Advertisement
ಪ್ರಧಾನಿ ನರೆಂದ್ರ ಮೋದಿಯವರು ತಾವು ಅಧಿಕಾರ ವಹಿಸಿಕೊಂಡ ಪ್ರಾರಂಭದಲ್ಲಿ ತಮ್ಮನ್ನು ಈ ದೇಶದ ‘ಚೌಕಿದಾರ’ ಎಂದು ಕರೆದುಕೊಂಡಿದ್ದರು. ಮತ್ತೆ ಇತ್ತೀಚೆಗೆ ಪುಲ್ವಾಮ ಉಗ್ರದಾಳಿಗೆ ನಮ್ಮ ವಾಯುಸೇನೆ ಸೂಕ್ತ ಪ್ರತ್ಯುತ್ತರ ನೀಡಿದ ಬಳಿಕ ಪ್ರಧಾನಿ ಮೋದಿ ಅವರು ಮತ್ತೆ ‘ಚೌಕಿದಾರ್’ ಪದವನ್ನು ಬಳಸುವ ಮೂಲಕ, ‘ಈ ದೇಶ ಚೌಕಿದಾರನ ಕೈಯಲ್ಲಿ ಸುರಕ್ಷಿತವಾಗಿದೆ…’ ಎಂದು ನುಡಿದಿದ್ದರು. ಆದರೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಅದರ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಿಜಯ್ ಮಲ್ಯ, ನೀರವ್ ಮೋದಿ, ರಫೇಲ್ ಮುಂತಾದ ಪ್ರಕರಣಗಳನ್ನು ಉಲ್ಲೇಖೀಸಿ ಪ್ರಧಾನಿ ಅವರ ‘ಚೌಕಿದಾರ’ ಹೇಳಿಕೆಯನ್ನು ಟೀಕೆ ಮಾಡುತ್ತಲೇ ಬಂದಿದ್ದರು. ಇದೀಗ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಈ ವಿಷಯವನ್ನೇ ಸವಾಲಾಗಿ ತೆಗೆದುಕೊಂಡಿರುವ ಭಾರತೀಯ ಜನತಾ ಪಕ್ಷವು ಇದೀಗ ಹೊಸ ಅಭಿಯಾನವೊಂದನ್ನು ಹುಟ್ಟುಹಾಕಿದ್ದು ಪ್ರಧಾನಿ ಮೋದಿಯವರ ‘ಚೌಕಿದಾರ’ ಹೇಳಿಕೆಯನ್ನು ಸರ್ವತ್ರ ಬೆಂಬಲಿಸಲು ಪಕ್ಷವು ನಿರ್ಧರಿಸಿದೆ. ಅದರಂತೆ ಪ್ರಧಾನಿ ಮೋದಿಯವರ ಕೆಲಸಗಳನ್ನು ಬೆಂಬಲಿಸುವವರೆಲ್ಲಾ ತಮ್ಮನ್ನು ತಾವು ‘ಚೌಕಿದಾರ’ರೆಂದು ಕರೆದುಕೊಳ್ಳುವಂಥೆ ಕರೆ ನೀಡಿದೆ. ಇಷ್ಟಕ್ಕೆ ಸುಮ್ಮನಾಗದ ಕೇಸರಿ ಪಕ್ಷದ ನಾಯಕರು ತಮ್ಮ ತಮ್ಮ ಟ್ವಿಟ್ಟರ್ ಅಕೌಂಟ್ ಗಳಲ್ಲಿ ತಮ್ಮ ಹೆಸರಿನ ಹಿಂದೆ ಚೌಕಿದಾರ ಎಂದು ಬರೆದುಕೊಂಡಿದ್ದಾರೆ. ಉದಾಹರಣೆಗೆ, ಪ್ರಧಾನಿ ಮೋದಿ ಅವರ ಅಧಿಕೃತ ಅಕೌಂಟ್ ಚೌಕಿದಾರ್ ನರೇಂದ್ರ ಮೋದಿ ಎಂದು ಬದಲಾಗಿದೆ, ಇನ್ನುಳಿದಂತೆ ಚೌಕಿದಾರ್ ಅಮಿತ್ ಶಾ, ಚೌಕಿದಾರ್ ಪಿಯೂಷ್ ಗೋಯಲ್, ಚೌಕಿದಾರ್ ಸ್ಮತಿ ಇರಾನಿ, ಚೌಕಿದಾರ್ ಡಾ. ಹರ್ಷ ವರ್ಧನ್, ಚೌಕಿದಾರ್ ರವಿಶಂಕರ್ ಪ್ರಸಾದ್, ಚೌಕಿದಾರ್ ಪ್ರಕಾಶ್ ಜಾವ್ಡೇಕರ್ ಹೀಗೆ ಕೇಂದ್ರದ ಘಟಾನುಘಟಿ ಭಾ.ಜ.ಪ. ನಾಯಕರೆಲ್ಲರೂ ‘ಚೌಕಿದಾರ್’ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
Related Articles
ಇಷ್ಟು ಮಾತ್ರವಲ್ಲದೇ ಚೌಕಿದಾರ್ ಇಂಡಿಯಾ ಎಂಬ ಹೊಸ ಟ್ವಿಟ್ಟರ್ ಅಕೌಂಟ್ ಅನ್ನೂ ಸಹ ಪ್ರಾರಂಭಿಸಲಾಗಿದೆ. ಮತ್ತು ಆ ಮೂಲಕ ದೇಶಾದ್ಯಂತ ನರೇಂದ್ರ ಮೋದಿ ಮತ್ತು ಎನ್.ಡಿ.ಎ. ಸರಕಾರದ ಕೆಲಸಗಳನ್ನು ಬೆಂಬಲಿಸುವವರೆಲ್ಲರೂ ‘ಚೌಕಿದಾರ್ ಅಭಿಯಾನ’ವನ್ನು ಬೆಂಬಲಿಸುವಂತೆ ಪಕ್ಷವು ಇದರಲ್ಲಿ ವಿನಂತಿ ಮಾಡಿಕೊಂಡಿದೆ. ‘ಬನ್ನಿ ಭಾರತೀಯರೇ.. ಇದು ಪ್ರತೀಯೊಬ್ಬ ಭಾರತೀಯನ ಹಕ್ಕು – ಮೈ ಭಿ ಚೌಕಿದಾರ್ ಮತ್ತು ಚೌಕಿದಾರ್ ಫಿರ್ ಸೇ ಎಂಬ ಹ್ಯಾಶ್ ಟ್ಯಾಗ್ ಗಳು ಕಳೆದ ಕೆಲವು ದಿನಗಳಿಂದ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿದೆ.
ಒಟ್ಟಿನಲ್ಲಿ ಇದೀಗ ಪ್ರಧಾನಿ ಮೋದಿಯವರ ವಿರುದ್ಧ ಟೀಕೆಗಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕೆ ಮಾಡುವಾಗ ಪದೇ ಪದೇ ಕೆದಕುತ್ತಿದ್ದ ‘ಚೌಕಿದಾರ್’ ವಿಷಯವನ್ನೇ ಬಿ.ಜೆ.ಪಿ.ಯು ಸವಾಲಾಗಿ ಸ್ವೀಕರಿಸಿದ್ದು ಇದು ಮುಂಬರುವ ದಿನಗಳಲ್ಲಿ ಕೇಸರಿ ಪಕ್ಷಕ್ಕೆ ಯಾವ ರೀತಿಯಲ್ಲಿ ಪ್ರಯೋಜನವಾಗಲಿದೆ ಮತ್ತು ಕಾಂಗ್ರಸ್ ಗೆ ಹೇಗೆ ದುಬಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
Advertisement