ಕೊಲಂಬೊ: ಕೋವಿಡ್-19 ಕಂಟಕ ನಿವಾರಿಸಿಕೊಂಡು ಇನ್ನೇನು ಆರಂಭವಾಗಬೇಕೆನ್ನುವ ಹಂತದಲ್ಲೇ “ಲಂಕಾ ಪ್ರೀಮಿಯರ್ ಲೀಗ್’ಗೆ (ಎಲ್‌ಪಿಎಲ್) ಆಘಾತವೊಂದು ಎದುರಾಗಿದೆ. ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಈ ಕೂಟದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಜತೆಗೆ ಇಂಗ್ಲೆಂಡಿನ ಪೇಸ್ ಬೌಲರ್ ಲಿಯಮ್ ಪ್ಲಂಕೆಟ್ ಮತ್ತು ಪಾಕಿಸ್ಥಾನದ ಸರ್ಫರಾಜ್ ಅಹ್ಮದ್ ಕೂಡ ಕೂಟದಿಂದ ಬೇರ್ಪಡುತ್ತಿದ್ದಾರೆ. ಲಂಕನ್ ಸೂಪರ್ ಸ್ಟಾರ್ ಲಸಿತ್ ಮಾಲಿಂಗ ಕೂಡಾ ಕೂಟದಿಂದ ಹೊರಬಂದಿದ್ದಾರೆ.
ಗೇಲ್ ಮತ್ತು ಪ್ಲಂಕೆಟ್ “ಕ್ಯಾಂಡಿ ಟಸ್ಕರ್’ ತಂಡದ ಸದಸ್ಯರಾಗಿದ್ದು, ಅವರು ಹಿಂದೆ ಸರಿದಿರುವುದನ್ನು ಫ್ರಾಂಚೈಸಿ ಪ್ರಕಟನೆಯಲ್ಲಿ ತಿಳಿಸಿದೆ. ಮೊದಲು ಗೇಲ್ ಆಡುವುದಿಲ್ಲ ಎಂದು ಟ್ವೀಟ್ ಮಾಡಿದ ಫ್ರಾಂಚೈಸಿ, ಸ್ವಲ್ಪವೇ ಹೊತ್ತಿನಲ್ಲಿ ಇನ್ನೊಂದು ಟ್ವೀಟ್ ಮಾಡಿ ಪ್ಲಂಕೆಟ್ ಕೂಡ ಭಾಗವಹಿಸುವುದಿಲ್ಲ ಎಂಬುದಾಗಿ ತಿಳಿಸಿತು. ಆದರೆ ಇದಕ್ಕೆ ನಿರ್ದಿಷ್ಟ ಕಾರಣವನ್ನು ಅದು ನೀಡಿಲ್ಲ.
ಇದಕ್ಕೂ ಮೊದಲು ಸರ್ಫರಾಜ್ ಅಹ್ಮದ್ ಕೂಡ ಹಿಂದೆ ಸರಿದಿದ್ದರು. ಅವರಿಗೆ ಗಾಲೆ ಗ್ಲೆàಡಿಯೇಟರ್ ತಂಡದ ನಾಯಕತ್ವ ನೀಡಲಾಗಿತ್ತು. ಕ್ಯಾಂಡಿ ಟಸ್ಕರ್ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸಹೋದರ ಸೊಹೈಲ್ ಖಾನ್ ಅವರ ಮಾಲಕತ್ವ ಹೊಂದಿದ್ದು, ಲಂಕೆಯ ಮಾಜಿ ಆಟಗಾರ ಹಶಾನ್ ತಿಲಕರತ್ನೆ ಕೋಚ್ ಆಗಿದ್ದಾರೆ.
ನ. 26ರಿಂದ ಆರಂಭ
ಚೊಚ್ಚಲ ಎಲ್‌ಪಿಎಲ್ ನ. 26ರಂದು ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಕೊಲಂಬೊ ಕಿಂಗ್ಸ್-ಕ್ಯಾಂಡಿ ಟಸ್ಕರ್ ಎದುರಾಗಲಿವೆ. ಒಟ್ಟು 5 ತಂಡಗಳು ಇದರಲ್ಲಿ ಭಾಗವಹಿಸುತ್ತಿದ್ದು, ಎಲ್ಲ ಪಂದ್ಯಗಳು ಹಂಬಂತೋಟ ಅಂಗಳದಲ್ಲಿ ನಡೆಯಲಿವೆ. ಡಿ. 16ರಂದು ಫೈನಲ್ ಏರ್ಪಡಲಿದೆ.