ಚಿತ್ತಾಪುರ: ತಾಲೂಕಿನ ದಂಡೋತಿ ಸಮೀಪದ ಕಾಗಿಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ಸಾಗಾಣಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಜಾಣ ಕುರುಡು ನೀತಿ ಅನುಸರಿಸುತ್ತಿದ್ದಾರೆ.
ಮುಡಬೂಳ, ದಂಡೋತಿ, ಭಾಗೋಡಿ, ಇವಣಿ, ಕದ್ದರಗಿ, ಇಂಗಳಗಿ ಗ್ರಾಮದ ಪಕ್ಕದಿಂದ ಹರಿಯುವ ಕಾಗಿಣಾ ನದಿ ಪಾತ್ರದಿಂದ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಕೂಲಿಕಾರ್ಮಿಕರು ಹಾಗೂ ಜೆಸಿಬಿ ಮೂಲಕ ಮರಳು ತೆಗೆಯುತ್ತಿರುವುದರಿಂದ ನದಿಯಲ್ಲಿ ಭಾರಿ ಪ್ರಮಾಣದ ತಗ್ಗುಗಳು ನಿರ್ಮಾಣವಾಗಿವೆ.
ನದಿ ನೀರಲ್ಲಿ ವಾಹನಗಳ ಡೀಸೆಲ್, ಪೆಟ್ರೋಲ್ ಬೆರೆತು ಕಲುಷಿತವಾಗುತ್ತಿದೆ. ಪಟ್ಟಣದ ವೆಂಕಟೇಶ್ವರ ಕಾಲೋನಿ ಸೇರಿದಂತೆ ವಿವಿಧ ಕಾಲೋನಿಗಳಲ್ಲಿ ರಾತ್ರಿ ವೇಳೆ ಅಕ್ರಮ ಮರಳು ಸಾಗಿಸುವವರು ಟ್ರ್ಯಾಕ್ಟರ್‌ಗಳನ್ನು ವೇಗದಿಂದ ಚಲಾಯಿಸುತ್ತಿರುವುದರಿಂದ ಹೊರಗಡೆ ಬೈಕ್-ಕಾರು ನಿಲ್ಲಿಸಲು ಜನರು ಭಯ ಪಡುತ್ತಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತು ಜಿಲ್ಲಾಧಿಕಾರಿ ಶರತ್ ಬಿ. ಅವರ ಜೊತೆ ಚರ್ಚಿಸಲಾಗಿದೆ. ಅಕ್ರಮ ಮರಳುಗಾರಿಕೆ ನಡೆಸುವ ವಾಹನಗಳು ಸಿಕ್ಕಾಗಲೆಲ್ಲ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಮರಳುಗಾರಿಕೆಯಲ್ಲಿ ಅಧಿಕಾರಿಗಳು ಶಾಮೀಲಾಗಿದ್ದರೆ ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು.
.
ಉಮಾಕಾಂತ ಹಳ್ಳೆ ,
ತಹಶೀಲ್ದಾರ್
ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ. ಮನೆ ಕಟ್ಟುವ ಮಾಲೀಕರು ದುಪ್ಪಟ್ಟು ಹಣ ನೀಡಿ ಮರಳು ಹಾಕಿಸಿಕೊಳ್ಳುವ ಪರಿಸ್ಥಿತಿ ಇದೆ.
ರಹೇಮಾನ್,
ಸ್ಥಳೀಯ ನಿವಾಸಿ