ್ಳ ಒಕ್ಕೂಟ ಸಿಂಡೋ ಆಫ್ ಸೈರೋ-ಮಲಬಾರ್‌ ಚರ್ಚ್‌ ಕಾರ್ಡಿನಲ್‌ ಜಾರ್ಜ್‌ ಅಲಂಚೇರಿ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ “ಕೆಥೋಲಿಕ್‌ ಸಮುದಾಯದ ಯುವತಿಯರನ್ನು ಉಗ್ರ ಸಂಘಟನೆ ಐಸಿಸ್‌ಗೆ ಸೇರ್ಪಡೆಯಾಗುವಂತೆ ಮನವೊಲಿಸುವ ಜಾಲ ಹೆಚ್ಚುತ್ತಿದೆ. ಈ ಮೂಲಕ ಉಗ್ರ ಕೃತ್ಯಗಳಿಗೆ ನೆರವು ನೀಡುವಂತೆ ಕುಮ್ಮಕ್ಕು ನೀಡಲಾಗುತ್ತದೆ. ಈ ವಿಷಯವನ್ನು ಕೇರಳ ಪೊಲೀಸ್‌ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ’ ಎಂದು ಆರೋಪಿಸಿದೆ.

ಕೇರಳದಲ್ಲಿ ಲವ್‌ ಜೆಹಾದ್‌ ಹಿನ್ನೆಲೆಯಲ್ಲಿ ಕ್ರಿಶ್ಚಿಯನ್‌ ಯುವತಿಯರನ್ನು ಹತ್ಯೆ ಮಾಡಲಾಗಿದೆ ಎಂದು ಚರ್ಚ್‌ ಆರೋಪಿಸಿದೆ. ಹೆಚ್ಚುತ್ತಿರುವ ಲವ್‌ ಜೆಹಾದ್‌ ಕೇರಳದ ವಿವಿಧ ವರ್ಗಗಳ ನಡುವೆ ವೈಷಮ್ಯ ಹೆಚ್ಚಿಸಲು ಕಾರಣವಾಗಲಿದೆ ಎಂದು ಅದು ಹೇಳಿದೆ. ಲವ್‌ ಜೆಹಾದ್‌ ಕೇರಳದಲ್ಲಿ ಇದೆ ಎನ್ನುವ ಅಂಶ ಕಲ್ಪನೆಯಲ್ಲ, ವಾಸ್ತವ. ಕ್ರಿಶ್ಚಿಯನ್‌ ಸಮುದಾಯದ ಯುವತಿಯರನ್ನು ಮೋಸಗೊಳಿಸಿ ಸೆಳೆಯುವ ಜಾಲ ಸಕ್ರಿಯವಾಗಿದೆ ಎಂದೂ ಹೇಳಿದೆ.

ಈ ಆರೋಪ ತಳ್ಳಿಹಾಕಿರುವ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ, ಇದೊಂದು ನಿರಾಧಾರ ಆರೋಪ. ಜತೆಗೆ ಆರೋಪ ಕೇಳಿಬಂದಿರುವ ಸಮಯ ಕೂಡ ಅನುಮಾನ ಹುಟ್ಟಿಸುತ್ತಿದೆ ಎಂದು ಹೇಳಿದೆ.

ವಿಎಚ್‌ಪಿ ಸ್ವಾಗತ
ಚರ್ಚ್‌ನ ನಿಲುವನ್ನು ಸ್ವಾಗತಿಸಿರುವ ಪ್ರಮುಖ ಹಿಂದೂ ಸಂಘಟನೆ ವಿಶ್ವ ಹಿಂದೂ ಪರಿಷತ್‌, ಕೇರಳದಲ್ಲಿ ಬೇರುಬಿಟ್ಟಿರುವ ಲವ್‌ ಜೆಹಾದ್‌ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಕೈ ಜೋಡಿಸುವಂತೆ ಕರೆ ನೀಡಿದೆ. ವಿಎಚ್‌ಪಿಯ ಕೇರಳ ಘಟಕದ ಮಾಜಿ ಅಧ್ಯಕ್ಷ ಎಸ್‌ಜೆಆರ್‌ ಸುಮಾರ್‌ ಮಾತನಾಡಿ ಈ ಹಿಂದೆ ಪರಿಸ್ಥಿತಿಯ ಬಗ್ಗೆ ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿದ್ದಾಗ ಯಾರೂ ಕೇಳಿಸಿಕೊಳ್ಳಲಿಲ್ಲ. ಈಗಲಾದರೂ ಚರ್ಚ್‌ ವತಿಯಿಂದ ಈ ಬಗ್ಗೆ ಧ್ವನಿ ಎತ್ತಿದ್ದು ಸರಿಯಾಗಿಯೇ ಇದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next