ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಕಳೆದ 24 ಗಂಟೆಗಳಲ್ಲಿ 15 ಸಾವಿರ ಕ್ಯೂಸೆಕ್ ನೀರು ಹೆಚ್ಚಾಗಿದೆ.
ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಾದ ಮಹಾಬಲೇಶ್ವರ, ರಾಧಾನಗರಿ, ನವಜಾ, ಪಾಟಗಾಂವ, ಕೊಯ್ನಾ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆ ಸುರಿದಿದೆ. ಇತ್ತ ಗಡಿ ಭಾಗದಲ್ಲಿಯೂ ಮಳೆ ಆಗುತ್ತಿದೆ. ಇದರಿಂದ ಕೃಷ್ಣಾ ಮತ್ತು ಉಪನದಿಗಳಿಗೆ ಸುಮಾರು 85 ಸಾವಿರ ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ದಿನೇ ದಿನೇ ನೀರಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ನದಿಗಳು ಉಕ್ಕಿ ಹರಿಯುತ್ತಿವೆ.
ಇದರಿಂದ ಚಿಕ್ಕೋಡಿ ತಾಲೂಕಿನ ಕೆಳಹಂತದ ಕೃಷ್ಣಾ ನದಿಗೆ ಕಟ್ಟಲಾಗಿರುವ ಕಲ್ಲೋಳ-ಯಡೂರ ಸೇತುವೆ ಜಲಾವೃತಗೊಂಡಿದೆ. ದೂಧಗಂಗಾ ನದಿಗೆ ನಿರ್ಮಿಸಿರುವ ಮಲಿಕವಾಡ-ದತ್ತವಾಡ, ಕಾರದಗಾ-ಭೋಜ, ವೇದಗಂಗಾ ನದಿಗೆ ನಿರ್ಮಿಸಿರುವ ಬೋಜವಾಡಿ-ಕುನ್ನೂರ, ಸಿದ್ನಾಳ- ಅಕ್ಕೋಳ, ಜತ್ರಾಟ-ಭಿವಸಿ ಆರು ಸೇತುವೆಗಳು ಮುಳುಗಡೆಗೊಂಡಿವೆ. ಇರುವುದರಿಂದ ಸಾರ್ವಜನಿಕರು ಸುತ್ತಿ ಬಳಸಿ ಪ್ರಯಾಣ ಮಾಡುತ್ತಿದ್ದಾರೆ. ರಾಜಾಪುರ ಬ್ಯಾರೇಜ್‌ದಿಂದ ರಾಜ್ಯಕ್ಕೆ 65,453 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ದೂಧಗಂಗಾ ಮತ್ತು ವೇದಗಂಗಾ ನದಿಯಿಂದ 20,240 ಕ್ಯೂಸೆಕ್ ನೀರು ಹರಿದು ಕೃಷ್ಣಾ ನದಿಗೆ ಬರುತ್ತಿದ್ದು, ಇದರಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 85,693 ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ 71 ಸಾವಿರ ಕ್ಯೂಸೆಕ್ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ. ಅಲ್ಲಿಂದ 5 ಸಾವಿರ ಕ್ಯೂಸೆಕ್ ನೀರನ್ನು ಆಲಮಟ್ಟಿಯಿಂದ ಹೊರಬಿಡಲಾಗುತ್ತದೆ ಎಂದು ತಹಶೀಲ್ದಾರ ಡಾ| ಸಂತೋಷ ಬಿರಾದಾರ ಮಾಹಿತಿ ನೀಡಿದರು.
ಮಳೆ ಪ್ರಮಾಣ: ಕೊಯ್ನಾ-112 ಮಿಮೀ, ವಾರಣಾ-98ಮಿಮೀ, ಕಾಳಮ್ಮವಾಡಿ- 112ಮಿಮೀ, ನವಜಾ-150 ಸಾಂಗ್ಲಿ-4 ಮಿಮೀ, ರಾಧಾನಗರಿ-104 ಮಿಮೀ, ಪಾಟಗಾಂವ-126 ಮಿಮೀ, ಮಹಾಬಲೇಶ್ವರ-99ಮಿಮೀ, ಕೊಲ್ಲಾಪುರ-19 ಮಿಮೀ ಮಳೆ ಆಗಿದೆ.
ಚಿಕ್ಕೋಡಿ ತಾಲೂಕಿನ ಮಳೆ ವಿವರ: ಚಿಕ್ಕೋಡಿ-5.4 ಮಿಮೀ, ಅಂಕಲಿ-7.4 ಮಿಮೀ, ನಾಗರಮುನ್ನೋಳ್ಳಿ-1.6 ಮಿಮೀ, ಸದಲಗಾ-15.3 ಮಿಮೀ, ಗಳತಗಾ-14.2 ಮಿಮೀ, ಜೋಡಟ್ಟಿ-1.4 ಮಿಮೀ, ನಿಪ್ಪಾಣಿ ಪಿಡಬ್ಲುಡಿ-16.3 ಮಿಮೀ, ನಿಪ್ಪಾಣಿ ಎಆರ್‌ಎಸ್-13.2 ಮಿಮೀ, ಸೌಂದಲಗಾ-20 ಮಿಮೀ ಮಳೆಯಾಗಿದೆ.