Advertisement
“ಗೋ ಬ್ಯಾಕ್ ಶೋಭಾ’ ಅಭಿಯಾನದ ಹಿನ್ನೆಲೆಯಲ್ಲಿ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳೆರಡರಲ್ಲೂ ತೀವ್ರ ಮುಜುಗರ ಅನುಭವಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರನ್ನು ಕೊನೆ ಕ್ಷಣದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ವರ್ಗಾಯಿಸುವ ಮಹತ್ವದ ನಿರ್ಧಾರವನ್ನು ಬಿಜೆಪಿ ವರಿಷ್ಠರು ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಇಲ್ಲಿನ ಹಾಲಿ ಸಂಸದ ಡಿ.ವಿ.ಸದಾನಂದ ಗೌಡ ಬಹುತೇಕ ರೇಸ್‌ನಿಂದ ಹೊರಗುಳಿದಿದ್ದಾರೆ. ಶೋಭಾಗೆ ಟಿಕೆಟ್ ನೀಡಲೇಬೇಕೆಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದರು ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಯ ನಡುವೆ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡ ಕ್ಷೇತ್ರ ಕಳೆದುಕೊಳ್ಳುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ನಳಿನ್ ಬದಲಿಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ| ವೈ.ಭರತ್ ಶೆಟ್ಟಿ ಅಥವಾ ಕ್ಯಾಪ್ಟನ್ ಬೃಜೇಶ್ ಚೌಟ ಅವರಿಗೆ ಟಿಕೆಟ್ ಲಭಿಸುವ ಸಾಧ್ಯತೆ ನಿಚ್ಚಳವಾಗಿದೆ. ಅಭ್ಯರ್ಥಿ ಬದಲಾವಣೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಸರಿ ಪಾಳಯದಲ್ಲಿ ಸೃಷ್ಟಿಯಾಗಿದ್ದ ಭಿನ್ನಮತ ಶಮನಕ್ಕೆ ಪಕ್ಷ ಮುಂದಾಗಿದೆ.
Related Articles
ಉತ್ತರಕನ್ನಡ (ಕೆನರಾ) ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರೆಂಬುದು ಮಾತ್ರ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಸೋಮವಾರ ದಿಲ್ಲಿಯಲ್ಲಿ ಪ್ರಧಾನಿ ಉಪಸ್ಥಿತಿಯಲ್ಲಿ ನಡೆದ ಸಿಇಸಿ ಸಭೆಯಲ್ಲಿ ಈ ಕ್ಷೇತ್ರದ ಅಭ್ಯರ್ಥಿ ವಿಚಾರವನ್ನು ಬಾಕಿ ಉಳಿಸಲಾಗಿದೆ. ಸಂಘದ ಹಿರಿಯರ ಜತೆಗೆ ಚರ್ಚೆ ನಡೆಸಿಯೇ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಬಹುತೇಕ ಬ್ರಾಹ್ಮಣ ಸಮುದಾಯದ ವ್ಯಕ್ತಿ ಅಭ್ಯರ್ಥಿಯಾಗಲಿದ್ದಾರೆ. ಈ ಮೂಲಕ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪ್ರಬಲ ಮೂರು ಸಮುದಾಯಗಳನ್ನು ಸಮತೋಲನಗೊಳಿಸಲು ಬಿಜೆಪಿ ಮುಂದಾಗಿದೆ.
Advertisement
ಬಿಜೆಪಿ ಮೂಲಗಳ ಪ್ರಕಾರ ಹಾಲಿ ಸಂಸದ ಅನಂತಕುಮಾರ್ ಹೆಗಡೆಯವರಿಗೆ ಟಿಕೆಟ್ ಕೊಟ್ಟರೆ ಗೆಲ್ಲುವುದಕ್ಕೆ ಸಮಸ್ಯೆಯಿಲ್ಲ. ಎಂದಿನಂತೆ ಭಾರೀ ಅಂತರದಿಂದ ಅವರು ಗೆಲ್ಲುತ್ತಾರೆಂಬ ವರದಿಯನ್ನು ವರಿಷ್ಠರು ಪಡೆದುಕೊಂಡಿದ್ದಾರೆ. ಆದರೆ ಅವರ ಕೆಲವು ಹೇಳಿಕೆಗಳು ಹಾಗೂ ನಡಾವಳಿಗಳು ವರಿಷ್ಠರ ಬೇಸರಕ್ಕೆ ಕಾರಣವಾಗಿದೆ.
ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿಗಳು ಹೆಗಡೆ ಬಗ್ಗೆ ಬೇಸರ ಹೊಂದಿದ್ದಾರೆ. ಆದರೆ ಸಂಘ ಪರಿವಾರದ ಹಿರಿಯರು ಮಾತ್ರ ಅನಂತಕುಮಾರ್ ಪರವಾಗಿಯೇ ನಿಲ್ಲುವ ಸಾಧ್ಯತೆ ಇದೆ. ಒಂದೆಡೆ ಬದಲಿ ಅಭ್ಯರ್ಥಿ ಶೋಧ ನಡೆಯುತ್ತಿದ್ದರೂ ಕ್ಷೇತ್ರದಲ್ಲಿ ಹೆಗಡೆ ಭರದ ಸಿದ್ಧತೆ ನಡೆಸಿದ್ದಾರೆ. ಕಾರವಾರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ “ಕರಿಮಣಿ ಮಾಲೀಕ ಯಾರಿಲ್ಲ’ ಎಂಬ ಹೇಳಿಕೆ ನೀಡಿ ಹಲವು ಸಂದೇಶ ರವಾನೆ ಮಾಡಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ ಈ ಕ್ಷೇತ್ರದ ಬಗ್ಗೆ ಕೊನೆಯಲ್ಲಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳಬಹುದು ಎಂದು ತಿಳಿದು ಬಂದಿದೆ.