ಹೈಲಕಂಡಿ, ಅಸ್ಸಾಂ : “ಚೌಕೀದಾರ ಕಳ್ಳ ಮಾತ್ರವಲ್ಲ, ಹೇಡಿಯೂ ಕೂಡ” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ದದ ವಾಕ್ಸಮರವನ್ನು ಇಲ್ಲಿ ಮುಂದುವರಿಸಿದ್ದಾರೆ.
“ಚೌಕೀದಾರ ಹೇಡಿ ಏಕೆಂದರೆ ಆತ ವಿಪಕ್ಷ ಮುಖ್ಯಸ್ಥನ ಜತೆಗೆ ಭ್ರಷ್ಟಾಚಾರ ಕುರಿತಾದ ನೇರ ಚರ್ಚೆಯನ್ನು ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ’ ಎಂದು ರಾಹುಲ್ ಆರೋಪಿಸಿದರು.
ಮೋದಿ ಅವರ ಸ್ಕೀಮುಗಳು ಅನಿಲ್ ಅಂಬಾನಿ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಅವರಂತಹ ಸಿರಿವಂತರಿಗೆ ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಲಾಭ ಮಾಡಿಕೊಟ್ಟಿವೆ ಎಂದು ರಾಹುಲ್ ಟೀಕಿಸಿದರು.
ಮಳೆ ಮತ್ತು ಪ್ರತಿಕೂಲ ಹವಾಮಾನದ ಕಾರಣ ಸಿಲ್ಚಾರ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ನಲ್ಲಿ ಸಾರ್ವಜನಿಕ ಭಾಷಣ ತಾಣಕ್ಕೆ ನೇರವಾಗಿ ಬರಲಾಗದೆ ರಸ್ತೆ ಮಾರ್ಗವಾಗಿ ರಾಹುಲ್ ಗಾಂಧಿ ಅವರು ಎರಡು ತಾಸುಗಳ ಕಾಲ ತಡವಾಗಿ ಆಗಮಿಸಿದರು.
ಮೋದಿ ಅವರು ಕಳೆದ ಲೋಕಸಭಾ ಚುನವಾಣೆ ವೇಳೆ ದೇಶದ ಯುವಕರಿಗೆ 2 ಕೋಟಿ ಉದ್ಯೋಗ ಒದಗಿಸುವುದಾಗಿ, ಪ್ರತಿಯೊಬ್ಬ ನಾಗರಿಕನಿಗೆ 15 ಲಕ್ಷ ರೂ. ನೀಡುವುದಾಗಿ, ರೈತರು ಬೆಳೆದ ಬೆಳೆಗೆ ನ್ಯಾಯೋಚಿತ ಬೆಲೆ ನೀಡುವುದಾಗಿ ಕೊಟ್ಟಿದ್ದ ಭರವಸೆಗಳಲ್ಲಿ ಯಾವುದೂ ಈಡೇರಿಲ್ಲ ಎಂದು ರಾಹುಲ್ ದೂರಿದರು.
ನೋಟು ಅಮಾನ್ಯ, ಜಿಎಸ್‌ಟಿ ಮೂಲಕ ಮೋದಿ ಜನ ಸಾಮಾನ್ಯರ ಹಣವನ್ನು ಲೂಟಿ ಮಾಡಿ ಸಿರಿವಂತರಿಗೆ ಕೊಟ್ಟಿದ್ದಾರೆ; ಬ್ಯಾಂಕುಗಳ ತಿಜೋರಿ ಬೀಗದ ಕೈಯನ್ನು ಅನಿಲ್ ಅಂಬಾನಿಯಂತಹ ಸಿರಿವಂತರ ಕೈಗೆ ಒಪ್ಪಿಸಿದ್ದಾರೆ ಎಂದ ರಾಹುಲ್, ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ತತ್‌ಕ್ಷಣ ಆ ಬೀಗದ ಕೈಯನ್ನು ಕಿತ್ತುಕೊಳ್ಳಲಾಗುವುದು, ಬಡವರಲ್ಲಿ ಬಡವರಿರುವ ಶೇ.20 ಮಂದಿ ವರ್ಷಕ್ಕೆ 72,000 ರೂ. ಕೊಡಲಾಗುವುದು, ಮಹಿಳೆಯರಿಗೆ ಲೋಕಸಭೆ, ರಾಜ್ಯಸಭೆ, ವಿಧಾನಸಭೆಯಲ್ಲಿ ಶೇ.33ರ ಮೀಸಲಾತಿಯನ್ನು ಕಲ್ಪಿಸಲಾಗುವುದು ಎಂದು ಹೇಳಿದರು.