ಚಿತ್ತಾಪುರ: ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆ. ಹಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಜೈಲಿಗೆ ಹೋಗಿ ಬಂದಿದ್ದಾರೆ. ಆದರೆ ಬಿಜೆಪಿ, ಆರ್. ಎಸ್.ಎಸ್.ನಿಂದ ಒಬ್ಬರಾದರೂ ಹೋರಾಟ ಮಾಡಿದ್ದಾರಾ? ಜೈಲಿಗೆ ಹೋಗಿ ಬಂದಿದ್ದಾರಾ? ಯಾರಾದರೂ ಸ್ವಾತಂತ್ರ್ಯಕ್ಕಾಗಿ ಸತ್ತಿದ್ದಾರಾ? ಇವರೆಲ್ಲ ಹುಟ್ಟಿದ್ದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಎಂದು ಹಾಲಿ ಸಂಸದ, ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಪಟ್ಟಣದ ಬಜಾಜ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಲಬುರಗಿ ಲೋಕಸಭೆ ಚುನಾವಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮನ್ನು ಈ ಸಲ ಹೇಗಾದರೂ ಮಾಡಿ ಸೋಲಿಸಲೇಬೇಕು ಎಂದು ದಿಲ್ಲಿಯಲ್ಲಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಹಿಡಿದು ಗಲ್ಲಿವರೆಗೂ ಹಿಂದೆ ಬಿದ್ದಿದ್ದಾರೆ. ಆದರೆ ನೀವು ಎಷ್ಟೇ ಹಿಂದೆ ಬಿದ್ದರೂ ಕಲಬುರಗಿ ಜನ ಮಾತ್ರ ನನ್ನ ಕೈ ಬಿಡೋದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಸಭೆ ಚುನಾವಣೆಯಲ್ಲಿ ತಮ್ಮನ್ನು ಎಂಟು ಬಾರಿ ಗುರುಮಿಠಕಲ್ ನಿಂದ, ಒಂದು ಬಾರಿ ಚಿತ್ತಾಪುರದಿಂದ ಆರಿಸಿದ್ದಾರೆ. ಎರಡು ಬಾರಿ ಕಲಬುರಗಿ ಲೋಕಸಭೆಯಿಂದ ಆರಿಸಿದ್ದಾರೆ. ನನ್ನ ತಲೆ ಮೇಲೆ ಕಲಬುರಗಿ ಜನರ ಆಶೀರ್ವಾದ ಇದೆ. ಹೀಗಾಗಿ ಬಿಜೆಪಿಯವರು ಯಾವುದೇ ಪಣ ತೊಟ್ಟರೂ ಸೋಲಿಸಲು ಸಾಧ್ಯವಿಲ್ಲ ಎಂದರು. ಮಾಜಿ ಸಚಿವ ಕೆ.ಬಿ. ಶಾಣಪ್ಪ ಮಾತನಾಡಿ, ಬಿಜೆಪಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ನಾಯಕರಿಲ್ಲ. ಕೇವಲ ಹಿಂದೂ-ಮುಸ್ಲಿಂರು ಎಂದು ಜಗಳ ಹಚ್ಚುವುದನ್ನು ಬಿಟ್ಟರೇ ಇವರ ಐದು ವರ್ಷದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಆಗಲಿಲ್ಲ. ಮನ್ ಕಿ ಬಾತ್‌ನಲ್ಲಿ ಬರೋದು ಸುಳ್ಳಿನ ಮೇಲೆ ಸುಳ್ಳು. ಸುಳ್ಳು ಕೇಳಲು ಇದೀಗ ರೇಡಿಯೋಗಳಿಲ್ಲ. ಇದು ನಮ್ಮ ಪುಣ್ಯ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಎಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಸುಭಾಷ ರಾಠೊಡ, ತಿಪ್ಪಣಪ್ಪ ಕಮಕನೂರ್, ಮಲ್ಲಿಕಾರ್ಜುನ ಪಾಟೀಲ್ ಹುಳಗೇರಾ, ಮುಕ್ತಾರ ಪಟೇಲ್, ಶ್ರೀನಿವಾಸ ಸಗರ್, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಜಿಪಂ ಸದಸ್ಯರಾದ ಶಿವರುದ್ರ ಭೀಣಿ, ಶಿವಾನಂದ ಪಾಟೀಲ, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೆಮೂದ್ ಸಾಹೇಬ್, ತಾಪಂ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಎಪಿಎಂಸಿ ಸದಸ್ಯ ಮನ್ಸೂರ್ ಪಟೇಲ್, ವೀರಣ್ಣಗೌಡ ಪರಸರೆಡ್ಡಿ, ಆಲಂಖಾನ್, ಮಾಪಣ್ಣ ಗಂಜಗೇರಿ ಹಾಗೂ ಮತ್ತಿತರರು ಇದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಸ್ವಾಗತಿಸಿದರು, ವಕ್ತಾರ ಬಸವರಾಜ ಚಿನ್ನಮಳ್ಳಿ ನಿರೂಪಿಸಿ, ವಂದಿಸಿದರು.
ಸುಳ್ಳು ಹೇಳಿ ಅಧಿಕಾರ ಪಡೆಯುವ ಕನಸು
ಅಚ್ಛೇ ದಿನ್ ಲಾಯೇಂಗೆ ಎಂದರು ಬಿಜೆಪಿಯವರು. ಬಂತಾ ಅಚ್ಛೇ ದಿನ್? ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದರು. ಐದು ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಠಿಯಾಯಿತಾ? ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕ್ತೀನಿ ಅಂದಿದ್ರು, ಹಾಕಿದ್ರಾ? ಹೊರ ದೇಶದಲ್ಲಿ 80 ಲಕ್ಷ ಕೋಟಿ ರೂ. ಕಾಲಾಧನ್ ಇದ್ದು, ತರಿ¤àವಿ ಅಂದ್ರು, ತಂದ್ರಾ? ಬರೀ ದೇಶದ ಜನರಿಗೆ ಸುಳ್ಳಿನ ಮೇಲೆ ಸುಳ್ಳು ಹೇಳಿ ಅಧಿಕಾರ ಪಡೆಯುವ ಕನಸು ಕಾಣುವುದು ನಿಲ್ಲಿಸಿ. ಚಾಯ್ ವಾಲಾ ಹೋಗಿ ‘ನಾನು ದೇಶ ಕಾಯುವ ಚೌಕಿದಾರ್’ ಎಂದು ಹೆಸರು ಬದಲಾಯಿಸಿಕೊಂಡರೆ ಸಾಲದು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಜನತೆ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ.
ಡಾ| ಮಲ್ಲಿಕಾರ್ಜುನ ಖರ್ಗೆ,
ಹಾಲಿ ಸಂಸದ, ಕಲಬುರಗಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ