ಚಿತ್ತಾಪುರ: ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಹೊಲಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು ಆರು ಕಿ.ಮೀ ರಸ್ತೆಯನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಳ್ಳಲು ಅಲ್ಲೂರ (ಬಿ) ಗ್ರಾಮದ ರೈತರು ಮುಂದಾಗಿದ್ದಾರೆ. ಹೊಲಗಳಿಗೆ ಹೋಗಲು ರಸ್ತೆ ನಿರ್ಮಿಸುವಂತೆ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರು. ಆದರೆ ಈ ಮನವಿಗೆ ಯಾವುದೇ ರೀತಿಯ ಸ್ಪಂದನೆ ದೊರಕಿರಲಿಲ್ಲ.
ಈ ಹಿನ್ನೆಲೆಯಲ್ಲಿ ಹಣ ಸಂಗ್ರಹಿಸಿ ರಸ್ತೆ ನಿರ್ಮಿಸಲು ತೀರ್ಮಾನಿಸಿದ ಅಲ್ಲೂರ (ಬಿ) ಗ್ರಾಮದ ರೈತರು, 80 ಸಾವಿರ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ. ಮನವಿಗಿಲ್ಲ ಸ್ಪಂದನೆ: ಅಲ್ಲೂರ (ಬಿ) ಗ್ರಾಮದಲ್ಲಿ ಅನೇಕ ಸಮಸ್ಯೆಗಳಿವೆ. ಈ ಕುರಿತು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಲವಾರು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಮದ ರೈತರು ತಮ್ಮ ಹೊಲಗಳಿಗೆ ಹೋಗುವ ರಸ್ತೆಯನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಕರವೇ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲೂರಕರ್ ತಿಳಿಸಿದ್ದಾರೆ.
ಗೋಳು ಕೇಳುವವರೇ ಇಲ್ಲ: ಅಲ್ಲೂರ (ಬಿ) ಗ್ರಾಮಸ್ಥರ ಗೋಳು ಕೇಳುವವರೇ ಇಲ್ಲದಂತಾಗಿದೆ. ಮಳೆಗಾಲದಲ್ಲಿ ರೈತರು ತಮ್ಮ ಹೊಲಗಳಿಗೆ ಹೋಗಬೇಕೆಂದರೆ ಹರಸಾಹಸ ಪಡಬೇಕು. ಕೆಲವು ರೈತರು ಬಂಡಿಗಳ ಮೇಲಿಂದ ಬಿದ್ದು, ಕೈ-ಕಾಲು ಮುರಿದುಕೊಂಡ ಘಟನೆಗಳು ನಡೆದಿವೆ. ಹೀಗಾಗಿ ರೈತರು ತಾವೇ ರಸ್ತೆ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಾ.ಪಂ ಸದಸ್ಯ ಸುಧಿಧೀರ ಬಿಜಾಪೂರಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈತರ ಹಿತದೃಷ್ಟಿಯಿಂದ ಕೂಡಲೇ ರಸ್ತೆ ನಿರ್ಮಿಸಬೇಕು ಎಂದು ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆಗೆ ಮನವಿ ಸಲ್ಲಿಸಲಾಗಿದೆ. ಬರುವ ದಿನಗಳಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣವಾಗಲಿದೆ.
ರೈತರು ಸಂಗ್ರಹಿಸಿದ ಹಣವನ್ನು ವಾಪಸ್ ಕೊಡಿಸುವ ಕೆಲಸ ಮಾಡಲಾಗುವುದು.
ಶರಣಪ್ಪ ನಾಶಿ,
ಕಾಂಗ್ರೆಸ್ ಮುಖಂಡ
ಎಂ.ಡಿ. ಮಶಾಖ