Advertisement

ಸಮ್ಮಿಶ್ರ ಸರ್ಕಾರ ಪತನ ಪಕ್ಕಾ

11:33 AM Jul 08, 2019 | Team Udayavani |

ಚಿತ್ತಾಪುರ: ಮೊಸರಿನಲ್ಲಿ ಕಲ್ಲು ಹುಡುಕುವ ಸಮ್ಮಿಶ್ರ ಸರ್ಕಾರ ಹಳಸಿ ಹೋಗಿದೆ. ಲಂಗು ಲಗಾಮು ಇಲ್ಲದ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಪತನವಾಗುವುದು ಪಕ್ಕಾ ಆಗಿದ್ದು, ಕಾಂಗ್ರೆಸ್‌-ಜೆಡಿಎಸ್‌ ಬಿಟ್ಟು ಬಿಜೆಪಿ ಬರುವವರಿಗೆ ಉತ್ತಮ ಭವಿಷ್ಯ ಇದೆ ಎಂದು ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಹೇಳಿದರು.

Advertisement

ಪಟ್ಟಣದ ಬಜಾಜ್‌ ಕಲ್ಯಾಣ ಮಂಟಪದಲ್ಲಿ ಸಂಸದ ಡಾ| ಉಮೇಶ ಜಾಧವ ಅವರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನೆ ಮತ್ತು ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮ್ಮಿಶ್ರ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದೇ ಕಚ್ಚಾಡುತ್ತಲೇ ಬರುತ್ತಿದೆ. ಈ ಸರ್ಕಾರದಲ್ಲಿ ಇಲ್ಲಿವರೆಗೆ 14 ಜನರು ರಾಜೀನಾಮೆ ನೀಡಿದ್ದಾರೆ. ಇನ್ನೂ ಕೆಲವರು ರಾಜೀನಾಮೆ ನೀಡಲು ತಯಾರಿ ನಡೆಸಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಬಿಟ್ಟು ಬಿಜೆಪಿಗೆ ಬಂದರೆ ಉತ್ತಮ ಭವಿಷ್ಯವಿದೆ ಎನ್ನುವುದಕ್ಕೆ ಸಂಸದ ಡಾ| ಉಮೇಶ ಜಾಧವ, ಶಾಸಕ ಡಾ| ಅವಿನಾಶ ಜಾಧವ ಸಾಕ್ಷಿ ಎಂದರು.

ಲೋಕಸಭೆ ಚುನಾವಣೆ ಮುಗಿದಿದೆ. ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಪತನವಾಗುವ ಹಂತಕ್ಕೆ ಬಂದಿದೆ. ಇನ್ನು ಎರಡು ದಿನದಲ್ಲಿ ಬಿ.ಎಸ್‌. ಯಡಿಯೂರಪ್ಪ ಸಾಮ್ರಾಜ್ಯ ಸ್ಥಾಪನೆಯಾಗಿ ಅವರೇ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ಹೇಳಿದರು.

ಎಸ್‌ಟಿ ಮಾಡೇ ತೀರುವೆ: ಕೋಲಿ ಸಮಾಜದ ಏಳ್ಗೆಗೆ ದಿ. ವೀಠuಲ ಹೇರೂರ್‌ ಎರಡು ದಶಕಗಳ ಕಾಲ ಹೋರಾಟ ಮಾಡಿ ಸ್ವರ್ಗವಾಸಿಯಾಗಿದ್ದಾರೆ. ದೀಪ ತನ್ನನ್ನು ತಾನು ಸುಟ್ಟುಕೊಂಡು ಬೆಳಕು ನೀಡುತ್ತದೆ. ಅದರಂತೆ ಕೋಲಿ ಸಮಾಜವನ್ನು ಎಸ್‌.ಟಿ ಮಾಡಲು ನಾನು ಮತ್ತು ನನ್ನ ಧರ್ಮ ಪತ್ನಿ ಕೊನೆ ಉಸಿರು ಇರುವ ತನಕ ಯತ್ನಿಸುತ್ತೇವೆ ಎಂದು ಬಾಬುರಾವ ಚಿಂಚನಸೂರ ಹೇಳಿದರು.

Advertisement

ಸಂಸದ ಡಾ| ಉಮೇಶ ಜಾಧವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತ ನೀಡಿ ಸೋಲಿಲ್ಲದ ಸರ್ದಾರನ ಎದರು ನನ್ನನ್ನು ಗೆಲ್ಲಿಸಿದ್ದಿರಿ. ಹೀಗಾಗಿ ನನಗೆ ಏಳು ಜನ್ಮಗಳು ಬಂದರೂ ಕಲಬುರಗಿ ಜನತೆಯ ಋಣ ತೀರಿಸಲು ಆಗೋದಿಲ್ಲ ಎಂದರು.

ನರೇಂದ್ರ ಮೋದಿ ಇಡೀ ಭಾರತ ದೇಶದ ಜನರು ಸ್ವಾಭಿಮಾನದ ಜೀವನ ನಡೆಸುವಂತಹ ಬಜೆಟ್ ನೀಡಿದ್ದಾರೆ. ನಮಗೂ ಸಹ ಮಾತು ಕಡಿಮೆ ಆಡಿ, ಕೆಲಸ ಜಾಸ್ತಿ ಮಾಡಿ ಎಂದು ಆದೇಶ ನೀಡಿದ್ದಾರೆ. ಅದರಂತೆ ನಾನು ಸಹ ತಿಂಗಳಿಗೆ ಎರಡು ಬಾರಿ ಚಿತ್ತಾಪುರದ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಪ್ರಾಮಾಣಿಕವಾಗಿ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಮಾಲೀಕಯ್ನಾ ಗುತ್ತೇದಾರ ಮಾತನಾಡಿ, ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷದಿಂದ ಅಧಿಕಾರ ಅನುಭವಿಸಿ ಬಿಜೆಪಿಗೆ ಹೋಗಿರುವ ಮಾಲೀಕಯ್ನಾ ಗುತ್ತೇದಾರ, ಬಾಬುರಾವ ಚಿಂಚನಸೂರ ಕಳ್ಳ ಎತ್ತುಗಳಾಗಿವೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದರು. ಅವರಿಗೆ ಗೊತ್ತಿರಲಿಲ್ಲ ಆ ಕಡೆ ಈ ಕಡೆ ಹೊಳ್ಳುವ ಕಳ್ಳೆತ್ತುಗಳು ನಿಮ್ಮ ಕಾಂಗ್ರೆಸ್‌ ಪಕ್ಷದಲ್ಲೇ ಇವೆ ಎನ್ನೋದು. ನಾನು ಮತ್ತು ಬಾಬುರಾವ ಚಂಚನಸೂರ ಹೊಲದಲ್ಲಿ ಹೇಗೆ ಸೀದಾ ನೆಗಿಲು ಹೊಡಿಯುತ್ತೇವೆ ಎನ್ನೋದು ಈ ಗೊತ್ತಾಗಿರಬಹುದು. ದುರಹಂಕಾರದ ಮಾತುಗಳಿಂದ ಕೆಲವೇ ದಿನಗಳಲ್ಲಿ ಪ್ರಿಯಾಂಕ್‌ ಖರ್ಗೆ ಮಾಜಿ ಆಗುತ್ತಾರೆ ಎಂದು ಭವಿಷ್ಯ ನುಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ, ಮಾಜಿ ಶಾಸಕರಾದ ವಾಲ್ಮೀಕಿ ನಾಯಕ, ವಿಶ್ವನಾಥ ಪಾಟೀಲ ಹೆಬ್ಟಾಳ ಮಾತನಾಡಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶಶಿಕಲಾ ತೆಂಗಳಿ, ಜಿಪಂ ಸದಸ್ಯರಾದ ಅರವಿಂದ ಚವ್ಹಾಣ, ಅಶೋಕ ಸಗರ, ಮುಖಂಡರಾದ ರಾಜು ನಿಲಂಗಿ, ಲಿಂಗಾರೆಡ್ಡಿ ಭಾಸರೆಡ್ಡಿ, ಚಂದ್ರಶೇಖರ ಅವಂಟಿ, ಬಸವರಾಜ ಬೆಣ್ಣೂರಕರ್‌, ಶರಣಪ್ಪ ನಾಟೀಕಾರ್‌, ನಾಗರಾಜ ಭಂಕಲಗಿ, ಭೀಮರೆಡ್ಡಿ ಕುರಾಳ, ಗೋಪಾಲ ರಾಠೊಡ, ಮಹೇಶ ಬಟಗೇರಿ, ಸುರೇಶ ಬೆನಕನಳ್ಳಿ, ಮಲ್ಲಿಕಾರ್ಜುನ ಪೂಜಾರಿ, ಡಾ| ಮಹೇಂದ್ರ ಕೋರಿ, ಮಸ್ತಾನ್‌ ಸಾಬ್‌, ಗುರುನಾಥಗೌಡ, ಬಸವರಾಜ ನಾಮದಾರ, ತಮ್ಮಣ್ಣ ಡಿಗ್ಗಿ, ಬಸವರಾಜ ಶಿವಗೋಳ, ಶಂಕರ ಚವ್ಹಾಣ, ಬಾಲಾಜಿ ಬುರಬುರೆ, ಅಯ್ಯಪ್ಪ ರಾಮತೀರ್ಥ, ನಾಗರಾಜ ಹೂಗಾರ, ಕವಿತಾ ಚವ್ಹಾಣ ಇದ್ದರು.

ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್‌ ಸ್ವಾಗತಿಸಿದರು. ಶರಣು ಜ್ಯೋತಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next