ಅನೇಕರು ಅದೃಷ್ಟಕ್ಕಾಗಿ ಕಾತರಿಸುತ್ತಾರೆ. ಮತ್ತೆ ಕೆಲವರು ಅದೃಷ್ಟವನ್ನೇ ಸೃಷ್ಟಿಸುತ್ತಾರೆ. ಪರೀಕ್ಷಾ ಕೊಠಡಿಯಲ್ಲಿ ಕಾಣಿಸಿಕೊಂಡ ಇಲ್ಲೊಬ್ಬಳು ಹುಡುಗಿಯ ಕತೆ, ಎರಡನೇ ಪಂಕ್ತಿಗೆ ಸೇರಿದ್ದು. ಆಕೆಯ ಅದೃಷ್ಟ ಚೂಡಿಯಲ್ಲಿತ್ತು..!
ಪರೀಕ್ಷೆಯಲ್ಲಿ ಉತ್ತರ ಹೊಳೆಯದಿದ್ದಾಗ ಕಣ್ಣು ಗಡಿಯಾರದ ಕಡೆಗೆ ಒಮ್ಮೆ ದೃಷ್ಟಿ ಹರಿಸಿ ಪಟಕ್ಕನೆ ಕಿಟಕಿಯಾಚೆಗಿನ ದೃಶ್ಯಾವಳಿಗಳನ್ನು ನೋಡುತ್ತಾ ಕುಳಿತಿತು. ಕಣ್ಣನ್ನು ಅರಸುತ್ತಾ ಹೋದ ಲಕ್ಷ್ಯವೂ ಅಲ್ಲೇ ಬಾಕಿಯಾಯಿತು. ಮೋಜು ನೋಡುತ್ತಾ ಕುಳಿತಿದ್ದ ಇಬ್ಬರೂ ಮಹಾಶಯರನ್ನು ವಾಸ್ತವಕ್ಕೆ ಕರಕೊಂಡು ಬರಲು ನಿರ್ವಾಹಕರು ಎದೆಯ ಮೇಲೆ ಎಚ್ಚರಿಕೆಯ ಗಂಟೆಯನ್ನು “ಶ್Ï’ ಎಂದು ಬಾರಿಸಬೇಕಾಯಿತು. ಉಗುರು ಕಚ್ಚುತ್ತಾ ಮತ್ತೆ ಪ್ರಶ್ನೆಪತ್ರಿಕೆಯನ್ನು ನೋಡಿದಾಗ, “ಓದಬಾರದಿತ್ತೇ’ ಎಂದೆನಿಸದಿರಲಿಲ್ಲ. ಎಲ್ಲರೂ ಬರೆಯುವುದನ್ನು ನೋಡಿದಾಗ, “ಪಾಪಿಗಳು ನನಗೂ ಪರೀಕ್ಷೆಯ ಬಿಸಿ ತಟ್ಟೋ ಹಾಗೆ ಮಾಡದೆ, ತಾವು ಮಾತ್ರ ನೂರಕ್ಕೆ ಇನ್ನೂರು ತೆಗೆಯುವಂತೆ ಬರೆಯುತ್ತಿದ್ದಾರೆ’ ಎಂದು ಸಿಟ್ಟು ಕುದಿಯುತಿತ್ತು. ಗಡಿಯಾರದ ಮುಳ್ಳಿಗೂ ಪೆನ್ನಿನ ಮುಳ್ಳಿಗೂ ಪೈಪೋಟಿ ಇಟ್ಟಿದ್ದರೆ ಪೆನ್ನೇ ಗೆಲ್ಲುತ್ತಿತ್ತು. “ನಾನೂ ಓದಿರುತ್ತಿದ್ದರೆ’ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೆ.
ಹೀಗೆ ಯೋಚನಾಲಹರಿಯೊಳಗೆ ಸಿಲುಕಿಕೊಂಡವಳನ್ನು ತನ್ನತ್ತ ಎಳೆದುಕೊಂಡವಳು “ಅವಳು’! ಅಯ್ಯೋ, ನಿನ್ನೆಯೂ ಇದೇ ಚೂಡಿದಾರದಲ್ಲಿದ್ದಳು, ಅವಳು! ಥೋ ಪರೀಕ್ಷೆಯ ಬಿಸಿ ಮೇಲೆ ಇದೂ ಒಂದು ತುಪ್ಪ ಬೇಕಾ? ಎಂದೆಲ್ಲ ಅನಿಸಿ ಅದೇನೋ ಮೆದುಳು ಹೇಳಿಕೊಟ್ಟದ್ದನ್ನೆಲ್ಲ ಗೀಚಲು ಶುರುಮಾಡಿದೆ.
ಪರೀಕ್ಷೆ ಮುಗಿಸಿ ಬಂದಾಗ ಹುಡುಗಿಯರೆಲ್ಲ ಏನೋ ಪಿಸುಗುಟ್ಟುತ್ತಿದ್ದರು. ಕಿವಿ ಚುರುಕಾಯಿತು. ಅವಳ ಬಗೆಗಿನ ಮಾತುಗಳೇ ಕೇಳುತ್ತಿದ್ದವು. ಹೆಸರು ಪ್ರೀತಾ. ನನಗೆ ಅನಿಸಿದ್ದು ಸುಳ್ಳಾಗಿರಲಿಲ್ಲ… ಮೊದಲ ದಿನದ ಪರೀಕ್ಷೆಯಿಂದಲೂ ಆಕೆ ಅದೊಂದೇ ಉಡುಪಿನಲ್ಲಿದ್ದಾಳಂತೆ. ಅದೂ ಎಲ್ಲೋ ಒಂದು ಕಡೆ ಹರಿದಿತ್ತು. ಕೊಳೆಯಾಗಿತ್ತು. ಪ್ರೀತಾಳ ಪ್ರೀತಿಯ ಚೂಡಿದಾರದ ಹಿಂದೆ ಒಂದು ಕತೆಯೇ ಇತ್ತು.
ಅದು ಅವಳ ಅದೃಷ್ಟದ ಚೂಡಿದಾರವಾಗಿತ್ತು. ಯಾಕೋ ತುಂಬಾ ಕುತೂಹಲವೆನಿಸಿತು. ಗೆಳತಿಯರ ಮಾತುಗಳಿಂದ ಪ್ರಭಾವಿತಳಾಗಿ ಅವಳನ್ನು ಗಮನಿಸಲು ಶುರುಮಾಡಿದೆ. ಪರೀಕ್ಷೆ ಇದ್ದಷ್ಟು ದಿನ ಬಟ್ಟೆ ಒಗೆಯಲಿಲ್ಲ. ಅದೇ ಹರಿದ ಚೂಡಿದಾರದಲ್ಲಿ ಮಾನ ಕಾಪಾಡಿಕೊಳ್ಳುತ್ತಿದ್ದಳು. ರಾತ್ರಿ ಮಲಗುವ ಮುನ್ನ ಪೆನ್ನು ಎಂಬ ಶಸ್ತ್ರವನ್ನು ದೇವರಿಗೆ ಒಪ್ಪಿಸಿ, ಬೆಳಗ್ಗೆ ಅದನ್ನು ಹಿಡಿದು ಹತ್ತು ನಿಮಿಷದ ಪ್ರಾರ್ಥನೆ ಸಲ್ಲಿಸಿ, ಕಾಲೇಜಿನ ಕಡೆ ನಡೆಯುತ್ತಿದ್ದಳು. ಹಾಸ್ಟೆಲಿನಲ್ಲಿ ಓದುವಾಗಲೂ ಅಷ್ಟೇ… ಹರಿದ ಒಂದು ಅಂಗಿ, ಜಾಕೆಟು, ಮಣ್ಣಿನ ಬಣ್ಣದ ಪ್ಯಾಂಟು, ಓದುವ ಮುನ್ನ ತನ್ನ ಇಷ್ಟ ದೇವರನ್ನೆಲ್ಲ ನೆನೆದು, ಒಂದು ಕಾಗದದಲ್ಲಿ ಬರೆದು, ಒಂದು ಕಣ್ಣು ದೇವರ ಹೆಸರುಗಳನ್ನು ನೋಡುತ್ತಿದ್ದರೆ, ಇನ್ನೊಂದು ಕಣ್ಣು ಪುಸ್ತಕವನ್ನು ನೋಡುತ್ತಿರುತ್ತದೆ. ಮುಂಜಾನೆ ನಿದಿರೆಯಿಂದ ಎದ್ದು ಒಂದುವೇಳೆ ತಪ್ಪಿ ನಮ್ಮ ಮುಖ ಕಂಡರೂ ವಾಪಸು ಮಲಗಿ ಮತ್ತೆ ಎದ್ದು ಅರ್ಧ ತಾಸು ದೇವರ ಜೊತೆ ಒಪ್ಪಂದದ ಮಾತುಕತೆಯಾಗುತ್ತದೆ. ಬಳಸೋ ಕನ್ನಡಿಯೂ ಒಂದೇ ಆಗಿರಬೇಕು. ಹೋಗೋವಾಗ ಪೊರಕೆಯನ್ನು ನೋಡೋ ಹಾಗೂ ಇಲ್ಲ. ಇನ್ನೂ ಏನೇನೋ! ಇಷ್ಟೆಲ್ಲ ನಡೆಯುತ್ತಿದ್ದರೂ ನನಗೆ ಅದು ಗೊತ್ತೇ ಇರಲಿಲ್ಲ!
ಅದೃಷ್ಟವನ್ನು ನಂಬಿ ವಿಚಿತ್ರ ದಿನಚರಿಗೆ ಒಗ್ಗಿಕೊಂಡವಳು ಯಾವಾಗ ಮೌಡ್ಯವನ್ನು ಬದಿಗೊತ್ತಿ ನಮ್ಮೊಂದಿಗೆ ಬೆರೆಯುತ್ತಾಳ್ಳೋ ಗೊತ್ತಿಲ್ಲ. ಸದ್ಯಕ್ಕಂತೂ ಅದೃಷ್ಟ ಖುಲಾಯಿಸಿ ಅಂಕಗಳು ಚಿರತೆಯ ವೇಗದಲ್ಲಿ ಏರುತ್ತಿವೆ. ಅದನ್ನೇನೋ ಸಹಿಸಿಕೊಂಡೇನು, ಆದರೆ ಅವಳ ಒಳ್ಳೊಳ್ಳೆಯ ಉಡುಪುಗಳು ಮೂಲೆಗುಂಪಾಗುವುದನ್ನು ನೋಡಲಾಗುತ್ತಿಲ್ಲವಷ್ಟೆ!
ದೀಪ್ತಿ ಚಾಕೋಟೆ