ಕೊಚ್ಚಿ: ಕೇರಳದ ವಯನಾಡು ಭೀಕರ ಭೂಕುಸಿತದಿಂದ (Wayanad landslide) ಅಕ್ಷರಶಃ ತತ್ತರಿಸಿದೆ. ಹೆಣಗಳ ರಾಶಿ ಒಂದೆಡೆಯಾದರೆ, ಇನ್ನೊಂದು ಕಡೆ ತಮ್ಮವರನ್ನು ಕಳೆದುಕೊಂಡ ಕುಟುಂಬಗಳ ದುಃಖ ಮುಗಿಲುಮುಟ್ಟಿದೆ.
ವಯನಾಡ್ ಜಿಲ್ಲೆಯ ಮುಂಡಕ್ಕೈ, ಚೂರ್ಮಲಾ, ಅಟ್ಟಮಾಲ್ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹೆಚ್ಚು ಹಾನಿಗೊಳಗಾಗಿದೆ. ಇತ್ತೀಚೆಗಿನ ವರದಿಗಳ ಪ್ರಕಾರ, ಕನಿಷ್ಠ 256 ಜನರು ಸಾವನ್ನಪ್ಪಿದ್ದಾರೆ ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿವೆ. ಸೇನೆ ಇದುವರೆಗೆ ಸುಮಾರು 1,000 ಜನರನ್ನು ರಕ್ಷಿಸಿದೆ ಮತ್ತು 220 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. 1,000 ಕ್ಕೂ ಹೆಚ್ಚು ಜನರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬದುಕುಳಿದವರು ತಮ್ಮವರನ್ನು ಹುಡುಕಲು ಹಗಲು ರಾತ್ರಿ ಭೂಕುಸಿತವಾದ ಜಾಗದಲ್ಲೇ ಬೀಡುಬಿಟ್ಟಿದ್ದಾರೆ.
ಭೂಕುಸಿತದಿಂದ ಕೋಟಿ ಕೋಟಿ ನಷ್ಟವಾಗಿದ್ದು, ಉದ್ಯಮಿಗಳು ಹಾಗೂ ಸಿನಿಮಾರಂಗದ ಕಲಾವಿದರು ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.
ಕೇರಳ ಸಿಎಂ ರಿಲೀಫ್ ಫಂಡ್‌ಗೆ ಕಾಲಿವುಡ್ ನಟ ಚಿಯಾನ್ ವಿಕ್ರಮ್ (Chiyaan Vikram) 20 ಲಕ್ಷ ರೂ. ನೆರವನ್ನು ನೀಡಿದ್ದಾರೆ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಟ ವಿಕ್ರಮ್ ಮ್ಯಾನೇಜರ್ ಯುವರಾಜ್ ಪೋಸ್ಟ್ ಹಂಚಿಕೊಂಡಿದ್ದಾರೆ.
ನಟ ವಿಕ್ರಮ್ ಅವರ ಮಾನವೀಯ ಗುಣವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಇತ್ತ ನಟಿ ರಶ್ಮಿಕಾ ಮಂದಣ್ಣ (Rashmika Mandanna) 10 ಲಕ್ಷ ರೂ. ನೆರವನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಇನ್ನು ಹಿರಿಯ ನಟರಾದ ಮೋಹನ್ ಲಾಲ್(Mohanlal), ಮಮ್ಮುಟ್ಟಿ(Mammootty), ಕಾರ್ತಿ( Karthi ), ಸೂರ್ಯ(Suriya Sivakumar), ಜ್ಯೋತಿಕಾ(Jyotika), ಮಾಳವಿಕ ಮೋಹನ್ (Malavika Mohana), , ಮಂಜು ವಾರಿಯರ್, ಆಸಿಫ್ ಅಲಿ, ಟೊವಿನೋ ಥಾಮಸ್, ನಿಖಿಲಾ ವಿಮಲ್, ಬೆಸಿಲ್ ಜೋಸೆಫ್ ಸೇರಿದಂತೆ ಹಲವು ಕಲಾವಿದರು ನೆರವಿಗೆ ಮುಂದೆ ಬಂದಿದ್ದಾರೆ.
ಕಾರ್ತಿ, ಸೂರ್ಯ ಮತ್ತು ಜ್ಯೋತಿಕಾ ಒಟ್ಟಾಗಿ 50 ಲಕ್ಷ ರೂ. ನೀಡಿದ್ದಾರೆ ಎಂದು ವರದಿಯಾಗಿದೆ.
ಸದ್ಯ ವಿಕ್ರಮ್ ಪಾ ರಂಜಿತ್ ಅವರ ʼತಂಗಲಾನ್ʼ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗಲಿದೆ. ಇದಾದ ಬಳಿಕ ಅವರು, ‘ವೀರ ಧೀರನ್ ಸೂರನ್: ಪಾರ್ಟ್- 2’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.