ನವದೆಹಲಿ: ಆರು ಜನ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ನಲ್ಲಿ ದಿಢೀರ್ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಉತ್ತರಖಂಡದ ಕೇದಾರನಾಥದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದ್ದು, ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ಭೂಮಿಗೆ ಅಪ್ಪಳಿಸಿದ್ದು, ಯಾತ್ರಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:Vijayapura:ಆಯುತಪ್ಪಿ ಬಿದ್ದ ಮಹಿಳೆಯ ಕಾಲಿನ ಮೇಲೆ ಹರಿದ ಬಸ್
ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಪೈಲಟ್ ಹೆಲಿಪ್ಯಾಡ್ ಮೇಲೆ ಲ್ಯಾಂಡ್ ಆಗುವ ಮೊದಲು ಸುಮಾರು 100 ಮೀಟರ್ ದೂರದಲ್ಲಿ ಹೆಲಿಕ್ಯಾಪ್ಟರ್ ಅನ್ನು ಲ್ಯಾಂಡ್ ಮಾಡಲು ಮುಂದಾದ ಸಂದರ್ಭ ನಿಯಂತ್ರಣ ತಪ್ಪಿ ಗಿರಗಿರನೆ ತಿರುಗಿ ನೆಲಕ್ಕೆ ಅಪ್ಪಳಿಸಿ ಇಳಿಜಾರು ಪ್ರದೇಶಕ್ಕೆ ಜಾರಿ ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಹೆಲಿಕ್ಯಾಪ್ಟರ್ ಗಿರಗಿರನೆ ತಿರುಗುತ್ತಿದ್ದಂತೆಯೇ ಹೆಲಿಪ್ಯಾಡ್ ಸುತ್ತಮುತ್ತ ನೆರದಿದ್ದ ಇತರ ಯಾತ್ರಾರ್ಥಿಗಳು, ಸಿಬಂದಿಗಳು ದೂರ ಓಡತೊಡಗಿದ್ದರು. ಘಟನೆಯಲ್ಲಿ ಪೈಲಟ್ ಸೇರಿದಂತೆ ಎಲ್ಲಾ ಯಾತ್ರಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವರದಿ ವಿವರಿಸಿದೆ.
ಕೆಸ್ಟ್ರೆಲ್ ಏವಿಯೇಷನ್ ನ ಹೆಲಿಕ್ಯಾಪ್ಟರ್ ಸಿರ್ಸಾದಿಂದ ಕೇದಾರನಾಥ್ ಧಾಮ್ ಗೆ ಆರು ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿತ್ತು. ಹೈಡ್ರಾಲಿಕ್ ವೈಫಲ್ಯದಿಂದಾಗಿ ಹೆಲಿಕ್ಯಾಪ್ಟರ್ ಅನಿಯಂತ್ರಿತವಾಗಿ ಗಿರಗಿರನೆ ತಿರುಗಿ ನೆಲಕ್ಕಪ್ಪಳಿಸಿತ್ತು ಎಂದು ವರದಿ ವಿವರಿಸಿದೆ.