Advertisement

ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಿ ಜಾತ್ರೆ ಇಂದು

10:53 AM Oct 13, 2019 | Naveen |

ಎಂ.ಡಿ ಮಶಾಖ
ಚಿತ್ತಾಪುರ: ಕಲಬುರಗಿ ಜಿಲ್ಲೆಯ ತೊಗರಿ ಖಣಜ ಎಂದೇ ಪ್ರಖ್ಯಾತಿ ಪಡೆದ ಚಿತ್ತಾಪುರದ ನಾಗಾವಿ ಯಲ್ಲಮ್ಮ ದೇಗುಲ ದಕ್ಷಿಣ ಭಾರತದ ಸುಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲಿ ಒಂದಾಗಿದೆ. ಹಿಂದೆ ರಾಷ್ಟ್ರಕೂಟ ಅರಸು ಅಮೋಘವರ್ಷ ನೃಪತುಂಗನ ಕುಲದೇವತೆ ಎಂದೇ ಖ್ಯಾತಿ ಪಡೆದುಕೊಂಡಿರುವ ನಾಗಾವಿ ಯಲ್ಲಮ್ಮ ದೇವಿ ಭಕ್ತರ ಇಷ್ಟಾರ್ಥ
ಈಡೇರಿಸುವ ಶಕ್ತಿ ದೇವತೆ ಆಗಿದ್ದಾಳೆ.

Advertisement

ಚಿತ್ತಾಪುರ ಪಟ್ಟಣ ಹೊರವಲಯದಲ್ಲಿ ಸುಮಾರು 2 ಕಿ.ಮೀ ದೂರ  ಡೆದುಕೊಂಡು ಹೋದರೆ ಕಲೆ, ಸಾಹಿತ್ಯ, ಶಿಲ್ಪಕಲೆ, ಶಾಸನಗಳಿರುವ ಐತಿಹಾಸಿಕ ಹಿನ್ನೆಲೆ, ಧಾರ್ಮಿಕ ಪರಂಪರೆ ಹೊಂದಿದ ಭವ್ಯವಾದ ನಾಗಾವಿ ಯಲ್ಲಮ್ಮ ದೇವಾಲಯವಿದೆ. ಮುಖ್ಯ ದ್ವಾರ ಪ್ರವೇಶಿಸಿ ಸ್ವಲ್ಪ ಮುಂದೆ ಹೋದರೆ ನಾಗಶೇಷ ಗುಡಿಯ 60 ಕಂಬಗಳು ಕಾಣಿಸುತ್ತವೆ. ಈ ಕಂಬದ ಎದುರು ಯಲ್ಲಮ್ಮ ದೇವಿ ಗರ್ಭಗುಡಿ ಇದೆ. ಯಲ್ಲಮ್ಮ ದೇವಿ ಮೂರ್ತಿ ಬಲಭಾಗ, ಎಡಭಾಗದಲ್ಲಿ ಎರಡು ನೀರಿನ ಗುಂಡಿಗಳಿವೆ.

ಇವುಗಳನ್ನು ಪುಷ್ಕರಣಿ ಎಂದು ಕರೆಯುತ್ತಾರೆ. ವಿಶಾಲವಾದ ಪ್ರಾಂಗಣ ಹೊಂದಿರುವ ಈ ದೇವಾಲಯದಲ್ಲಿ ಭಕ್ತಾದಿಗಳಿಗೆ ಛತ್ರಗಳು ನಿರ್ಮಾಣವಾಗಿವೆ. ಛತ್ರದಲ್ಲಿ ಭಕ್ತಾಗಳು ತಂಗಿ ದೇವಿಗೆ ಹರಕೆ ಸಲ್ಲಿಸುತ್ತಾರೆ. ಈ ದೇವಾಲಯವು ಪುರಾತನವಾದದ್ದಾಗಿದೆ. ಸ್ಕಂದ ಪುರಾಣದಲ್ಲಿ ಕಾಣಿಸಿಕೊಳ್ಳುವ ಶಕ್ತರು ಯಲ್ಲಮ್ಮ ದೇವಿ ಆರಾಧಕರಾಗಿದ್ದರು. ಕ್ರಿ.ಶ 2ನೇ ಶತಮಾನದಲ್ಲಿನ ಮಾರ್ಕಂಡೇಯ
ಪುರಾಣದಿಂದ ಈ ಮಾಹಿತಿ ತಿಳಿದು ಬರುತ್ತದೆ.

ರಾಷ್ಟ್ರಕೂಟರ ಕುಲದೇವತೆ: ದೇಶದಲ್ಲಿ ಶಕ್ತಿಪೂಜೆ ಪುರಾತನ ಕಾಲದಿಂದ ನಡೆದುಕೊಂಡು ಬಂದಿದೆ. ಕನ್ನಡ ನಾಡನ್ನಾಳಿದ ಚಕ್ರವರ್ತಿಗಳಾದ ಬಾದಾಮಿ ಚಾಲುಕ್ಯರು ಬನಶಂಕರಿಯನ್ನು, ಕಲ್ಯಾಣಿ ಚಾಲುಕ್ಯರು ಚಂದ್ರಲಾ ಪರಮೇಶ್ವರಿಯನ್ನು, ವಿಜಯನಗರ ಅರಸರು ಭುವನೇಶ್ವರಿಯನ್ನು, ಮೈಸೂರು ಒಡೆಯರು ಚಾಮುಂಡೇಶ್ವರಿಯನ್ನು ತಮ್ಮ ಕುಲದೇವತೆಯಾಗಿ ಪೂಜಿಸುಸುವಂತೆ ರಾಷ್ಟ್ರಕೂಟರು ನಾಗಾವಿ ಯಲ್ಲಮ್ಮ ದೇವಿಯನ್ನು ಕುಲದೇವತೆಯಾಗಿ ಪೂಜಿಸುತ್ತಿದ್ದರು.

ಯಲ್ಲಮ್ಮ ದೇವಿಗೆ ಕರ್ನಾಟಕ ಮಾತ್ರವಲ್ಲದೆ ದೂರದ ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ ರಾಜ್ಯಗಳಿಂದ ಹಾಗೂ ರಾಜ್ಯದ ಪ್ರಮುಖ ಜಿಲ್ಲೆಗಳಿಂದ ಹುಣ್ಣಿಮೆ, ಅಮವಾಸ್ಯೆ ಮತ್ತು ಪ್ರತಿ ಮಂಗಳವಾರ, ಶುಕ್ರವಾರ ಭಕ್ತಾದಿಗಳು ಅಪಾರ ಪ್ರಮಾಣದಲ್ಲಿ ಆಗಮಿಸಿ ದರ್ಶನ ಪಡೆದು ಪುನೀತರಾಗುತ್ತಾರೆ. ದೇವಾಲಯದಲ್ಲಿ ಪ್ರತಿ ವರ್ಷ ಅಶ್ವಯುಜ ಶುದ್ಧ ಪ್ರತಿಪದೆಯಿಂದ ಘಟಸ್ಥಾಪನೆಯೊಂದಿಗೆ ಒಂಭತ್ತು ದಿನಗಳ ಕಾಲ ನವರಾತ್ರಿ ಜರುಗುತ್ತದೆ. ಪ್ರತಿ ದಿನ ದೇವಿಗೆ ವಿಶೇಷ ಪೂಜೆ, ಕುಂಕುಮಾರ್ಚನೆ ಮಂತ್ರಪುಷ್ಪಗಳ ಸೇವೆ ನಡೆಯುತ್ತದೆ. ಪ್ರತಿ ವರ್ಷ ಸೀಗಿ ಹುಣ್ಣಿಮೆಯಂದು ಪಲ್ಲಕ್ಕಿ ಉತ್ಸವ ಹಾಗೂ ಜಾತ್ರೆ ಜರುಗುತ್ತದೆ.

Advertisement

ಅ.13 ರಂದು ಪಟ್ಟಣದ ಸರಾಫ ಲಚ್ಚಪ್ಪ ನಾಯಕ ಅವರ ಮನೆಯಲ್ಲಿ ಮಧ್ಯಾಹ್ನ 1:30ಕ್ಕೆ ಮಾಜಿ ಸಚಿವ, ಶಾಸಕ, ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಪ್ರಿಯಾಂಕ್‌ ಖರ್ಗೆ, ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಅಧ್ಯಕ್ಷತೆಯಲ್ಲಿ ಪಟ್ಟಣದ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ವಿಘ್ನೇಶ್ವರ ಪೂಜೆ, ಗುರುಪೂಜೆ, ಪಲ್ಲಕ್ಕಿ ಪೂಜೆ ನಡೆಯುತ್ತದೆ. ಮಧ್ಯಾಹ್ನ 200 ಗಂಟೆಗೆ ಸಕಲ ಮಂಗಲ ವಾದ್ಯಗಳೊಂದಿಗೆ ಪಲ್ಲಕ್ಕಿಯು ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಹೊರಟು ಸಂಜೆ 7 ಗಂಟೆಗೆ ದೇವಸ್ಥಾನ ತಲುಪುತ್ತದೆ. ದೇವಸ್ಥಾನ ತಲುಪಿದ ನಂತರ ದೇವಸ್ಥಾನದ ಸುತ್ತ ಐದು ಪ್ರದಕ್ಷಿಣೆ ಹಾಕಿ ದೇವರು ಪಲ್ಲಕಿ ಗರ್ಭ ಗುಡಿ ತಲುಪುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next