ಚಿಕ್ಕೋಡಿ: ಹಿರಿಹೊಳೆ ಮಹಾಪೂರದಲ್ಲಿ ನಮ್ಮ ಮನೆಗಳು ಸಂಪೂರ್ಣ ಬಿದ್ದು ಹೋಗಿವೆ. ಸಾಂತ್ವನ ಹೇಳಲು ಬಂದ ಮಂತ್ರಿಗೋಳ, ಆಫೀಸರ್ ತಾತ್ಕಾಲಿಕ ಶೆಡ್ ಹಾಕಿ ಕೊಡತೀವಿ ಅಂತ ಬರೇ ಸುಳ್ಳ ಹೇಳಿ ಸಮಾಧಾನಪಡಿಸಿ ಹೋದವರು ಮರಳಿ ಬಂದಿಲ್ಲ, ಈಗ ಸಮುದಾಯ ಭವನ, ದನದ ಕೊಟ್ಟಿಗ್ಯಾಗ ನಮ್ಮ ಜೀವನ ನಡೆದಿದೆ ಎಂದು ಸಂತ್ರಸ್ತರು ಮಮ್ಮಲನೆ ಮರುಗುತ್ತಿರುವ ದೃಶ್ಯ ನಿಜಕ್ಕೂ ಕಣ್ಣಿರು ತರಿಸುವಂತಿದೆ.
ಕೃಷ್ಣಾ ನದಿ ಭೀಕರ ಪ್ರವಾಹ ಬಂದು ಅದೆಷ್ಟೋ ಗ್ರಾಮಗಳ ಜನರ ಬದುಕು ಮೂರಾಬಟ್ಟೆ ಮಾಡಿಹೋಗಿದೆ. ಅದರಲ್ಲಿ ಮಾಂಜರಿ ಗ್ರಾಮವೂ ಒಂದು. ಇಲ್ಲಿಯ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಇಂದಿಗೂ ಮನೆ ಮಠ ಕಳೆದುಕೊಂಡು ಸಂತ್ರಸ್ತರು ಸಮುದಾಯ ಭವನ ಮತ್ತು ದನದ ಕೊಟ್ಟಿಗೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಆದರೂ ಸರಕಾರ ಮಾತ್ರ ತಾತ್ಕಾಲಿಕ ಶೆಡ್ ನಿರ್ಮಿಸಿ ಸಂತ್ರಸ್ತರ ಕಣ್ಣಿರು ಒರೆಸಲು ಮುಂದೆ ಬರುತ್ತಿಲ್ಲ ಎಂಬ ಕೊರಗು ಸಂತ್ರಸ್ತರನ್ನು ಕಾಡತೊಡಗಿದೆ.
ಕಳೆದ ಒಂದು ತಿಂಗಳು ಹಿಂದೆ ಯಾರೂ ಕಂಡರಿಯದ ಭೀಕರ ಪ್ರವಾಹ ಬಂದು ಕೃಷ್ಣಾ ನದಿ ದಡದಲ್ಲಿರುವ ಮಾಂಜರಿ ಗ್ರಾಮದ ಜನರ ಬದುಕನ್ನು ಕಸಿದುಕೊಂಡು ಹೋಗಿದೆ. ಗ್ರಾಮದಲ್ಲಿ ಸುಮಾರು 500 ಕ್ಕೂ ಹೆಚ್ಚಿನ ಮನೆಗಳು ನೆಲಕ್ಕೆ ಉರುಳಿವೆ. ಮತ್ತು ದಲಿತ ಕಾಲೋನಿಯಲ್ಲಿ ವಾಸ ಮಾಡುವ ಸುಮಾರು 100 ಕ್ಕೂ ಹೆಚ್ಚಿನ ಕುಟುಂಬಗಳ ಮನೆಗಳು ಸಂಪೂರ್ಣವಾಗಿ ಬಿದ್ದು ಹೋಗಿವೆ. ಕೆಲ ಸಂತ್ರಸ್ತರು ಸಮುದಾಯ ಭವನದಲ್ಲಿ ಆಶ್ರಯ ಪಡೆದುಕೊಂಡರೆ ಇನ್ನೂ ಕೆಲವರು ದನಗಳ ಕೊಟ್ಟಿಗೆಯಲ್ಲಿ ಆಶ್ರಯ ಪಡೆದುಕೊಂಡು ಸರಕಾರದ ಸಹಾಯ ಹಸ್ತದ ಎದುರು ನೋಡುತ್ತಿದ್ದಾರೆ.
ಗ್ರಾಮದ ಅಂಬೇಡ್ಕರ ಸಮುದಾಯ ಭವನದಲ್ಲಿ ನಾಲ್ಕೈದು ಕುಟುಂಬಗಳು ಅಲ್ಪಸ್ವಲ್ಪ ಜಾಗದಲ್ಲಿ ಸುತ್ತುಕಡೆ ಸೀರೆ ಪರದೆ ಕಟ್ಟಿಕೊಂಡು ಅಷ್ಟರಲ್ಲಿ ಜೀವನ ನಡೆಸುತ್ತಿದ್ದಾರೆ. ಇನ್ನುಳಿದವರು ಗ್ರಾಮದ ದನದ ಕೊಟ್ಟಿಗೆಯಲ್ಲಿ ಆಶ್ರಯ ಪಡೆದುಕೊಂಡು ಜೀವನ ನಡೆಸುತ್ತಿರುವ ಸ್ಥಿತಿ ಪ್ರಾಣಿಗಳಿಗಿಂತ ಕಡೆಯಾಗಿದೆ. ಪ್ರವಾಹದಲ್ಲಿ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮನೆಗಳು ಬಿದ್ದು ಹೋಗಿದ್ದವು. ಆದರೂ ಜಗ್ಗದ ಸಂತ್ರಸ್ತರು ಬಿದ್ದಿರುವ ಮನೆಯಲ್ಲಿಯೇ ಹೊಸ ಬದುಕು ಕಟ್ಟಿಕೊಳ್ಳಲು ಎಲ್ಲ ರೀತಿಯ ಕಸರತ್ತು ನಡೆಸಿದರು. ಆದರೆ ಆ ವಿಧಿ ಇವರನ್ನು ಮತ್ತೆ ಸಂಕಷ್ಟಕ್ಕೆ ದೂಡುತ್ತ ಹೋಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೇ ಮತ್ತೆ ಮಳೆ ಸುರಿದು ಮನೆಗಳು ಸಂಪೂರ್ಣವಾಗಿ ಕುಸಿಯುವ ಹಾಗೆ ಮಾಡಿದೆ.
ತಾತ್ಕಾಲಿಕ ಶೆಡ್ ಬೇಕು: ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರಕಾರ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿ ಕೊಡಲಿದೆ ಎಂಬ ಭರವಸೆಯ ಮಾತುಗಳೇ ಹೆಚ್ಚಾಗಿವೆ. ಆದರೆ ಇನ್ನೂವರಿಗೂ ಒಂದೂ ಕುಟುಂಬಕ್ಕೆ ಒಂದು ತಾತ್ಕಾಲಿಕ ಶೆಡ್ ನಿರ್ಮಾಣವಾಗಿಲ್ಲ ಎಂಬುದು ಅಲ್ಲಿಯ ಸಂತ್ರಸ್ತರ ಅಳಲು. ಸರಕಾರ ಹಂತ ಹಂತವಾಗಿ ಮನೆ ನಿರ್ಮಿಸಿಕೊಡಲಿ. ಆದರೆ ಈಗ ಕುಟುಂಬದ ಜೊತೆ ಜೀವನ ನಡೆಸಲು ತಾತ್ಕಾಲಿಕ ಶೆಡ್ ನಿರ್ಮಿಸಿ ಕೊಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎನ್ನುತ್ತಾರೆ ಸಂತ್ರಸ್ತ ಮಹಾದೇವ ಇರ್ಯಾಯಿ.
ಸಮನ್ವಯತೆ ಕೊರತೆ: ಪ್ರವಾಹದಿಂದ ಕೋಟ್ಯಂತರ ರೂ. ಹಾನಿಯಾಗಿದೆ. ಎಲ್ಲ ಕಡೆ ಸಮೀಕ್ಷೆ ನಡೆದಿದೆ. ಆದರೆ ಮಾಂಜರಿ ಗ್ರಾಮದಲ್ಲಿ ಮನೆಗಳ ಸಮೀಕ್ಷೆ ಕಾರ್ಯ ನಡೆದಿಲ್ಲ, ಕಂದಾಯ ಇಲಾಖೆ ಮತ್ತು ಗ್ರಾಪಂ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಕಂದಾಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕ ಮಾಡಿದರೆ ಪಂಚಾಯತ್ ಅಧಿಕಾರಿಗಳನ್ನು ಕೇಳಿ ಎನ್ನುತ್ತಾರೆ. ಅವರನ್ನು ಕೇಳಿದರೆ ತಹಶೀಲ್ದಾರರನ್ನು ಕೇಳಿ ಎನ್ನುವ ಮೂಲಕ ಕಂದಾಯ ಮತ್ತು ಪಂಚಾಯತ್ ಅಧಿಕಾರಿಗಳು ನಮ್ಮನ್ನು ಬೀದಿಗೆ ತಳ್ಳಿದ್ದಾರೆ ಎನ್ನುವುದು ಸಂತ್ರಸ್ತರ ಆಕ್ರೋಶ.