ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿದ್ದು, ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ರಾಯಬಾಗ ತಾಲೂಕಿನ ಕುಡಚಿ ಸೇತುವೆ ಹಾಗೂ ಸದಲಗಾ-ಬೋರಗಾಂವ ಸೇತುವೆ ಬುಧವಾರ ಮುಳುಗಡೆಗೊಂಡಿದ್ದು, ಇದರಿಂದ ಸಂಪರ್ಕ ಕಡಿತಗೊಂಡಿದೆ.
ಕೊಯ್ನಾ, ವಾರಣಾ, ಮಹಾಬಳೇಶ್ವರ ಮತ್ತು ನವಜಾ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 150 ರಿಂದ 250 ಮಿಮೀ ಮಳೆ ಸುರಿದಿದೆ. ಹೀಗಾಗಿ ಕೃಷ್ಣಾ ಮತ್ತು ಉಪನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರಲಾರಂಭಿಸಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಬುಧವಾರ 1.80 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಒಂದೇ ದಿನ ಕೃಷ್ಣಾ ನದಿಗೆ 80 ಸಾವಿರ ಕ್ಯೂಸೆಕ್ ನೀರು ಹೆಚ್ಚಳವಾಗಿರುವುದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಮೂಡಿಸಿದೆ.
ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ: ತೋಟಪಟ್ಟಿ ಜನರು ಮುನ್ನಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ, ತಹಶೀಲ್ದಾರ್ ಡಾ| ಸಂತೋಷ ಬಿರಾದಾರ ಸೂಚನೆ ನೀಡಿದ್ದಾರೆ. ಪ್ರತಿ ಗಂಟೆಗೊಮ್ಮ ನದಿ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ಗುರುವಾರ ಮತ್ತಷ್ಟು ನೀರಿನ ಮಟ್ಟ ಹೆಚ್ಚಳವಾಗುವ ಸಂಭವವಿದೆ. ಹೀಗಾಗಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ಹೋಗಬೇಕು ಎಂದು ಮನವಿ ಮಾಡಿದ್ದಾರೆ.
7 ಸೇತುವೆ ಮುಳುಗಡೆ: ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ರಾಯಬಾಗ ತಾಲೂಕಿನ ಕುಡಚಿ ಸೇತುವೆ ಜಲಾವೃತಗೊಂಡಿದೆ. ಸೇತುವೆ ಮೇಲೆ ಎರಡು ಅಡಿಯಷ್ಟು ನೀರು ಹರಿಯುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸಂಚಾರ ಸ್ಥಗಿತಗೊಳಿಸಿದ್ದು, ಪ್ರಯಾಣಿಕರು ಸುತ್ತುಬಳಸಿ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆರು ಸೇತುವೆಗಳ ಮುಳುಗಡೆ ಮುಮದುವರಿದಿದ್ದು, ಸಂಚಾರ ಕಡಿತಗೊಂಡಿವೆ.
ಹೊಲಗದ್ದೆಗಳಿಗೆ ನುಗ್ಗಿದ ನೀರು: ನದಿ ನೀರು ರೈತರ ಜಮೀನುಗಳಿಗೆ ನುಗ್ಗಿದೆ. ಜಮೀನುಗಳಲ್ಲಿ ಬಿತ್ತನೆ ಮಾಡಿದ ಕಬ್ಬು, ಸೋಯಾ, ಹೆಸರು, ಗೋವಿನಜೋಳ, ಶೇಂಗಾ ಮುಂತಾದ ಬೆಳೆಗಳು ನೀರಿನಲ್ಲಿ ಮುಳುಗಿವೆ. ಅದರಂತೆ ಚಿಕ್ಕೋಡಿ ತಾಲೂಕಿನ ಕಲ್ಲೋಳದ ದತ್ತ ದೇವಸ್ಥಾನದ ಗರ್ಭ ಗುಡಿತನಕ ನೀರು ನುಗ್ಗಿದೆ. ಯಕ್ಸಂಬಾದ ಮುಲ್ಲಾನಕಿ ದರ್ಗಾ ಕೂಡಾ ದೂಧಗಂಗಾ ನದಿ ನೀರಿನಿಂದ ಮುಳುಗಡೆಗೊಂಡಿದೆ. ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಸುಕ್ಷೇತ್ರ ದತ್ತ ದೇವಸ್ಥಾನ ಜಲಾವೃತಗೊಂಡು ನಾಲ್ಕು ದಿನ ಕಳೆದಿವೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ದಿಂದ ಕೃಷ್ಣಾ ನದಿಗೆ 1,49,625 ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ದೂಧಗಂಗಾ ಮತ್ತು ವೇದಗಂಗಾ ನದಿಗಳಿಂದ 25,520 ಕ್ಯೂಸೆಕ್ ನೀರು ಹರಿದು ಕೃಷ್ಣಾ ನದಿಗೆ ಸೇರುತ್ತದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಒಟ್ಟು 1.75 ಲಕ್ಷ ಕ್ಯೂಸೆಕ್ ನೀರು ಹರಿದು ಹಿಪ್ಪರಗಿ ಬ್ಯಾರೇಜ್‌ಗೆ ಹೋಗುತ್ತಿದೆ. ಹಿಪ್ಪರಗಿ ಬ್ಯಾರೇಜ್‌ದಿಂದ 2.17 ಲಕ್ಷ ಕ್ಯೂಸೆಕ್ ನೀರನ್ನು ಆಲಮಟ್ಟಿಗೆ ಹರಿದು ಬಡಲಾಗುತ್ತಿದೆ. ಅಲ್ಲಿಂದ 1.75 ಲಕ್ಷ ಕ್ಯೂಸೆಕ್ ನೀರು ನಾರಾಯಣಪುರ ಆಣೆಕಟ್ಟಿಗೆ ಹೋಗುತ್ತಿದೆ ಎಂದು ತಹಶೀಲ್ದಾರ್ ಡಾ| ಸಂತೋಷ ಬಿರಾದಾರ ‘ಉದಯವಾಣಿಗೆ’ ಮಾಹಿತಿ ನೀಡಿದರು.