Advertisement

ಚಿತ್ತಾಪುರ ತಾಪಂ ಸಭಾಂಗಣದಲ್ಲಿ ಬಿಸಿಯೂಟದ್ದೇ ಚರ್ಚೆ

11:51 AM Sep 23, 2019 | Team Udayavani |

ಚಿತ್ತಾಪುರ: ಬಿಸಿಯೂಟ ಅಧಿಕಾರಿಗಳು ಯಾವುದೇ ಶಾಲೆಗಳಿಗೆ ಭೇಟಿ ನೀಡೋದಿಲ್ಲ. ಅನೇಕ ಶಾಲೆಗಳಲ್ಲಿ ಬಿಸಿಯೂಟ ಸಮಸ್ಯೆ ತಾಂಡವಾಡುತ್ತಿವೆ. ಈ ಅವ್ಯವಸ್ಥೆ ಕುರಿತು ತಿಳಿಸಬೇಕು ಎಂದರೆ ಬಿಸಿಯೂಟ ಅಧಿಕಾರಿಗಳು ಕೈಗೆ ಸಿಗೋದಿಲ್ಲ ಎಂದು ತಾಪಂ ಸದಸ್ಯರಾದ ರಾಮು ರಾಠೊಡ, ಸುಧಿಧೀರ ಬೆಳ್ಳಪ್ಪ ತರಾಟೆಗೆ ತೆಗೆದುಕೊಂಡರು.

Advertisement

ತಾಪಂ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಅನೇಕ ಶಾಲೆಗಳಲ್ಲಿ ಬಿಸಿಯೂಟ ನೀಡಲ್ಲ. ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ 150 ಇದ್ದರೆ ಅಲ್ಲಿ ಇರೋದು ಮಾತ್ರ 100 ಅಥವಾ 110 ಇರುತ್ತದೆ. ಆದರೆ 150 ವಿದ್ಯಾರ್ಥಿಗಳ ದಾಖಲಾತಿ ತೋರಿಸಿ ಬಿಸಿಯೂಟದ ಅಧಿಕಾರಿಗಳು ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಕೆಲವು ಶಾಲೆಗಳಲ್ಲಿ ಬಿಸಿಯೂಟ ನೀಡುತ್ತಾರೆ. ಆದರೆ ಅದರಲ್ಲಿ ಬೇಳೆ, ಎಣ್ಣೆ ಇರುವುದಿಲ್ಲ. ಬಿಸಿಯೂಟ ಬೇಸಿಗೆ ರಜೆಯಲ್ಲಿಯೂ ನೀಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದ್ದರೂ ನೀಡಿಲ್ಲ. ಹೀಗಾಗಿ ಮಕ್ಕಳಿಗೆ ಬಿಸಿಯೂಟದ ಲಾಭ ಸಿಗದಂತೆ ಆಗಿದೆ. ತಾಲೂಕಿನಲ್ಲಿ ಯೋಜನೆ ಹಳ್ಳಹಿಡಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ ಮಾತನಾಡಿ, ಬಿಸಿಯೂಟದ ಅಧಿಕಾರಿ ಯಾವ ಶಾಲೆಗೆ ಭೇಟಿ ನೀಡಿದ್ದಾರೆ? ಅಲ್ಲಿನ ಸಮಸ್ಯೆಗಳನ್ನು ಆಲಿಸಿದ್ದಾರಾ? ಇಲ್ಲಿಯವರೆಗೆ ಸರಿಯಾಗಿ ಬಿಸಿಯೂಟ ನೀಡದ ಶಾಲೆಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದಿರಿ ಎನ್ನುವ ಕುರಿತು ಮಾಹಿತಿ ನೀಡಿ ಎಂದು ಸೂಚಿಸಿದರು. ಬಿಆರ್‌ಸಿ ಮತ್ತು ಸಿಆರ್‌ಸಿಗಳು ಶಾಲೆಗಳಿಗೆ ಭೇಟಿಯೇ ನೀಡಲ್ಲ. ತಿಂಗಳಿಗೆ ಇಂತಿಷ್ಟು ಶಾಲೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಬೇಕು ಎಂದಿದೆ. ಈ ಕುರಿತು ಕ್ರಮ ಕೈಗೊಂಡಿದ್ದಿರಾ ಎಂದು ಸದಸ್ಯರಾದ ರವಿ ಪಡ್ಲ, ರಾಮು ರಾಠೊಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಹರಿಹಾಯ್ದರು.

ತಾಪಂ ಇಒ ಬಸಲಿಂಗಪ್ಪ ಡಿಗ್ಗಿ ಮಾತನಾಡಿ, ಕಳೆದ ಸಲದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿಯೇ ತಾಲೂಕು ಕೊನೆಯ ಸ್ಥಾನದಲ್ಲಿ ಬಂದಿದೆ. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರಲು ಯಾವ ರೀತಿಯ ಯೋಜನೆಗಳನ್ನು ಹಾಕಿಕೊಂಡಿದ್ದೀರಿ ಎಂದು ಕೇಳಿದರು.

Advertisement

ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಡವಳಗಿ,ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರಲು ವಿಶೇಷ ತರಗತಿ, ಅನುಭವವುಳ್ಳ ಶಿಕ್ಷಕರಿಂದ ಭೋಧನೆ ಹಾಗೂ ವಿಶೇಷ ಪರೀಕ್ಷೆ ನಡೆಸಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಸದಸ್ಯ ನಾಮದೇವ ರಾಠೊಡ ಮಾತನಾಡಿ, ಮುಗಳನಾಗಾಂವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿನ ನೀರಿನ ಟ್ಯಾಂಕ್‌ ಶಿಥಿಲಗೊಂಡಿದೆ. ನೆಲಸಮಗೊಳಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕುಸಿದರೆ ಶಾಲೆಯ ಮಕ್ಕಳು ಹಾಗೂ ಸುತ್ತಮುತ್ತ ಇರುವ ಮನೆಗಳ ಜನರಿಗೆ ಅನಾಹುತ ಸಂಭವಿಸಬಹುದು. ಕೂಡಲೇ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಸದಸ್ಯರಾದ ಬಸವರಾಜ ಹೊಸ್ಸಳ್ಳಿ, ನಾಮದೇವ ರಾಠೊಡ, ಇಒ ಬಸಲಿಂಗಪ್ಪ ಡಿಗ್ಗಿ ಮಾತನಾಡಿ, ಕೀಟ ನಾಶಕ ಎಣ್ಣೆ ಹೊಡೆಯುವಾಗ ತಾಲೂಕಿನ ಅನೇಕ ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಸದಸ್ಯ ಅಬ್ದುಲ್‌ ರಸೂಲ್‌ ನಾಲವಾರ ಮಾತನಾಡಿ, ಅಂಗನವಾಡಿ ಕೇಂದ್ರಗಳು ಯಾವಾಗ ನೋಡಿದರೂ ಆವಾಗ ಮುಚ್ಚಿರುತ್ತವೆ ಎಂದು ಆಪಾದಿಸಿದರು. ತಾಪಂ ಉಪಾಧ್ಯಕ್ಷ ಹರಿನಾಥ ಚವ್ಹಾಣ, ಸದಸ್ಯರಾದ ಮುನಿಯಪ್ಪ ಕೊಳ್ಳಿ, ಭಾಗಪ್ಪ ಯಾದಗೀರ, ರೇವಣಸಿದ್ದಪ್ಪ ಮಡಕಿ, ಬಸವರಾಜ ಲೋಕನಳ್ಳಿ, ಮಲ್ಲಣ ಸಣಮೋ, ಕಲಾವತಿ ಸಂಗನ್‌, ಜಯಶ್ರೀ ತಳವಾರ, ಮೇರಾಜ ಬೇಗಂ, ಮಹಾದೇವಿ ಆವಂಟಿ, ವಂದನ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next