ಮೋದಕ ಪ್ರಿಯ ಗಣಪತಿಗೆ ನೂರಾರು ಬಗೆಯ ಶೃಂಗಾರ. ವಿವಿಧ ಭಂಗಿಯ ಗಣೇಶನ ಮೂರ್ತಿಯನ್ನು ನಾವು ಕಾಣುತ್ತೇವೆ. ಪರಿಸರ ಸ್ನೇಹಿ ಗಣಪನ ನಾನಾ ಅವತಾರಗಳನ್ನು ನೋಡಿ ಭಕ್ತರು ಖುಷಿಯಿಂದ ತಮ್ಮ ಮೊಬೈಲ್ ನಲ್ಲಿ ಫೋಟೋ ತೆಗೆದುಕೊಳ್ಳುತ್ತಾರೆ. ಇಲ್ಲೊಂದು ಮುದ್ದಾದ ಗಣೇಶ ಸಂಪೂರ್ಣ ಚಾಕ್ಲೇಟ್ ನಿಂದಲೇ ಸಿದ್ಧವಾಗಿ ಅಲಂಕಾರಗೊಂಡಿದ್ದಾನೆ.
ರೆಸ್ಟೋರೆಂಟ್ ವ್ಯಾಪಾರಿ ಹಾಗೂ ಚಾಕೊಲೇಟ್ ತಯಾರಕರಾದ ಹರ್ಜಿಂದರ್ ಸಿಂಗ್ ಎನ್ನುವವರು “ಚಾಕ್ಲೇಟ್ ಗಣಪನ” ರೂವಾರಿ. ಹರ್ಜಿಂದರ್ ಕಳೆದ ಮೂರು ವರ್ಷಗಳಿಂದ ಬರೀ ಚಾಕ್ಲೇಟ್ ಗಳನ್ನು ಉಪಯೋಗಿಸಿಕೊಂಡು ಗಣಪತಿಯನ್ನು ನಿರ್ಮಿಸುತ್ತಿದ್ದು ಈ ಬಾರಿಯೂ ಚಾಕ್ಲೇಟ್ ಗಣಪನಿಗಾಗಿ ವಿಶಿಷ್ಟವಾಗಿ ತಯಾರಿ ಮಾಡಿ ಗಣಪನನ್ನು ಸಿದ್ದಮಾಡಿದ್ದಾರೆ.
ಈ ಬಾರಿ 20 ಕ್ಕಿಂತ ಕಡಿಮೆ ಬಾಣಸಿಗರನ್ನು ಸೇರಿಸಿಕೊಂಡು 10 ದಿನದಲ್ಲಿ 100 ಕೆಜಿ ಬೆಲ್ಜಿಯಂ ಚಾಕ್ಲೇಟ್ ಅನ್ನು ಬಳಸಿಕೊಂಡು ಗಣಪತಿಯ ಮೂರ್ತಿಯನ್ನು ತಯಾರಿ ಮಾಡಿದ್ದಾರೆ.
ಹರ್ಜಿಂದರ್ ಸಿಂಗ್ ತನ್ನ ಚಾಕ್ಲೇಟ್ ಗಣಪತಿಯ ಜೊತೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈಗ ಇವರ ಚಾಕ್ಲೇಟ್ ಗಣಪತಿಗೆ ಎಲ್ಲೆಡೆಯೂ ಪ್ರೀತಿ ಮಾತುಗಳು ಕೇಳಿ ಬರುತ್ತಿದೆ.