Advertisement

ಚೋರನ ಬಂಧನ: ಆನೆದಂತ ವಶ

03:30 PM May 31, 2018 | Team Udayavani |

ಹನೂರು: ಸಮೀಪದ ಮಲೆಮಹದೇಶ್ವರ ವನ್ಯಜೀವಿ ವಲಯದಲ್ಲಿ ಆಕಸ್ಮಿಕವಾಗಿ ಸಾವಿಗೀಡಾಗಿದ್ದ ಆನೆ ದಂತವನ್ನು
ಕಡಿದು ಮನೆಯಲ್ಲಿ ಸಂಗ್ರಹಿಸಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

Advertisement

ಹೂಗ್ಯಂ ಅರಣ್ಯ ವಲಯ ವ್ಯಾಪ್ತಿಯ ಸೂಳೆಕೋಬೆ ಗ್ರಾಮದ ಸಣ್ಣಪುಟ್ಟ (53) ಬಂಧಿತ. ಕಳೆದ 2 ದಿನಗಳ ಹಿಂದೆ
ಮಲೆಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯ ಸೂಳೇರಗುಡ್ಡ ಅರಣ್ಯ ಪ್ರದೇಶದಲ್ಲಿನ ಹಳ್ಳಕ್ಕೆ 15 ವರ್ಷದ
ಕಾಡಾನೆಯೊಂದು ನೀರು ಕುಡಿಯಲು ಬಂದಿತ್ತು. ಈ ವೇಳೆ ಹಳ್ಳದಲ್ಲಿನ ಬಂಡೆಗೆ ಕಾಲು ಸಿಲುಕಿ ಮೃತಪಟ್ಟಿದ್ದು, ಅರಣ್ಯ
ಇಲಾಖೆ ಅಧಿಕಾರಿಗಳ ಗಮನಕ್ಕೆ ಈ ಪ್ರಕರಣ ಕಂಡು ಬಂದಿರಲಿಲ್ಲ. ಬುಧವಾರ ಬೆಳಗ್ಗೆ ಸೂಳೆಕೋಬೆ ಗ್ರಾಮದ
ಸಣ್ಣಪುಟ್ಟ ಸೀಗೆಸೊಪ್ಪನ್ನು ಕೊಯ್ಯಲು ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದನು.

 ಈ ವೇಳೆ ಹಳ್ಳದಲ್ಲಿ ಮೃತಪಟ್ಟ ಆನೆಯನ್ನು ಗಮನಿಸಿ ಅದರ ಎರಡು ದಂತಗಳನ್ನು ಕಡಿದು ಮನೆಯಲ್ಲಿ ಅಡಗಿಸಿಟ್ಟಿದ್ದ.
ಬುಧವಾರ ಮಧ್ಯಾಹ್ನ 1ರ ವೇಳೆಯಲ್ಲಿ ಬೀಟ್‌ನಲ್ಲಿ ಅರಣ್ಯ ಸಿಬ್ಬಂದಿ ಹಳ್ಳದಲ್ಲಿ ಮೃತಪಟ್ಟಿದ್ದ ಆನೆಯಿಂದ ದಂತ ಕಡಿದಿರುವುದನ್ನು ಗಮನಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರು. ಕೂಡಲೇ ವಲಯ ಅರಣ್ಯಾಧಿಕಾರಿ ಸುಂದರ್‌ ಭೇಟಿ ನೀಡಿ ಪರಿಶೀಲಿಸಿದರು. ಖಚಿತ ಮಾಹಿತಿ ಮೇರೆಗೆ ಸೂಳೆಕೋಬೆ ಗ್ರಾಮದ ಸಣ್ಣಪುಟ್ಟನ ಮನೆ ಮೇಲೆ ದಾಳಿ ನಡೆಸಿದಾಗ ಆನೆದಂತ ಇರುವುದು ದೃಢಪಟ್ಟಿದೆ. ಬಳಿಕ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಅರಣ್ಯಾಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸೂಳೆಕೋಬೆ ಗ್ರಾಮದ ಸಣ್ಣಪುಟ್ಟನ ವಿರುದ್ಧ ಅರಣ್ಯ ಇಲಾಖೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದೆ. ಅದರಲ್ಲಿ ಅಕ್ರಮ ಶಸ್ತ್ರಾಸ್ತ್ರ, ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next