Advertisement

ಹೊಸ ಕಾಲೇಜು ಆಯ್ಕೆ ನಿಮ್ಮದಾಗಲಿ

12:50 PM Mar 27, 2019 | Naveen |
ಕೆಲವೇ ದಿನಗಳಲ್ಲಿ ಪರೀಕ್ಷೆಗಳು ಮುಗಿಯುತ್ತವೆ. ರಜೆಯ ಮಜಾದ ಗುಂಗಿನಲ್ಲಿ ಕಳೆದುಹೋಗದೆ ಮುಂದಿನ ಹೆಜ್ಜೆಯತ್ತಲೂ ಚಿಂತನೆ ನಡೆಸಲು ಇದು ಸಕಾಲ. ಇನ್ನೇನು ಕೆಲವೇ ದಿನಗಳಲ್ಲಿ ಕಾಲೇಜು ಸೇರ್ಪಡೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಹೀಗಾಗಿ ನಾನು ಯಾವ ಕಾಲೇಜಿಗೆ ಸೇರಬೇಕು, ಕಾಲೇಜಿನಲ್ಲಿ ಏನೆಲ್ಲ ಸವಲತ್ತುಗಳಿರಬೇಕು, ಕ್ಯಾಂಪಸ್‌ ಹೇಗಿರಬೇಕು ಎಂಬ ಚಿಂತನೆ ನಡೆಸಿ ನಿಮಗೆ ಸರಿಯಾದ ಕಾಲೇಜು ಯಾವುದು ಎಂಬುದನ್ನು ಪರಿಶೀಲಿಸಲು ಇದುವೇ ಬೆಸ್ಟ್‌ ಟೈಮ್‌. ಇದಕ್ಕಾಗಿ ಒಂದಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಿ.
ಇನ್ನೇನು ಕೆಲ ದಿನಗಳಲ್ಲಿ ಪರೀಕ್ಷೆಗಳು ಮುಗಿಯಲಿದ್ದು, ಬಳಿಕ ಹೊಸ ಕಾಲೇಜು ಸೇರ್ಪಡೆಯ ಸಿದ್ಧತೆಗಳು ಪ್ರಾರಂಭವಾಗುತ್ತವೆ. ಈ ವೇಳೆ ಬಹಳ ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ಕಾಲೇಜು ಆಯ್ಕೆ ಮಾಡುವಲ್ಲಿ ಎಚ್ಚರ ತಪ್ಪಿದರೆ ಅದರ ಪರಿಣಾಮ ಮುಂಬರುವ ಶೈಕ್ಷಣಿಕ ಪ್ರಗತಿಯ ಮೇಲೆ ಬೀರಬಹುದು. ಇದೇ ಕಾರಣಕ್ಕೆ ಹೊಸ ಕಾಲೇಜಿನ ಸೇರ್ಪಡೆಯ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಕಲಿಯುವದರ ಜತೆಗೆ, ಮುಂಬರುವ ಉದ್ಯೋಗದ ದೃಷ್ಟಿಯಿಂದಲೂ ಆಯ್ಕೆ ಮಾಡುವ ಕಾಲೇಜುಗಳು ಪ್ರಾಮುಖ್ಯ ಪಡೆಯುತ್ತದೆ. ಶಾಲಾ- ಕಾಲೇಜುಗಳಲ್ಲಿ ಕೇವಲ ಪಠ್ಯದ ವಿಷಯಕ್ಕೆ ಮಾತ್ರ ಗಮನ ನೀಡಿದರೆ ಸಾಲದು, ಅದರ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಗಮನ ನೀಡಬೇಕು. ಇದು ಕೂಡ ಕಾಲೇಜು ಆಯ್ಕೆ ಮಾನದಂಡದಲ್ಲೊಂದು.
ಕೆಲವೊಂದು ಕಾಲೇಜಿನ ಆಯ್ಕೆ ಸಮಯದಲ್ಲಿ ನೇರ ಪ್ರವೇಶ ಇರುವುದಿಲ್ಲ. ಅದರ ಬದಲಾಗಿ ಪರೀಕ್ಷೆಯ ಆಧಾರದ ಮುಖೇನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆ ಬಗ್ಗೆ ಮೊದಲೇ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ. ನಾವು ಆಯ್ಕೆ ಮಾಡುವ ವಿಷಯಕ್ಕೆ ಅನುಗುಣವಾಗಿ ಪರೀಕ್ಷೆಗಳು ನಡೆಯುತ್ತದೆ. ಉದಾಹರಣೆಗೆ ಪಿಯುಸಿಯಿಂದ ಪದವಿ ಸಮಯದಲ್ಲಿ ಕಲಾ ವಿಭಾಗ ಆಯ್ಕೆ ಮಾಡಿದರೆ ಅದಕ್ಕೆ ಸಂಬಂಧಿತ ಪ್ರಶ್ನೆಗಳು ಇರುತ್ತದೆ. ಈ ವೇಳೆ ಪಾಠದ ವಿಚಾರದ ಜತೆಗೆ ಸಮಾಜದಲ್ಲಿ ನಡೆಯುತ್ತಿರುವ ರಾಜಕೀಯ, ಕ್ರೀಡೆ, ಸಾಂಸ್ಕೃತಿಕ ಸಹಿತ ಇನ್ನಿತರ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು.
ಕಾಲೇಜು ಆಯ್ಕೆ ಹೀಗಿರಲಿ
ಇಂದು ತಂತ್ರಜ್ಞಾನ ಕ್ಷೇತ್ರ ಬೆಳೆದುಬಿಟ್ಟಿದೆ. ದೇಶದಲ್ಲಿರುವ ಎಲ್ಲ ಕಾಲೇಜುಗಳ ಬಗ್ಗೆ ಅಥವಾ ಟಾಪ್‌ ಕಾಲೇಜುಗಳ ಬಗ್ಗೆ ವಿವರವಾದಂತಹ ಮಾಹಿತಿ ಕ್ಷಣಾರ್ಧದಲ್ಲಿ ಸಿಗುತ್ತದೆ. ಆಯಾ ಕಾಲೇಜಿನಲ್ಲಿ ಯಾವೆಲ್ಲ ಉತ್ತಮ ಸೌಲಭ್ಯಗಳಿದೆ ಎಂಬುವುದನ್ನು ತಿಳಿಯಲು ಸಾಧ್ಯ. ಉನ್ನತ ವಿದ್ಯಾಭ್ಯಾಸಕ್ಕೆಂದು ಹೊಸ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವಾಗ ಆಯಾ ಕಾಲೇಜಿನ ಬಗ್ಗೆ ಸವಿವವರ ಪಡೆದುಕೊಳ್ಳುವುದು ಉತ್ತಮ. ಕಾಲೇಜುಗಳ ವೆಬ್‌ಸೈಟ್‌ ಗಳಲ್ಲಿರುವ ಮಾಹಿತಿಗಳೊಂದಿಗೆ ಬೇರೆಯವರ ಕಾಲೇಜಿನ ಬಗೆಗಿನ ಅಭಿಪ್ರಾಯವನ್ನು ಕೇಳಿರಿ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಾಲೇಜುಗಳಲ್ಲಿ ಕಲಿಯುವಾದ ಎಷ್ಟೇ ಅತ್ಯುನ್ನತ ಸೇವೆಗಳು ಇದ್ದರೂ ಕಡಿಮೆ. ಅದರಲ್ಲಿಯೂ, ಉತ್ತಮ ಗ್ರಂಥಾಲಯ, ಪುಸ್ತಕಗಳು, ನಿಯತಕಾಲಿಕಗಳು, ಆನ್‌ ಲೈನ್‌ ವ್ಯವಸ್ಥೆ ಇದೆಯೇ ಎಂದು ಪರಿಶೀಲಿಸಿ. ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳ ಸೇರ್ಪಡೆ ವೇಳೆ ಕಾಲೇಜಿನಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರಕಾಶಕರ ಪುಸ್ತಕಗಳು ಇವೆಯೇ ಎಂಬುದನ್ನು ನೋಡಿಕೊಳ್ಳಿ. ಏಕೆಂದರೆ ಮುಂದಿನ ಸಂಶೋಧನೆಗೆ ಅವುಗಳು ಸಹಾಯವಾಗುತ್ತದೆ.
ಗುಣಮಟ್ಟಕ್ಕೆ ಆದ್ಯತೆ ಇರಲಿ
ವಿದ್ಯಾರ್ಥಿಗಳು ಯಾವುದೇ ಕಾಲೇಜಿಗೆ ಪ್ರವೇಶ ಪಡೆಯುವುದಕ್ಕೂ ಮುನ್ನ ಆ ಕಾಲೇಜಿನ ವರ್ಚಸ್ಸು ಹೇಗಿದೆ ಎಂಬ ಬಗ್ಗೆ ಗಮನ ಹರಿಸಬೇಕು. ಅಲ್ಲದೇ, ಸುಸಜ್ಜಿತವಾದ ಎಕ್ಸಿಕ್ಯೂಟಿವ್‌ ಕ್ಲಾಸ್‌ ರೂಂ,
ಆಡಿಯೋ ವಿಶುವಲ್‌ ಸೌಲಭ್ಯ ಇದೆಯಾ ಎಂದು ಪರಿಶೀಲಿಸಿವುದು ಮುಖ್ಯ. ಉತ್ತಮ ಶೈಕ್ಷಣಿಕ ಗುಣಮಟ್ಟದ ದೃಷ್ಟಿಯಿಂದ ಪೂರ್ಣಾವಧಿಯ ಶಿಕ್ಷಕರು ಇದ್ದಾರೆಯೇ ಎಂಬ ಬಗ್ಗೆ ಗಮನವಿರಲಿ.
ಆಯ್ಕೆ ವೇಳೆ ಗಮನಸಿಬೇಕಾದ ವಿಷಯ
· ಕಾಲೇಜು ಎಷ್ಟು ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ.
· ಸುಸಜ್ಜಿತವಾದ ಕ್ಯಾಂಪಸ್‌, ಗುಣಮಟ್ಟದ ಕ್ಲಾಸ್‌ ರೂಂ
· ತರಗತಿಯಲ್ಲಿ ಆಡಿಯೋ ವಿಶ್ಯುವಲ್‌ ಸೌಲಭ್ಯ
· ಅನುಭವಿ ಪ್ರಾಧ್ಯಾಪಕರು
· ವಿದ್ಯಾರ್ಥಿ- ಉಪನ್ಯಾಸಕರ ನಡುವೆ ಉತ್ತಮ ಬಾಂಧವ್ಯ
· ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಕೊಡುಗೆ
ನವೀನ್‌ ಭಟ್‌ ಇಳಂತಿಲ
Advertisement

Udayavani is now on Telegram. Click here to join our channel and stay updated with the latest news.

Next