ಸಾಗರ: ಕನ್ನಡ ಚಲನಚಿತ್ರ ರಂಗದಲ್ಲಿ ಕಾದಂಬರಿ ಆಧಾರಿತ ಸಿನೆಮಾಗಳ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದ ಚೌಕಾಬಾರ ಚಲನಚಿತ್ರ ನಿರ್ಮಾಣದ ಯತ್ನ ಮಾಡಲಾಗಿದೆ ಎಂದು ನಟ ಮತ್ತು ನಿರ್ದೇಶಕ ವಿಕ್ರಂ ಸೂರಿ ಹೇಳಿದರು.
ಇಲ್ಲಿನ ಗಾಂಧಿ ಮೈದಾನದ ಬಯಲು ರಂಗಮಂದಿರದಲ್ಲಿ ಪರಿಣಿತಿ ಕಲಾಕೇಂದ್ರ ವತಿಯಿಂದ ಆಯೋಜಿಸಿದ್ದ 7ನೇ ವರ್ಷದ ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ 2022ರಲ್ಲಿ ಚೌಕಾಬಾರ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮತ್ತು ಪ್ರಮೋಷನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ವರ್ಷವೇ ಸಿನೆಮಾ ಬಿಡುಗಡೆಗೆ ಕೊರೊನಾ ಅಡ್ಡಿಯಾಯಿತು. ಶ್ರೀಲಕ್ಷ್ಮಿ ಗಣೇಶ್ ಪ್ರೋಡಕ್ಷನ್ಸ್‌ನ ಚಲನಚಿತ್ರಕ್ಕೆ ಎಚ್. ಎಸ್. ವೆಂಕಟೇಶ್‌ಮೂರ್ತಿ, ಬಿ.ಆರ್. ಲಕ್ಶ್ಮ ಣರಾವ್, ಹರೀಶ್, ಅಲೋಕ್ ಗೀತ ರಚನೆ ಮಾಡಿದ್ದಾರೆ. ಬೆಂಗಳೂರು, ದಾಂಡೇಲಿ, ಕಾರವಾರ, ಮೈಸೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಸಾಗರದ ಹುಡುಗ ವಿಹಾನ್ ಪ್ರಭಂಜನ್, ನಮಿತಾರಾವ್, ಕಾವ್ಯ ರಮೇಶ್, ಸುಜಯ್, ಸಂಜಯ್ ಸೂರಿ, ಶಶಿಧರ ಕೋಟೆ, ಡಾ| ಸೀತಾ ಕೋಟೆ, ಕಿರಣ ವಟಿ ಮುಂತಾದವರು ನಟಿಸಿದ್ದಾರೆ ಎಂದರು.
ನಾಯಕಿ ನಮಿತಾರಾವ್ ಮಾತನಾಡಿ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ವಿಕ್ರಂ ಅವರ 2ನೇ ಸಿನೆಮಾ ಚೌಕಾಬಾರದಲ್ಲಿ ಸಾಗರದ ಕಲಾವಿದ ಉದಯಕುಮಾರ್ ನಾಯ್ಡು ಮತ್ತು ಸುಗಂಧಿ ದಂಪತಿಯ ಪುತ್ರ ವಿಹಾನ್ ಪ್ರಭಂಜನ್ ನಾಯಕನಟರಾಗಿ ಅಭಿನಯಿಸಿದ್ದಾರೆ.
ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿ ಡಾ| ಪುನೀತ್ ರಾಜಕುಮಾರ್ ಅವರು ಪೋಸ್ಟರ್ ಬಿಡುಗಡೆ ಮಾಡಿ, ಶುಭ ಹಾರೈಸಿದ್ದರು ಎಂದು ಸ್ಮರಿಸಿದರು. ಪರಿಣತಿ ಸಂಸ್ಥೆಯ ವಿದ್ವಾನ್ ಎಂ.ಗೋಪಾಲ್, ಕಲಾವಿದರಾದ ಸಾಯಿ ವೆಂಕಟೇಶ್, ವಿಕ್ರಂ ಗೌಡ, ಕಲಾಕೇಂದ್ರದ ಗೌರವಾಧ್ಯಕ್ಷೆ ವೀಣಾ ಬೆಳೆಯೂರು, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಸಭೆ ಉಪಾಧ್ಯಕ್ಷ ವಿ.ಮಹೇಶ್ ಮತ್ತಿತರರು ಇದ್ದರು.