ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ನ ಅಕ್ಷಯ್ ಕುಮಾರ್ ನಟಿಸಿರುವ “2.0′ ಚಿತ್ರ ಒಂದಲ್ಲ ಒಂದು ವಿಷಯದಲ್ಲಿ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡ ಚಿತ್ರದ ಟೀಸರ್ ಕೋಟಿಗಟ್ಟಲೆ ವೀಕ್ಷಣೆ ಕಂಡು ಸುದ್ದಿಯಾಗಿತ್ತು. ಇದೀಗ ಚಿತ್ರದ ಟ್ರೈಲರ್ ಕಡೆಗೂ ಬಿಡುಗಡೆಯಾಗಿದೆ. ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್, ನಿರ್ದೇಶಕ ಶಂಕರ್ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೈಲರ್ ಸಖತ್ ಸದ್ದು ಮಾಡುತ್ತಿದ್ದು, ಭಾರತೀಯ ಚಿತ್ರರಂಗದಲ್ಲಿ ಪ್ರಪ್ರಥಮ ಬಾರಿಗೆ ಎಸ್ಎಲ್ಆರ್ 4ಡಿ ಸೌಂಡಿಂಗ್ ಹೊಂದಿರುವ ಏಕೈಕ ಚಿತ್ರವಿದು. ಅಲ್ಲದೇ ಎರಡು ನಿಮಿಷ 29 ಸೆಕೆಂಡ್ ಗಳ “2.0′ ಟ್ರೈಲರ್ ಅನ್ನು ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಫಸ್ಟ್ ಟೈಮ್ ಸೌತ್ ಚಿತ್ರದಲ್ಲಿ ನಟಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್, ತಲೈವಾ ಎದುರು ಬೆಚ್ಚಿ ಬೀಳಿಸುವ ವಿಲನ್ ಆಗಿ ಬಣ್ಣ ಹಚ್ಚಿದ್ದು, ಬ್ರಿಟಿಷ್ ಸುಂದರಿ ಆ್ಯಮಿ ಜಾಕ್ಸನ್ ತಲೈವಾ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಅಕ್ಷಯ್ ಕುಮಾರ್ ಮತ್ತು ರಜನಿಕಾಂತ್ ಡೈಲಾಗ್ ಗಳು ವಾವ್ ಎನ್ನುವಂತಿದ್ದು, ರೀಲೋಡೆಡ್ ಚಿಟ್ಟಿ ಪಾತ್ರದಲ್ಲಿ ರಜನಿ ಅದ್ಭುತವಾಗಿ ಕಾಣಿಸುತ್ತಾರೆ. ಪ್ರಪಂಚದಾದ್ಯಂತ ಸುಮಾರು 25 ವಿಎಫ್ಎಕ್ಸ್ ಸ್ಟುಡಿಯೋದಲ್ಲಿ ಚಿತ್ರಕ್ಕೆ ಗ್ರಾಫಿಕ್ ಕಾರ್ಯ ಮಾಡಲಾಗಿದ್ದು, ಸುಮಾರು 3000ಕ್ಕೂ ಹೆಚ್ಚು ನುರಿತ ತಂತ್ರಜ್ಞರು ಚಿತ್ರಕ್ಕೆ ಕಾರ್ಯನಿರ್ವಹಿಸಿದ್ದಾರೆ.
ಈ ಹಿಂದೆ ಎಂದಿರನ್(ರೋಬೊಟ್) ಚಿತ್ರ ನಿರ್ದೇಶಿಸಿ ಹಾಲಿವುಡ್ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಶಂಕರ್ ಅವರೇ ಚಿತ್ರದ ಮುಂದುವರೆದ ಭಾಗವನ್ನು ನಿರ್ದೇಶಿಸಿದ್ದಾರೆ. ಹೀಗಾಗಿ ಸಿನಿಪ್ರಿಯರಲ್ಲಿ ಈ ಚಿತ್ರ ಮತ್ತಷ್ಟು ಕುತೂಹಲ ಮೂಡಿಸಿದೆ. ಲೈಕಾ ಪ್ರೊಡಕ್ಷನ್ಸ್ನಲ್ಲಿ ಕರಣ್ ಜೋವರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತವಿದೆ. ಚಿತ್ರವು 600 ಕೋಟಿ ರೂ. ಬಜೆಟ್ ಹೊಂದಿದ್ದು, ಇದೇ 29ಕ್ಕೆ ಜಗತ್ತಿನಾದ್ಯಂತ ತೆರೆ ಕಾಣಲಿದೆ.