ಕಲಬುರಗಿ: ನಿಜಶರಣ ಅಂಬಿಗರ ಚೌಡಯ್ಯ ಶ್ರಮಿಜೀವಿ. ಅವರ ಆದರ್ಶಗಳನ್ನು ಎನ್ ಇಕೆಆರ್‌ಟಿಸಿ ಚಾಲಕರು, ನಿರ್ವಾಹಕರು ಹಾಗೂ ಇತರೆ ಸಿಬ್ಬಂದಿ ಪಾಲಿಸಬೇಕು. ಇದರಿಂದ ಕರ್ತವ್ಯಬದ್ಧತೆ ಬರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಮಹ್ಮಮೊದ್ ಇಲಿಯಾಸ್ ಬಾಗಬಾನ್ ಹೇಳಿದರು.
ಸಂಸ್ಥೆಯ ವಿಭಾಗೀಯ ಕಚೇರಿ ಆವರಣದಲ್ಲಿ ಎನ್‌ಈಕೆಆರ್‌ಟಿಸಿ ಕೋಲಿ ಸಮಾಜದ ನೌಕರರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ನಡೆಯುತ್ತಿದ್ದ ಅನಾಚಾರ ಮತ್ತು ಅನ್ಯಾಯಗಳನ್ನು ಖಂಡಿಸಿದರು.
ಇದರಿಂದಾಗಿ ಅವರು ಸತ್ಯದ ಶೋಧನೆಗೆ ದಿಟ್ಟ ಹೆಜ್ಜೆಗಳನ್ನು ಇಡುವ ಮೂಲಕ ಇಂದಿನ ಶ್ರಮಜೀವಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಅದನ್ನು ಅನುಸರಿಸಬೇಕು ಎಂದರು. ಅತಿಥಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಂಪ್ರಭು ಪಾಟೀಲ ಹಾಗೂ ಹಿರಿಯ ಮುಖಂಡ ಶಿವಶರಣಪ್ಪ ಕೋಬಾಳ ಮಾತನಾಡಿ, ಅಂದಿನ ಅಂಬಿಗರ ಚೌಡಯ್ಯ ಮತ್ತು ಇಂದಿನ ಬಸ್ ಚಾಲಕರು ಒಂದೇ ಕೆಲಸ ಮಾಡುತ್ತಿದ್ದಾರೆ.
ಚೌಡಯ್ಯನವರು ದೋಣಿಯಲ್ಲಿ, ಸಾರಿಗೆ ಸಂಸ್ಥೆ ಚಾಲಕರು ಬಸ್ಸಿನಲ್ಲಿ ಜನರನ್ನು ಸಾಗಿಸುತ್ತಾರೆ. ಅದರಲ್ಲಿ ಕಾಯಕ ನಿಷ್ಠೆ ಮತ್ತು ಜನಸೌಖ್ಯವನ್ನು ಪಾಲಿಸಬೇಕು ಎನ್ನುವುದು ಚೌಡಯ್ಯನವರ ನಿಲುವಾಗಿತ್ತು. ಅದನ್ನು ನೀವು ಸರಿಯಾಗಿ ಮಾಡಿ ಪ್ರಯಾಣಿಕರ ಪ್ರಾಣ ಕಾಪಾಡಬೇಕು ಎಂದರು. ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಹಾಗೂ ಸಂಸ್ಥೆಯ ಕೋಲಿ ಸಮಾಜ ನೌಕರರ ಸಂಘದ ಗೌರವ ಅಧ್ಯಕ್ಷ ರಾಜಗೋಪಾಲ ರೆಡ್ಡಿ ಮಾತನಾಡಿ,
ಸಮಾಜದ ನೌಕರರು ಹಲವು ಸಂದರ್ಭದಲ್ಲಿ ವೃತ್ತಿಯಲ್ಲಿನ ಒತ್ತಡದಿಂದಾಗಿ ಕೆಲವು ತಪ್ಪುಗಳನ್ನು ಮಾಡಿದರೂ, ಸಂಸ್ಥೆಯ ಹಿರಿಯ ಅಧಿಕಾರಿಗಳು ಶಿಕ್ಷೆಯ ಪ್ರಮಾಣವನ್ನು ನಿಗದಿ ಮಾಡುವಾಗ ಮೆಧುವಾಗಿರಲಿ. ಅಲ್ಲದೆ, ನಮ್ಮ ನೌಕರರು ಕೂಡ ಚೌಡಯ್ಯ ಅವರ ಆದರ್ಶಗಳನ್ನು ಜೀವನದಲ್ಲಿ ಪಾಲಿಸಿಕೊಂಡು ಉತ್ತಮ ಸಾಮಾಜಿಕ ಚಿಂತನೆಗಳನ್ನು ಹೊಂದಬೇಕು.
ಶಿಕ್ಷಣದಿಂದ ಜಾಗೃತರಾಗಿ, ಇತರೆ ಸಮಾಜದ ಜನರೊಂದಿಗೆ ಸೌಹಾರ್ದಿತವಾಗಿ ನಡವಳಿಕೆಗಳನ್ನು ಹೊಂದಬೇಕು. ಡಾ| ಬಿ.ಪಿ.ಬುಳ್ಳಾ ಮಾತನಾಡಿದರು. ವಸಂತ ಬಬಲಾದ ಉಪನ್ಯಾಸ ನೀಡಿದರು. ತೊನಸನಹಳ್ಳಿ ಅಲ್ಲಮಪ್ರಭು ಸಂಸ್ಥಾನ ಮಠದ ಪೀಠಾಧಿಪತಿ ಮಲ್ಲಣ್ಣಪ್ಪ ಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಮಲ್ಲಿಕಾರ್ಜುನ ಸಾಹು ಆಲೂರು, ಮಾಹಾಂತೇಶ ಪಾಟೀಲ, ಶಿವಕುಮಾರ ನಾಟೀಕಾರ, ಪತ್ರಕರ್ತ ಸೂರ್ಯಕಾಂತ ಜಮಾದಾರ,
ಸಂಸ್ಥೆಯ ವಿಭಾಗ-1ರ ವಿಭಾಗೀಯ ನಿಯಂತ್ರಕ ಎಂ.ವಾಸು, ವಿಭಾಗ-2ರ ವಿಭಾಗೀಯ ನಿಯಂತ್ರಕ ಡಿ.ಕೊಟ್ರೆಪ್ಪಾ, ಚಂದ್ರಕಾಂತ ಗದಗಿ, ಭೀಮರರಾಯ ಯರಗೋಳ, ದತ್ತಕುಮಾರ ಬಂದರವಾಡ, ನಂದಕುಮಾರ ಜಮಾದಾರ, ಶಿವಪುತ್ರ ಬೆಳಮಗಿ ಇದ್ದರು. ಎನ್‌ಈಕೆಆರ್‌ಟಿಸಿ ಕೋಲಿ ಸಮಾಜದ ನೌಕರರ ಸಂಘದ ಸುಭಾಷ ಆಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಂಡುರಂಗ ಅಪಚಂದ ಸ್ವಾಗತಿಸಿದರು. ವೀರಭದ್ರಪ್ಪ ಅರಿಕೇರಿ ನಿರೂಪಿಸಿದರು.