Advertisement

ಬಸವಳಿದವರ ದಾಹ ತಣಿಸುವ ಅರವಟ್ಟಿಗೆ

09:47 AM May 13, 2019 | Naveen |

ಚಿತ್ತಾಪುರ: ಬಿಸಿಲ ನಾಡು ಎಂದೇ ಖ್ಯಾತಿ ಪಡೆದ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚುತ್ತಿದೆ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಿಂದ ಆಗಮಿಸುವ ಜನರಿಗೆ ಅಲ್ಲಲ್ಲಿ ಸ್ಥಾಪಿಸಿದ ಕುಡಿಯುವ ನೀರಿನ ಅರವಟ್ಟಿಗೆ ದಾಹ ತಣಿಸುತ್ತಿದೆ.

Advertisement

ಪಟ್ಟಣದ ಪ್ರಮುಖ ರಸ್ತೆ, ವೃತ್ತ ಸೇರಿದಂತೆ ಇತರೆ ಕಾಲೋನಿಗಳಲ್ಲಿ ಕೆಲ ಸಂಘಟನೆಗಳು, ಉದ್ಯಮಿಗಾರರು, ಇನ್ನು ಕೆಲವರು ವೈಯಕ್ತಿಕವಾಗಿ ಸ್ಥಾಪಿಸಿರುವ ಅರವಟ್ಟಿಗೆಗಳು ಬಿಸಿಲಿಗೆ ಬಸವಳಿದು ಬಂದ ಜನರ ದಾಹ ತಣಿಸುವಲ್ಲಿ ನಿರತವಾಗಿವೆ. ತಂಪಾದ ನೀರು ಕುಡಿದ ಜನ ಅರವಟ್ಟಿಗೆ ಸ್ಥಾಪಿಸಿದವರಿಗೆ ಪುಣ್ಯ ಬರಲಿ ಎಂದು ಹಾರೈಸಿ ಮುಂದೆ ಸಾಗುತ್ತಿದ್ದಾರೆ.

ಬಿಸಿಲಿಗೆ ನೀರು ಕಾಯದಿರಲೆಂದು ಬಹುತೇಕ ಅರವಟ್ಟಿಗೆಗಳ ಮೇಲೆ ಟೆಂಟ್ ಹಾಕಲಾಗಿದೆ. ಗಿಡದ ಕೆಳಗೆ ಮಡಿಕೆಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಬಟ್ಟೆ ಸುತ್ತಿದ ಮಣ್ಣಿನ ಮಡಿಕೆಗಳಲ್ಲಿ ನೀರು ತುಂಬಿಡಲಾಗುತ್ತಿದೆ. ಇನ್ನು ಕೆಲವಡೆ ಪ್ಲಾಸ್ಟಿಕ್‌ ಕ್ಯಾನ್‌, ಬ್ಯಾರೆಲ್ಗಳಲ್ಲಿ ನೀರು ತುಂಬಿಟ್ಟು ಪಕ್ಕದಲ್ಲಿ ಲೋಟಾಗಳನ್ನು ಇಡುತ್ತಿದ್ದಾರೆ.

ಪಟ್ಟಣದ ಲಾಡ್ಜಿಂಗ್‌ ಕ್ರಾಸ್‌, ಬಸ್‌ ನಿಲ್ದಾಣದ ಎದರುಗಡೆ, ನಾಗಾವಿ ವೃತ್ತ, ಚಿತ್ತಾವಲಿ ಚೌಕ್‌, ತಹಶೀಲ್ ಕಚೇರಿ, ರೈಲ್ವೆ ನಿಲ್ದಾಣ, ಭುವನೇಶ್ವರಿ ಚೌಕ್‌, ಜನತಾ ಚೌಕ್‌, ಮಾರ್ಕೆಟ್ ಸೇರಿದಂತೆ ಪಟ್ಟಣದ ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಅವರವಟ್ಟಿಗೆಗಳು ತಲೆ ಎತ್ತಿವೆ. ಇದರಿಂದ ವಿವಿಧ ಕಚೇರಿಗಳಿಗೆ ಕಾರ್ಯ ನಿಮಿತ್ತ ಪಟ್ಟಣಕ್ಕೆ ಬರುವ ಸಾರ್ವಜನಿಕರು, ಕೂಲಿಕಾರರು, ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ದಾಹ ತೀರಿಸಿಕೊಳ್ಳುತ್ತಿದ್ದಾರೆ.

ಮಿನರಲ್ ವಾಟರ್‌ ದುಬಾರಿ: ಪಟ್ಟಣ ಹಾಗೂ ಗ್ರಾಮಗಳಲ್ಲಿ ಮಿನಿರಲ್ ವಾಟರ್‌ ದಂಧೆ ಜೋರಾಗಿ ನಡೆದಿದೆ. ಸಿಕ್ಕಿದ್ದೇ ಸಿರುಂಡೆ ಎಂದು ಅಂಗಡಿಕಾರರು ಮನಬಂದಂತೆ ಗ್ರಾಹಕರ ಜೇಬಿಗೆ ಕೈ ಹಾಕಿದ್ದಾರೆ. ಒಂದು ಲೀಟರ್‌ ಮಿನಿರಲ್ ವಾಟರ್‌ಗೆ 20ರೂ. ಇದ್ದಿದ್ದನ್ನು 25 ಅಥವಾ 30 ರೂ. ವರೆಗೆ ಮತ್ತು 2 ಲೀಟರ್‌ ಬಾಟಲಿಗೆ 30 ಇದ್ದಿದ್ದನ್ನು 35ರಿಂದ 40 ರೂ. ವರೆಗೆ ಪಡೆಯುತ್ತಿದ್ದಾರೆ. ಗ್ರಾಹಕರು ಈ ಕುರಿತು ಪ್ರಶ್ನಿಸಿದರೆ ನೀರು ತಂಪಾಗಲು ಫ್ರಿಡ್ಜ್ಗೆ ಹೆಚ್ಚಿನ ಕರೆಂಟ್ ಬೇಕಾಗುತ್ತದೆ. ಹೀಗಾಗಿ ದರ ಹೆಚ್ಚಾಗಿದೆ. ಇದರಿಂದಾಗಿ ಗ್ರಾಹಕರು, ಬೈಕ್‌ ಸವಾರರು ಬಿಸಿಲಿಗೆ ಬಳಲಿ ದುಪ್ಪಟ್ಟು ಬೆಲೆ ನೀಡಿ ಖರೀದಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಕೆಲ ಹೋಟೆಲ್ಗಳಲ್ಲಿ ಬರೀ ನೀರು ಕೇಳಿದರೆ ಕೊಡುವ ಮನಸ್ಥಿತಿಯಲ್ಲಿ ಇಲ್ಲ. ಊಟ, ತಿಂಡಿ, ಕಾಫಿಗೆ ಬರುವವರಿಗೆ ಮಾತ್ರ ನೀರು ಕೊಡುತ್ತಾರೆ. ಹೋಟೆಲ್ನವರು ನೀರು ತರಲು ಹರಸಾಹಸ ಪಡುತ್ತಿದ್ದರಿಂದ ಉಚಿತವಾಗಿ ನೀರು ಕೊಡಲು ಹಿಂದೇಟು ಹಾಕುತ್ತಿದ್ದಾರೆ.

Advertisement

ಎಂ.ಡಿ. ಮಶಾಖ

Advertisement

Udayavani is now on Telegram. Click here to join our channel and stay updated with the latest news.

Next