Advertisement

ಚಿತ್ತಾರಿಕಲ್‌: ಸ್ಮಾರ್ಟ್‌ ಅಂಗನವಾಡಿ ನಿರ್ಮಾಣ

01:12 AM Mar 13, 2020 | Team Udayavani |

ಕಾಸರಗೋಡು: ನಾಡಿನೊಂದಿಗೆ ಅಂಗನವಾಡಿಯೂ ಸ್ಮಾರ್ಟ್‌ ಆಗುತ್ತಿರುವ ಮೂಲಕ ಚಿತ್ತಾರಿಕಲ್ಲು ಪೇಟೆ ಗಮನ ಸೆಳೆಯುತ್ತಿದೆ.

Advertisement

ಜಿಲ್ಲೆಯ ಈಸ್ಟ್‌ ಏಳೇರಿ ಗ್ರಾಮ ಪಂಚಾಯತ್‌ನ 2ನೇ ವಾರ್ಡ್‌ ಚಿತ್ತಾರಿಕಲ್‌ ಪೇಟೆಯಲ್ಲಿರುವ ಅಂಗನವಾಡಿ ಸ್ಮಾರ್ಟ್‌ ಆಗುತ್ತಿದೆ. ಇಲ್ಲಿರುವ 5 ಸೆಂಟ್ಸ್‌ ಜಾಗದಲ್ಲಿ ಅಂಗನವಾಡಿಗಾಗಿ ನಿರ್ಮಿಸಲಾಗುತ್ತಿರುವ ಕಟ್ಟಡದಲ್ಲಿ ಸಂಸ್ಥೆಯನ್ನು ಸ್ಮಾರ್ಟ್‌ ಆಗಿಸುವ ಎಲ್ಲ ವ್ಯವಸ್ಥೆ ನಡೆಸಲಾಗುತ್ತಿದೆ.

2019-20ನೇ ಸಾಲಿನ ಪಂಚಾಯತ್‌ ಯೋಜನೆ ನಿಧಿಯ 13 ಲಕ್ಷ ರೂ. ಬಳಸಿ ಈಸ್ಟ್‌ ಏಳೇರಿ ಗ್ರಾಮ ಪಂಚಾಯತ್‌ನ ಈ ಪ್ರಥಮ ಸ್ಮಾರ್ಟ್‌ ಅಂಗನವಾಡಿ ನಿರ್ಮಿಸಲಾಗುತ್ತಿದೆ. ಪುಟಾಣಿ ಮಕ್ಕಳನ್ನು ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಗೋಡೆಗಳಲ್ಲಿ ಬಣ್ಣ ಬಣ್ಣದ ಚಿತ್ರಗಳು, ಕಥೆ ಹೇಳುವ ಚಿತ್ರಗಳು, ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿರುವ ಅನೇಕ ಆಟಿಕೆಗಳು, ಶಿಶು ಸೌಹಾರ್ದ ಶೌಚಾಲಯಗಳು, ಅಂಗಳಕ್ಕೆ ಇಂಟರ್‌ ಲಾಕ್‌ ವ್ಯವಸ್ಥೆ, ಸುಭದ್ರ ಆವರಣ ಗೋಡೆ, ಶಾಲೆಯ ಆವರಣದಲ್ಲಿ ತರಕಾರಿ ಕೃಷಿ ಇತ್ಯಾದಿಗಳು ಇಲ್ಲಿನ ಪ್ರಧಾನ ಆಕರ್ಷಣೆಗಳಾಗಿವೆ. ಗ್ರಾಮ ಪಂಚಾಯತ್‌ ಈ ಎಲ್ಲ ಚಟುವಟಿಕೆಗಳ ಉಸ್ತುವಾರಿ ವಹಿಸಲಿದೆ.

ಹಲವು ಸೇವೆಗಳು
ಪುಟಾಣಿ ಮಕ್ಕಳಲ್ಲದೆ ಫಲಾನುಭವಿ ಗಳಾದ ಯುವಜನತೆ, ಗರ್ಭಿಣಿಯರು, ಹೆತ್ತವರು ಮೊದಲಾದವರಿಗೆ ಬೇರೆ ಬೇರೆ ರೀತಿಯ ಸೇವೆಗಳು ಈ ಅಂಗನವಾಡಿ ಮೂಲಕ ಲಭಿಸಲಿವೆ. ಅಂಗನವಾಡಿ ಫಲಾನುಭವಿಗಳಿಗಾಗಿ ಜನಜಾಗೃತಿ ನಡೆಸುವ ಸೌಲಭ್ಯಗಳನ್ನೂ ಈ ಕಟ್ಟಡದಲ್ಲಿ ನಿರ್ಮಿಸಲಾಗುತ್ತಿದೆ.

ಹೆಚ್ಚುವರಿ ಸೌಲಭ್ಯಗಳ ನಿರೀಕ್ಷೆ
ಅಂಗನವಾಡಿಯ ಈಗಿರುವ ಕಟ್ಟಡದಲ್ಲಿ ಸುಮಾರು 20 ಮಕ್ಕಳು ಇದ್ದಾರೆ. ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ವೇಳೆ ಮಕ್ಕಳ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ. ಜೊತೆಗೆ ಫಲಾನುಭವಿಗಳಿಗೆ ಹೆಚ್ಚುವರಿ ಸೇವೆ ಲಭ್ಯವಾಗಲಿದೆ.
– ಜೆಸ್ಸಿ ಟಾಂ, ಅಧ್ಯಕ್ಷೆ, ಈಸ್ಟ್‌ ಏಳೇರಿ ಗ್ರಾಮ ಪಂಚಾಯತ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next