ಮುಂಬಯಿ: ಡ್ರಗ್ಸ್ ಸಾಗಾಟ ಪ್ರಕರಣದ ಆರೋಪದ ಮೇಲೆ ಬಾಲಿವುಡ್ ನಟಿಯೊಬ್ಬರನ್ನು ಶಾರ್ಜಾ ಏರ್ ಪೋರ್ಟ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಾಲಿವುಡ್ ನಲ್ಲಿ ʼಬಟ್ಲಾ ಹೌಸ್ʼ , ʼಸಡಕ್ 2ʼ ಸಿನಿಮಾದಲ್ಲಿ ನಟಿಸಿರುವ ನಟಿ ಕ್ರಿಸನ್ ಪಿರೇರಾ ಬಂಧಿತ ನಟಿ.
ನಟಿಯ ಬಂಧನದ ಬಗ್ಗೆ ಅವರ ಕುಟುಂಬ ಮಾಹಿತಿ ನೀಡಿದ್ದು, “ನನ್ನ ಸಹೋದರಿಯನ್ನು ಡ್ರಗ್ಸ್ ಸಾಗಾಟದ ಆರೋಪದ ಮೇಲೆ ಬಂಧಿಸಲಾಗಿದೆ. ಕಳೆದ 2 ವಾರದಿಂದ ನಮಗೆ ಮಾನಸಿಕವಾಗಿ ಕಿರುಕುಳ ಆಗುತ್ತಿದೆ. ಅವಳನ್ನು ಈ ಜಾಲದಲ್ಲಿ ಸಿಲುಕಿಸಲಾಗಿದೆ. ಸಹೋದರಿ ಶಾರ್ಜಾ ತಲುಪಿದ ಬಳಿಕ ಆಕೆಯೊಂದಿಗೆ ನಾವು ಸಂಪರ್ಕ ಮಾಡಲು ಆಗುತ್ತಿಲ್ಲ. ಆಕೆಯನ್ನು ಬಂಧಿಸಿ ಶಾರ್ಜಾ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ ಎಂದು 72 ಗಂಟೆಗಳ ನಂತರ ಭಾರತೀಯ ರಾಯಭಾರಿ ಕಚೇರಿ ನಮಗೆ ತಿಳಿಸಿದೆ”ಎಂದು ನಟಿಯ ಸಹೋದರ ಕೆವಿನ್ ಹೇಳಿದ್ದಾರೆ.
ಇದನ್ನೂ ಓದಿ: IPL 2023: ಚೆನ್ನೈ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ದಂಡ ವಿಧಿಸಿದ ಐಪಿಎಲ್ ಮಂಡಳಿ
ಈ ಬಗ್ಗೆ ನಟಿಯ ತಾಯಿ ರವಿ ಎಂಬಾತನ ಮೇಲೆ ಆರೋಪ ಮಾಡಿದ್ದಾರೆ. ರವಿ ಎಂಬಾತ ಅಂತಾರಾಷ್ಟ್ರೀಯ ವೆಬ್ ಸಿರೀಸ್ ನಲ್ಲಿ ನಟನೆಗೆ ಆಫರ್ ನೀಡದ್ದ. ಇದಾದ ಬಳಿಕ ಹಲವು ವೆಬ್ ಸಿರೀಸ್ ವಿಚಾರವಾಗಿ ಭೇಟಿಯಾಗಿದ್ದಾರೆ. ನಂತರ ದುಬೈನಲ್ಲಿ ಅಡಿಷನ್ ಅಂತಿಮವಾಗಿದೆ. ಏ.1 ರಂದು ದುಬೈ ಹೋಗುವ ಮುನ್ನ ಕಾಫಿ ಶಾಪ್ ವೊಂದಕ್ಕೆ ಕರೆದಿದ್ದಾರೆ. ಆ ಬಳಿಕ ಆಕೆಗೆ ಇದು ಅಡಿಷನ್ ನ ಭಾಗ ತೆಗೆದುಕೊಂಡು ಹೋಗಿ ಎಂದು ಟ್ರೋಫಿಯೊಂದನ್ನು ನೀಡಿದ್ದಾರೆ. ಆ ಬಳಿಕ ನಟಿ ಮುಂಬೈ ಏರ್ ಪೋರ್ಟ್ ಮೂಲಕ ದುಬೈಗೆ ತೆರಳಿದ್ದಾರೆ. ಶಾರ್ಜಾದ ಏರ್ ಪೋರ್ಟ್ ಅಧಿಕಾರಿಗಳು ಆಕೆಯ ಬಳಿಯಿದ್ದ ಟ್ರೋಫಿಯನ್ನು ಪರಿಶೀಲಿಸಿದ್ದಾರೆ. ಅದರೊಳಗೆ ಡ್ರಗ್ಸ್ ಇರುವುದು ಪತ್ತೆಯಾಗಿದೆ. ನಂತರ ಆಕೆಯನ್ನು ಡ್ರಗ್ಸ್ ಸಾಗಾಟದ ಆರೋಪದ ಮೇಲೆ ಬಂಧಿಸಲಾಗಿದೆ. ಈ ವಿಚಾರವನ್ನು ಭಾರತೀಯ ರಾಯಭಾರಿ ಕಚೇರಿ ಏ.10 ರಂದು ನಮಗೆ ಹೇಳಿದೆ ಎಂದು ನಟಿಯ ತಾಯಿ ಹೇಳಿದ್ದಾರೆ.
ಶಾರ್ಜಾದಿಂದ ಸರಿಯಾದ ಮಾಹಿತಿ ಬಾರದ ಕಾರಣ ಇಲ್ಲಿನ ಪೊಲೀಸರು ದೂರನ್ನು ದಾಖಲಿಸುತ್ತಿಲ್ಲ ಎಂದು ಕುಟುಂಬದವರು ಹೇಳುತ್ತಾರೆ.