ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರ ಹಿಂದೆ ಯಾರದೇ ಒತ್ತಡ ಇಲ್ಲ. ಈ ಮೊದಲೇ ನಿರ್ಧಾರವಾಗಿದ್ದಂತೆ ಪಕ್ಷದ ಆದೇಶ ಪಾಲಿಸಿ ರಾಜೀನಾಮೆ ನೀಡಿರುವುದಾಗಿ ಹೆಚ್.ವಿ.ಮಂಜುನಾಥ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಈ ವಿಚಾರವನ್ನು ಸ್ಪಷ್ಟಪಡಿಸಿದರು. ಜಾತಿ ಬಲ, ಹಣ ಬಲ ಇಲ್ಲದ ನನ್ನನ್ನು ಗುರುತಿಸಿ ಪಕ್ಷ ಜಿಪಂ ಅಧ್ಯಕ್ಷರಾಗಿ ಆಯ್ಕೆ ಮಾಡಿತ್ತು ಇದೀಗ ಪಕ್ಷದ ಆದೇಶದಂತೆ ರಾಜೀನಾಮೆ ನೀಡಿದ್ದೇನೆ ಎಂದು ತಮ್ಮ ರಾಜೀನಾಮೆಯ ಹಿಂದಿನ ಕಾರಣವನ್ನು ಮಂಜುನಾಥ್ ಅವರು ತೆರೆದಿಟ್ಟರು.
ಪಕ್ಷದ ಆದೇಶಕ್ಕೆ ವಿರುದ್ದವಾಗಿ ನಡೆಯುವ ಸ್ವಭಾವ ನನ್ನದ್ದಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಪಕ್ಷ ನೀಡಿದ್ದ ಅಧ್ಯಕ್ಷ ಸ್ಥಾನಕ್ಕೆ ಚ್ಯುತಿ ಬಾರದಂತೆ 19 ತಿಂಗಳುಗಳ ಕಾಲ ಬದ್ದತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ನುಡಿದರು.
ಜಿಲ್ಲೆಯಲ್ಲಿ ಜಲ ಮೂಲಗಳ ಸಂರಕ್ಷಣೆ, ಮಳೆ ಕೊಯ್ಲು ಪದ್ಧತಿ ಅನುಷ್ಟಾನ, ವಿಶೇಷವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಿಸಲಾಗಿದೆ. ಅಂತರ್ಜಲ ವೃದ್ಧಿಗೆ ಮಲ್ಟಿ ಚೆಕ್ ಡ್ಯಾ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಜಿಲ್ಲೆಯ ಎಲ್ಲ ಗ್ರಾಪಂ ಕಟ್ಟಡಗಳಿಗೆ ಮಳೆ ಕೊಯ್ಲು ಅನುಷ್ಟಾನಗೊಳಿಸಲಾಗಿದೆ.
ಜಿಲ್ಲೆಯ ಎಲ್ಲ ಸರ್ಕಾರಿ ಪ್ರೌಢಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ನಡೆಸಲು ದಾನಿಗಳ ಸಹಕಾರದಿಂದ ಪ್ರೋಜೆಕ್ಟರ್ ಗಳನ್ನು ವಿತರಿಸಲಾಗಿದೆ ಎಂದವರು ತಮ್ಮ ಅಧಿಕಾರಾವಧಿಯಲ್ಲಿ ನಡೆಸಲಾದ ಅಭಿವೃದ್ಧಿ ಕಾರ್ಯಗಳ ವಿವರಗಳನ್ನು ನೀಡಿದರು.