ಚಿಂಚೋಳಿ: ಪಟ್ಟಣದ ತಾಂಡೂರ-ಚಿಂಚೋಳಿ ರಾಜ್ಯ ಹೆದ್ದಾರಿಯಲ್ಲಿರುವ ಮೆಟ್ರಿಕ್ಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ವಿದ್ಯುತ್ ಉತ್ಪಾದನಾ ಘಟಕ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ, ಘಟಕದ ಎದುರು ನಾಗರಿಕ ಹಿತರಕ್ಷಣಾ ವೇದಿಕೆ ಮುಖಂಡರು ಪ್ರತಿಭಟನೆ ನಡೆಸಿದರು.
ಈ ಘಟಕ ವಿಪರೀತ ಗಬ್ಬು ವಾಸನೆ ಬೀರುತ್ತಿದ್ದು, ರಸ್ತೆ ಮೇಲೆ ಸಂಚರಿಸುವ ಪ್ರಯಾಣಿಕರು, ಶಾಲೆ-ಕಾಲೇಜು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಸದಸ್ಯ ಆನಂದ ಟೈಗರ ಮಾತನಾಡಿ, ಮೆಟ್ರಿಕ್ಸ್ ಅಗ್ರೋ ಪ್ರೈವೇಟ್ ವಿದ್ಯುತ್ ಉತ್ಪಾದನಾ ಘಟಕ ಅಧಿಕೃತವಾಗಿ ಆರಂಭವಾಗಿಲ್ಲ. ಈ ಘಟಕದ ಪಕ್ಕದಲ್ಲಿಯೇ ಆದರ್ಶ ವಿದ್ಯಾಲಯ, ಐಟಿಐ ಕಾಲೇಜು, ಮಹಿಳಾ ವಸತಿ ನಿಲಯ ಮತ್ತು ಅನೇಕ ಕುಟುಂಬಗಳು ವಾಸಿಸುತ್ತಿವೆ. ಈ ಘಟಕದ ಚಿಲುಮೆಯಿಂದ ಸೂಸುವ ವಿಷಕಾರಿ ಹೊಗೆ ಹಾಗೂ ಘಟಕದ ಶಬ್ದ ಮಾಲಿನ್ಯ ಜನರು ಹಾಗೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟಕವನ್ನು ಮುಚ್ಚಿ ಹಾಕಲು ಅನೇಕ ಸಲ ಹೋರಾಟ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಸದಸ್ಯರಾದ ಅಬ್ದುಲ್ ಬಾಸೀತ, ನಾಗೇಂದ್ರ ಗುರಂಪಳ್ಳಿ, ಶಬ್ಬೀರ ಅಹೆಮದ್, ಬಸವರಾಜ ಶಿರಸಿ ಹಾಗೂ ಮುಖಂಡರಾದ ಅಮರ ಲೊಡನೋರ, ವಿಶ್ವನಾಥ ಬೀರನಳ್ಳಿ, ಸಂತೋಷ ಗುತ್ತೇದಾರ, ಉಲ್ಲಾಸ ದೇಗಲಮಡಿ, ರುದ್ರಮುನಿ ರಾಮತೀರ್ಥ, ಕಾಶಿನಾಥ ಸಿಂಧೆ, ದೌಲತರಾವ್ ಸುಣಗಾರ, ಗೋಪಾಲ ರಾಂಪೂರೆ, ತುಳಸೀರಾಮ ಪೋಳ ಈ ಸಂದರ್ಭದಲ್ಲಿದ್ದರು.