ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಮತ್ತು ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹಾಗೂ ಇತರರಿಗೆ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ಲಕ್ಷಾಂತರ ರೂ. ಆಸೆಗೆ ವಿಶೇಷ ಆತಿಥ್ಯ ನೀಡಿರುವುದು ಆಗ್ನೇಯ ವಿಭಾಗದ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಸುಮಾರು 6-8 ಲಕ್ಷ ರೂ.ಗೆ ಡೀಲ್ ನಡೆದಿತ್ತು ಎಂದು ಹೇಳಲಾಗಿದೆ. ಈ ಸಂಬಂಧ ಈಗಾಗಲೇ ಆಗ್ನೇಯ ವಿಭಾಗದ ಪೊಲೀಸರು ವರದಿ ಸಿದ್ಧಪಡಿಸಿದ್ದು, ಒಂದೆರಡು ದಿನಗಳಲ್ಲೇ ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ತನಿಖೆ ನಡೆಸುತ್ತಿದ್ದ ಆಗ್ನೇಯ ವಿಭಾಗದ ಪೊಲೀಸರ ತನಿಖೆಯಲ್ಲಿ ಈ ಸ್ಫೋಟಕ ಅಂಶಗಳು ಬಹಿರಂಗವಾಗಿದ್ದು, ಜೈಲಿನ ಅಂದಿನ ಮುಖ್ಯ ಅಧೀಕ್ಷಕರಿಂದ ವಾರ್ಡನ್‌ವರೆಗಿನ ಸುಮಾರು 10ಕ್ಕೂ ಅಧಿಕ ಅಧಿಕಾರಿ-ಸಿಬ್ಬಂದಿ ಈ ಡೀಲ್‌ನಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ, ಇಡೀ ಡೀಲ್ 6-8 ಲಕ್ಷ ರೂ.ನಲ್ಲಿ ನಡೆದಿದ್ದು, ವಿಲ್ಸನ್‌ಗಾರ್ಡನ್ ನಾಗ ಮತ್ತು ತಂಡ ಈ ಹಣವನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.
ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಎಂಟ್ರಿ ಕೊಡುತ್ತಿದ್ದಂತೆ, ವಿಲ್ಸನ್‌ಗಾರ್ಡನ್ ನಾಗ ಹಾಗೂ ಇತರೆ ರೌಡಿಶೀಟರ್‌ಗಳ ನಡುವೆ ವಿಶೇಷ ಆತಿಥ್ಯ ನೀಡುವ ಕುರಿತು ಪೈಪೋಟಿ ನಡೆದಿತ್ತು. ಈ ಮಧ್ಯೆ ವಿಲ್ಸನ್‌ಗಾರ್ಡನ್ ನಾಗನ ಸಹಚರರು, ದರ್ಶನ್ ಬ್ಯಾರಕ್‌ಗೆ ತೆರಳಿ ವಿಶೇಷ ಆತಿಥ್ಯದ ಬಗ್ಗೆ ತಿಳಿಸಿ ಜೈಲಿನ ಆವರಣದಲ್ಲಿ ಟೀ ಜತೆ ಸಿಗರೆಟ್ ವ್ಯವಸ್ಥೆ ಮಾಡಿದ್ದರು. ಅದರಂತೆ ದರ್ಶನ್ ಆವರಣಕ್ಕೆ ಹೋಗಿ, ನಾಗ, ತನ್ನ ಮ್ಯಾನೇಜರ್ ನಾಗರಾಜ್, ರೌಡಿ ಕುಳ್ಳ ಸೀನನ ಜತೆ ಕುಳಿತು ಟೀ, ಸಿಗರೆಟ್ ಸೇದುತ್ತ ವಿಶೇಷ ಆತಿಥ್ಯ ಸ್ವೀಕರಿಸಿದ್ದಾರೆ. ಆದರೆ, ಆತನಿಗೆ ಡೀಲ್ ಬಗ್ಗೆ ಮಾಹಿತಿ ಇಲ್ಲ. ನಾಗನ ಯುವಕರು ಬಂದು ಬಾಸ್(ನಾಗ) ಕರೆಯುತ್ತಿದ್ದಾರೆ ಬನ್ನಿ ಎಂದು ಕರೆದರೂ, ಆಗ ವಾರ್ಡನ್‌ಗೆ ತಿಳಿಸಿದಾಗ, ಅವರು ಕೂಡ ಹೋಗುವಂತೆ ಹೇಳಿದರೂ ಹೀಗಾಗಿ ಆವರಣಕ್ಕೆ ಹೋಗಿದ್ದೆ. ಹೆಚ್ಚಿನ ಮಾಹಿತಿ ಇಲ್ಲ ಎಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಶೇಷ ಆತಿಥ್ಯ ನೀಡಿದ ಸಂಬಂಧ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಇದೀಗ ತನಿಖೆ ಪೂರ್ಣಗೊಳಿಸಿ ಸದ್ಯದಲ್ಲೇ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೆ ವರದಿ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.
ಏನಿದು ಘಟನೆ? ಕಳೆದ ಆಗಸ್ಟ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನ ಹೈಸೆಕ್ಯೂರಿಟಿ ಬ್ಯಾರಕ್‌ನಲ್ಲಿರುವ ವಿಚಾರಣಾಧೀನ ಕೈದಿಗಳ ಆವರಣದಲ್ಲಿ ನಟ ದರ್ಶನ್, ರೌಡಿಶೀಟರ್ ವಿಲ್ಸನ್‌ಗಾರ್ಡನ್ ನಾಗ, ಕುಳ್ಳ ಸೀನಾ, ದರ್ಶನ್ ಮ್ಯಾನೆಜರ್ ನಾಗರಾಜ್ ಕುರ್ಚಿಯಲ್ಲಿ ಕುಳಿತಿರುವ ಫೋಟೋ ವೈರಲ್ ಆಗಿತ್ತು. ಈ ಪೋಟೋದಲ್ಲಿ ದರ್ಶನ್‌ನ ಒಂದು ಕೈಯಲ್ಲಿ ಸಿಗರೆಟ್, ಮತ್ತೂಂದು ಕೈಯಲ್ಲಿ ಟೀ ಕಪ್ ಇತ್ತು. ಮತ್ತೂಂದೆಡೆ ರೌಡಿಶೀಟರ್ ಜನಾರ್ಧನ್ ಅಲಿಯಾಸ್ ಜಾನಿ ಪುತ್ರ ಸತ್ಯನ ಜತೆ ವಿಡಿಯೋ ಕಾಲ್ ಮಾತನಾಡಿದ್ದು, ಆಗಲೂ ರೌಡಿಶೀಟರ್ ಧರ್ಮ ಎಂಬಾತ ದರ್ಶನ್‌ಗೆ ವಿಡಿಯೋ ಕರೆ ಮಾಡಿ ಕೊಟ್ಟಿದ್ದ. ಈ ವಿಡಿಯೋ ಕೂಡ ವೈರಲ್ ಆಗಿತ್ತು. ಫೋಟೋಗಳು ವೈರಲ್ ಆಗುತ್ತಿದ್ದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದರ್ಶನ್ ಮತ್ತು ನಾಗನ ವಿರುದ್ಧ ತಲಾ ಒಂದು ಮತ್ತು ವಿಶೇಷ ಆತಿಥ್ಯ ಸಂಬಂಧ ಜೈಲಿನ ಅಧಿಕಾರಿಗಳ ವಿರುದ್ಧ ಸೇರಿ ಮೂರು ಪ್ರತ್ಯೇಕ ಎಫ್ಐಆರ್‌ಗಳು ದಾಖಲಾಗಿದ್ದವು.