Advertisement

ಚೊಳಚಗುಡ್ಡ; ಅನಾಥವಾದ ವೀರ ಸೈನಿಕನ ಸ್ಮಾರಕ

08:16 AM Jul 26, 2019 | Suhan S |

ಬಾದಾಮಿ: ಕಳೆದ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ವೀರಮರಣ ಹೊಂದಿದ ತಾಲೂಕಿನ ಚೊಳಚಗುಡ್ಡ ಗ್ರಾಮದ ಶಿವಬಸಯ್ಯ ಕುಲಕರ್ಣಿ ಅವರ ತಾಯಿ ಸಂಕಷ್ಟದ ಜೀವನ ನಡೆಸುತ್ತಿದ್ದರೆ, ಗ್ರಾಮದಲ್ಲಿನ ವೀರ ಸೈನಿಕನ ಸ್ಮಾರಕ ಅನಾಥವಾಗಿದೆ.

Advertisement

ವೀರ ಸೈನಿಕ ಶಿವಬಸಯ್ಯ ಅವರ ತಂದೆ ಬಸಯ್ಯ ಕುಲಕರ್ಣಿ ಕಳೆದ 2018 ಡಿಸೆಂಬರ್‌ 9 ರಂದು ನಿಧನರಾಗಿದ್ದಾರೆ. ತಾಯಿ ಬಸವಣ್ಣೆವ್ವ, ಹಳೆಯ ಮನೆಯಲ್ಲಿ ವಾಸವಾಗಿದ್ದಾಳೆ. ಶಿವಬಸಯ್ಯ ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದು, ಪತ್ನಿ ತವರು ಮನೆ ಕುಷ್ಟಗಿಯಲ್ಲಿ ಸರ್ಕಾರ ಮಂಜೂರು ಮಾಡಿದ ಪೆಟ್ರೋಲ್ ಬಂಕ್‌ ನೋಡಿಕೊಂಡಿದ್ದಾರೆ. ಮೊದಲ ಪುತ್ರ ವಿಶಾಲ ಶಿವಬಸಯ್ಯ ಕುಲಕರ್ಣಿ ಎನ್‌.ಟಿ.ಟಿ.ಎಫ್‌.ವಿದ್ಯಾರ್ಹತೆ ಪಡೆದು ಕುಷ್ಟಗಿಯಲ್ಲಿ ವಾಸವಾಗಿದ್ದಾನೆ. ಇನ್ನೋರ್ವ ಮಗಳು ಸಹನಾ ಶಿವಬಸಯ್ಯ ಕುಲಕರ್ಣಿ ಸದ್ಯ ಬಾಗಲಕೋಟೆಯಲ್ಲಿ ಇಂಜಿನಿಯರಿಂಗ್‌ ಪದವಿ ಓದುತ್ತಿದ್ದಾಳೆ.

ಮೊದಲ ವೀರ ಸೈನಿಕ: 1999 ಜುಲೈ 26 ರಂದು ಕಾರ್ಗಿಲ್ ಯುದ್ಧ ನಡೆದಾಗ, ಶತ್ರು ಸೈನ್ಯ ಹಾಕಿದ ಬಾಂಬ್‌ಗ ವೀರ ಮರಣ ಹೊಂದಿದ ರಾಜ್ಯದ ಮೊದಲ ಸೈನಿಕ ಶಿವಬಸಯ್ಯ ಕುಲಕರ್ಣಿ. ಆಗ ಇಡೀ ರಾಜ್ಯದಲ್ಲಿ ಈ ಸೈನಿಕನ ಸ್ಮರಣೆ ನಡೆದಿತ್ತು. ಬಡತನದಲ್ಲಿ ಹುಟ್ಟಿ ಬೆಳೆದು, ಸೈನ್ಯದಲ್ಲಿ ಮರಣ ಹೊಂದಿದ ಈ ಸೈನಿಕನ ಹೆಸರಿನಲ್ಲೇ ಹಲವಾರು ಜಾನಪದ ಹಾಡುಗಳು ರಚನೆಯಾದವು. ಅವುಗಳಿಗೆ ಭಾರಿ ಡಿಮ್ಯಾಂಡ್‌ ಕೂಡ ಬಂದಿತ್ತು. ಶಿವಬಸಯ್ಯನ ಕಥೆ ಕೇಳಿದವರೆಲ್ಲ ಕಣ್ಣೀರಾಗಿದ್ದರು.

ಅನಾಥವಾದ ಸ್ಮಾರಕ: ಈ ಸೈನಿಕನ ಹೆಸರಿನಲ್ಲಿ ಚೋಳಚಗುಡ್ಡ ಗ್ರಾಮದ ಮುಖ್ಯರಸ್ತೆಯ ಪಕ್ಕದಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಸ್ಮಾರಕದ ಸುತ್ತ ಮುತ್ತಲೂ ಗಲೀಜಿನಿಂದ ಕೂಡಿದೆ. ಪ್ರತಿ ವರ್ಷ ಸ್ವಾತಂತ್ರ ದಿನಾಚರಣೆ, ಕಾರ್ಗಿಲ್ ವಿಜಯೋತ್ಸವದ ದಿನಗಳಲ್ಲಿ ಮಾತ್ರ ಸ್ವಚ್ಚತೆ ಮಾಡಲಾಗುತ್ತದೆ. ಉಳಿದ ದಿನಗಳಲ್ಲಿ ಸ್ವಚ್ಚತೆ ಇಲ್ಲಿ ಅನಾಥವಾಗಿದೆ. ತಾಲೂಕಾಡಳಿತವೂ ಸಹ ಇಂತಹ ವೀರಯೋಧರಿಗೆ ಯಾವುದೇ ಮುತು ವರ್ಜಿ ವಹಿಸದಿರುವುದು ದುರ್ದೈವ.

ಸಂಕಷ್ಟದಲ್ಲಿ ಕುಟುಂಬ: ಶಿವಬಸಯ್ಯನವರ ತಂದೆ ಮರಣ ಹೊಂದಿದ್ದಾರೆ. ಈಗ ತಾಯಿ ಬಸವಣ್ಣೆವ್ವ ಇಂದಿಗೂ ಹಳೆಯ ಮನೆಯಲ್ಲಿ ವಾಸವಾಗಿದ್ದಾಳೆ. ಈವರೆಗೆ ತಾಯಿಗೆ ಯಾವುದೇ ಆರ್ಥಿಕ ಸಹಾಯ ಸಿಕ್ಕಿಲ್ಲ. ಹೆಂಡತಿ ನಿರ್ಮಲಾ ಸದ್ಯ ಕುಷ್ಟಗಿಯಲ್ಲಿ ಪೆಟ್ರೋಲ್ ಪಂಪ ನಡೆಸುತ್ತಾ ಜೀವನ ನಡೆಸುತ್ತಿದ್ದಾರೆ. ಸರಕಾರದಿಂದ 10 ಎಕರೆ ಜಮೀನು ನೀಡಲಾಗಿದೆ.

Advertisement

ಸಹಾಯದ ನಿರೀಕ್ಷೆಯಲ್ಲಿ ಕುಟುಂಬ: ಸರಕಾರ ಪ್ರತಿ ವರ್ಷ ಕಾರ್ಗಿಲ್ ವಿಜಯೋತ್ಸವ ಬಂದಾಗ ಮಾತ್ರ ಸಾಕಷ್ಟು ಆಶ್ವಾಸನೆ ನೀಡುತ್ತಾ ಕಾಲ ಕಳೆಯುತ್ತದೆ. ಆದರೆ ಇಂತಹ ವೀರಯೋಧರ ಕುಟುಂಬದ ಸ್ಥಿತಿ ಸುಧಾರಣೆಗೆ ದಿಟ್ಟ ಹೆಜ್ಜೆ ಇಡಬೇಕಾಗಿದೆ. ತಾಯಿ ಬಸವಣ್ಣೆವ್ವ, ಮುಪ್ಪಾವಸ್ಥೆಯಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಇವರಿಗೆ ಸರಕಾರ ಆರ್ಥಿಕ ಸಹಾಯ ನೀಡಿ, ಜೀವನ ನಡೆಸಲು ಸಹಾಯವಾಗಬೇಕಿದೆ.

ಸಂಸದರ ನಿರ್ಲಕ್ಷ: ಇದೇ ಚೋಳಚಗುಡ್ಡ ಗ್ರಾಮವನ್ನು ಸಂಸದರು ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ವೀರ ಸೈನಿಕನ ಸ್ಮಾರಕ ಅಭಿವೃದ್ಧಿ ಹಾಗೂ ಸಂಸದರ ಆದರ್ಶ ಗ್ರಾಮದ ಅಭಿವೃದ್ಧಿಗೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೊಪ ಕೇಳಿ ಬಂದಿದೆ.

ಚೋಳಚಗುಡ್ಡ ಗ್ರಾಮದ ಯುವಕರು, ಸದ್ಯ 15 ಜನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ 25 ಜನರು ಸೇನೆಯಿಂದ ನಿವೃತ್ತರಾಗಿದ್ದಾರೆ.

ನಮ್ಮ ಚೊಳಚಗುಡ್ಡ ಗ್ರಾಮದ ಬಹಳಷ್ಟು ಯುವಕರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಿವಬಸಯ್ಯ ಕುಲಕರ್ಣಿ ಅವರ ಸ್ಮಾರಕವನ್ನು ಅಭಿವೃದ್ಧಿಪಡಿಸಬೇಕು. ಸುತ್ತಮುತ್ತಲು ಸ್ವಚ್ಚತೆ ಕಾಪಾಡಬೇಕು. ಗ್ರಾಮದವನ್ನು ಮಾದರಿ ಗ್ರಾಮವನ್ನಾಗಿ ಮಾಡಬೇಕು. ವೀರಯೋಧರಿಗೆ ಚಿರಋಣಿಯಾಗಿರಬೇಕು.•ಇಷ್ಟಲಿಂಗ ನರೇಗಲ್, ಸಾಮಾಜಿಕ ಕಾರ್ಯಕರ್ತ, ಚೊಳಚಗುಡ್ಡ.

 

•ಶಶಿಧರ ವಸ್ತ್ರದ

Advertisement

Udayavani is now on Telegram. Click here to join our channel and stay updated with the latest news.

Next