ಈ ದುನಿಯಾದಲ್ಲಿ ಮೂರು ಥರ ಗಂಡಸ್ರು ಇರ್ತಾರೆ. `ರೂಲ್ ನ ಫಾಲೋ ಮಾಡೋರು’, `ರೂಲ್‍ನ ಬ್ರೇಕ್ ಮಾಡೋರು’, `ಮೂರನೇಯವರು ನನ್ನ ಥರ ರೂಲ್ ಮಾಡೋರು’. ಹೀಗಂತ ನಮ್ಮ ಅಪ್ಪು ಯುವರತ್ನ ಸಿನಿಮಾದಲ್ಲಿ ಡೈಲಾಗ್ ಹೊಡೆದಿದ್ದರು. ಈಗ ಇದೇ ಡೈಲಾಗ್ ಪ್ರಕಾರ ರೂರಲ್ ಸ್ಟಾರ್ ಅಂಜನ್ ರೂಲ್ ಮಾಡಲು ರೆಡಿಯಾಗುತ್ತಿದ್ದಾರೆ. ಅದಕ್ಕಾಗಿ `ಚೋಳ’ನ ಅವತಾರ ಎತ್ತಿದ್ದಾರೆ. ಲಾಂಗು, ಮಚ್ಚು, ಗನ್ನು, ಗ್ಯಾಸ್ ಹೀಗೆ ಕೈಗೆ ಸಿಕ್ಕಿದೆಲ್ಲವನ್ನೂ ಆಯುಧವನ್ನಾಗಿ ಮಾಡ್ಕೊಂಡು ಅಖಾಡಕ್ಕಿಳಿದಿದ್ದಾರೆ. ಕಣ್ಣಲ್ಲೇ ಕೆಂಡ ಉಗುಳುತ್ತಾ ಎದುರಾಳಿಗಳನ್ನು ಎಡೆಮುರಿ ಕಟ್ಟುತ್ತಿರುವ ರೂರಲ್ ಸ್ಟಾರ್ ಅಂಜನ್, 1 ನಿಮಿಷ 22 ಸೆಕೆಂಡ್ ಟೀಸರ್ ಮೂಲಕವೇ ಸಿನಿಮಾ ಪ್ರೇಮಿಗಳನ್ನು ದಂಗು ಬಡಿಸಿದ್ದಾರೆ.
ರೂರಲ್ ಸ್ಟಾರ್ ಅಂಜನ್ ಬಗ್ಗೆ ಬಹುಷಃ ನಿಮಗೆಲ್ಲ ಗೊತ್ತಿರುತ್ತೆ. ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ. ಗ್ರಾಮೀಣ ಭಾಗದಿಂದ ಗಾಂಧಿನಗರಕ್ಕೆ ಬಂದು 2021ರಲ್ಲಿ ಯರ್ರಾಬಿರ್ರಿ ಹೆಸರಲ್ಲೊಂದು ಮೂವೀ ಮಾಡಿದ್ದರು. ಸಿನಿಮಾ ಕುಟುಂಬದ ಹಿನ್ನಲೆ ಇಲ್ಲದೇ, ಗಾಡ್‍ಫಾದರ್‍ಗಳ ಸಹಾಯವಿಲ್ಲದೇ ಸ್ಯಾಂಡಲ್‍ವುಡ್ ಪ್ರವೇಶಿಸಿದ್ದ ಅಂಜನ್, ತಮ್ಮ ಪ್ರತಿಭೆಯ ಕರಾಮತ್ತಿನಿಂದಲೇ ಕನ್ನಡ ಕಲಾಭಿಮಾನಿಗಳಿಂದ ಜೈಕಾರ ಹಾಕಿಸಿಕೊಂಡಿದ್ದರು. ಕಲೆ ಯಾರಪ್ಪನ್ನ ಸ್ವತ್ತು ಅಲ್ಲ ಎಂಬುದನ್ನು ಚೊಚ್ಚಲ ಚಿತ್ರದಲ್ಲೇ ಸಾಬೀತುಪಡಿಸಿ ಪ್ರೇಕ್ಷಕ ಪ್ರಭುಗಳಿಂದ ರೂರಲ್ ಸ್ಟಾರ್ ಪಟ್ಟ ಕಟ್ಟಿಸಿಕೊಂಡಿದ್ದರು. ಹೀಗೆ ಗಾಂಧಿನಗರದಲ್ಲಿ ರೂರಲ್ ಸ್ಟಾರ್ ಉಗಮವಾಗಿತ್ತು. ಈಗ ಅದೇ ಜಾಗದಲ್ಲಿ ರೂಲ್ ಮಾಡಲು ಹೊರಟಿದ್ದಾರೆ. `ಚೋಳ’ ನಾಗಿ ಕನ್ನಡಿಗರ ಮುಂದೆ ಬರಲು ರೆಡಿಯಾಗುತ್ತಿದ್ದಾರೆ. ಚಂದನವನದಲ್ಲಿ ಚೋಳನ ಅಬ್ಬರ-ಆರ್ಭಟ ಹೇಗಿರಲಿದೆ ಅನ್ನೋದನ್ನ ಟೀಸರ್ ಮೂಲಕ ಹರವಿಟ್ಟಿದ್ದಾರೆ.
`ಚೋಳ’ ಹೆಸರು ಕೇಳಿದಾಕ್ಷಣ ಇದೊಂದು ಐತಿಹಾಸಿಕ ಚರಿತ್ರೆ, ರಾಜಮಹಾರಾಜರ ಕಥೆ ಎಂದೆನಿಸೋದು ಸಹಜ. ಆದರೆ,`ಚೋಳ’ ರಾಜವಂಶದ ಚರಿತ್ರೆಯನ್ನೊಳಗೊಂಡಿರುವ ಸಿನಿಮಾವಲ್ಲ. ಬದಲಾಗಿ ಆಧುನಿಕ ಕಥೆಯನ್ನ ಒಡಲಲ್ಲಿಟ್ಟುಕೊಂಡಿರುವ ಚಿತ್ರ. ಸ್ನೇಹ, ಪ್ರೀತಿ, ರೌಡಿಸಂ ಸೇರಿದಂತೆ ಒಂದಿಷ್ಟು ಮಾಡ್ರನ್ ಎಲಿಮೆಂಟ್ಸ್ ಜೊತೆ ಮಾಸ್ ಆಗಿ ಬರುತ್ತಿರುವ ಸಿನಿಮಾ. ಕಥಾನಾಯಕ ಅಂಜನ್ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಹೈವೋಲ್ಟೇಜ್ ಆ್ಯಕ್ಷನ್ ಸೀನ್ಸ್‍ಗಳ ಮೂಲಕ ಚಿತ್ರಪ್ರೇಮಿಗಳಿಗೆ ಕಿಕ್ ಕೊಟ್ಟಿದ್ದಾರೆ. ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದ ಅಂಜನ್, `ಚೋಳ’ ಚಿತ್ರದಿಂದ ಗಾಂಧಿನಗರದಲ್ಲಿ ಮಾಸ್ ಹೀರೋ ಆಗಿ ನೆಲೆಕಂಡುಕೊಳ್ಳುವ ಸೂಚನೆ ಟೀಸರ್ ನಿಂದಲೇ ಸಿಕ್ಕಿದೆ.
ಇಲ್ಲಿತನಕ ಗಂಧದಗುಡಿಯಲ್ಲಿ ನಿರ್ಮಾಪಕರಾಗಿದ್ದ ಸುರೇಶ್ ಡಿ.ಎಂ ಅವರು `ಚೋಳ’ ಸಿನಿಮಾದಿಂದ ನಿರ್ದೇಶಕರಾಗುತ್ತಿದ್ದಾರೆ. ಇದೇ ಮೊದಲ ಭಾರಿಗೆ ಡೈರೆಕ್ಟರ್ ಹ್ಯಾಟ್ ತೊಟ್ಟು ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕರ ಕುರ್ಚಿಲಿ ಸುರೇಶ್ ಅವರು ಫಸ್ಟ್ ಟೈಮ್ ಕೂತಿದ್ದರಿಂದ `ಚೋಳ’ ಸಿನಿಮಾವನ್ನ ತೆರೆಮೇಲೆ ಹೇಗೆ ತರಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಆ ಕ್ಯೂರಿಯಾಸಿಟಿಗೆ ಟೀಸರ್ ಬ್ರೇಕ್ ಹಾಕಿದೆ. ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಹೊಸತನ ಹಾಗೂ ಪ್ರಯೋಗಾತ್ಮಕ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕಾಣಿಕೆಯನ್ನಾಗಿ ನೀಡುವ ಹಂಬಲವಿರುವ ಸುರೇಶ್, `ಚೋಳ’ ಸಿನಿಮಾದ ಮೂಲಕ ಹೊಸದೇನನ್ನೋ ನೀಡಬಲ್ಲರು ಎಂಬುದು ಟೀಸರ್ ನಿಂದಲೇ ಬಹಿರಂಗವಾಗಿದೆ.
ವಿಶೇಷ ಅಂದರೆ ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆ ಕೂಡ ಹೊತ್ತಿದ್ದಾರೆ. ಸೃಷ್ಟಿ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲೇ `ಚೋಳ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ `ಪ್ರಯಾಣಿಕರ ಗಮನಕ್ಕೆ’, `ರಣಹೇಡಿ’ ಸೇರಿದಂತೆ ಕೆಲ ಸಿನಿಮಾಗಳನ್ನ ನಿರ್ಮಿಸಿದ್ದರು. ಈ ಭಾರಿ ಡೈರೆಕ್ಷನ್ ಜೊತೆಗೆ ಪ್ರೊಡಕ್ಷನ್ ಇನ್ಚಾರ್ಜ್ ತಗೊಂಡಿದ್ದಾರೆ. ಡೆಬ್ಯೂ ಚಿತ್ರದಲ್ಲೇ ಭರವಸೆ ಮೂಡಿಸಿದ ಬಡವರ ಮನೆ ಹುಡುಗನ್ನ ಮಾಸ್ ಹೀರೋ ಮಾಡಲಿಕ್ಕೆ ಹೊರಟಿದ್ದಾರೆ. ತಮ್ಮೊಟ್ಟಿಗೆ ರೂರಲ್ ಸ್ಟಾರ್ ಅಂಜನ್‍ರನ್ನು ಅದೃಷ್ಟ ಪರೀಕ್ಷೆಗೊಳಪಡಿಸಿದ್ದಾರೆ. ಮಾಸ್ ಲುಕ್ಕಿನಲ್ಲಿ, ಎರಡು ಡಿಫರೆಂಟ್ ಶೇಡ್ ನಲ್ಲಿ ಎಂಟ್ರಿಕೊಡಲಿರೋ ಚೋಳ ಅಲಿಯಾಸ್ ರೂರಲ್ ಸ್ಟಾರ್ ಗೆ ದಿಶಾ ಪಾಂಡೆ ಮತ್ತು ಪ್ರತಿಭಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ.
ದಿನೇಶ್ ಮಂಗಳೂರು ಮತ್ತು ಬಲ ರಾಜವಾಡಿ ವಿಲನ್ನುಗಳಾಗಿ ನಟಿಸಿದ್ದಾರೆ. ಅವರೆಲ್ಲರ ಪಾತ್ರಗಳ ಝಲಕ್ಕುಗಳು ಟೀಸರ್ ನಲ್ಲಿ ಕಾಣಿಸಿವೆ. ಅದು ಪ್ರೇಕ್ಷಕರು ಥ್ರಿಲ್ ಆಗುವಂತೆಯೂ ಮಾಡಿದೆ. ಇನ್ನುಳಿದಂತೆ ತುಳುವಿನಲ್ಲಿ ಸೂಪರ್ ಹಿಟ್ ಆಗಿರುವ, ರೂಪೇಶ್ ಶೆಟ್ಟಿ ನಿರ್ದೇಶನದ ಸರ್ಕಸ್ ಎಂಬ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಲಾಯ್ ವ್ಯಾಲೆಂಟೈನ್ ಸಲ್ಡಾನ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮನಮೋಹನ್ ರಾಯ್ ರಂಥಾ ಹಿರಿಯ ನಟರಿರುವ ಈ ತಾರಾಗಣದಲ್ಲಿ ಪ್ರತಿಭಾನ್ವಿತ ನಟ ವರ್ಧನ್, ಮಜಾ ಭಾರತ ಖ್ಯಾತಿಯ ಜಗಪ್ಪ, ಮಿಂಚು ಮುಂತಾದವರಿದ್ದಾರೆ. ಸಂದೀಪ್ ಹೊನ್ನಾಳ್ಳಿ ಛಾಯಾಗ್ರಹಣ, ಶಿವಕುಮಾರ್ ಎ. ಸಂಕಲನ ಈ ಚಿತ್ರಕ್ಕಿದೆ. ಭರದಿಂದ ಚಿತ್ರೀಕರಣ ಸಾಗುತ್ತಿದ್ದು, ಆದಷ್ಟು ಬೇಗ ಟ್ರೇಲರ್, ಹಾಡುಗಳನ್ನು ತೋರಿಸಿ
ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ.