Advertisement

ರಸ್ತೆ ಮಧ್ಯದಲ್ಲೊಂದು ಸಂತೆ

09:38 AM Jul 07, 2019 | Naveen |

ಚಿತ್ತಾಪುರ: ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಪರಿಣಾಮ ಪಟ್ಟಣದಲ್ಲಿ ಹಲವು ವರ್ಷಗಳಿಂದಲೂ ರಸ್ತೆ ಮೇಲೇಯೇ ವಾರದ ಸಂತೆ ನಡೆಯುತ್ತಿದ್ದರೂ ಪುರಸಭೆ ಆಡಳಿತ ಮಂಡಳಿ ಅಧಿಕಾರಿಗಳು ಮಾತ್ರ ತಮಗೆ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.

Advertisement

ಪ್ರತಿ ಬುಧವಾರಕ್ಕೊಮ್ಮೆ ವಾರದ ಸಂತೆಯಲ್ಲಿ ವ್ಯಾಪಾರಸ್ಥರು ಹಾಗೂ ಗ್ರಾಹಕರು ಪರದಾಡುತ್ತಿದ್ದಾರೆ. ಆದರೆ ಇವರ ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಬೇರೆ ದಾರಿ ಇಲ್ಲದೇ ಗ್ರಾಹಕರು ವ್ಯಾಪಾರ ನಡೆಸುತ್ತಿದ್ದಾರೆ.

ಕಳೆದ ಹಲವು ವರ್ಷಗಳಿಂದ ಸ್ಥಳೀಯ ಕೇಂದ್ರಸ್ಥಾನದಲ್ಲಿ ಸಂತೆ ಮಾರುಕಟ್ಟೆ ವಹಿವಾಟು ನಡೆಸಲು ಪ್ರತ್ಯೇಕ ಸ್ಥಳದ ಸಮಸ್ಯೆಯಿಂದ ವ್ಯಾಪಾರಸ್ಥರು ರಸ್ತೆಯನ್ನೇ ಸಂತೆ ಕಟ್ಟೆ ಮಾಡಿಕೊಂಡಿದ್ದಾರೆ. ಪ್ರತಿ ಬುಧವಾರಕ್ಕೊಮ್ಮೆ ಇಲ್ಲಿನ ಮುಖ್ಯ ರಸ್ತೆಯಲ್ಲಿ ತರಕಾರಿ, ಬಟ್ಟೆ ಸಾಮಗ್ರಿ, ಕೃಷಿ ಉಪಕರಣ, ಕಿರಾಣಿ, ದವಸ ಧಾನ್ಯ, ಹಣ್ಣು ಹಂಪಲು ಸೇರಿದಂತೆ ಅನೇಕ ವಸ್ತುಗಳ ವ್ಯಾಪಾರ ನಡೆಯುತ್ತಿದೆ. ಆದರೆ ಇಲ್ಲಿ ಸಂತೆ ನಡೆಸುತ್ತಿರುವುದರಿಂದ ಅಂಬೇಡ್ಕರ್‌ ವೃತ್ತ, ಭುವನೇಶ್ವರ ವೃತ್ತ, ನಾಗಾವಿ ವೃತ್ತಗಳಲ್ಲಿ ವಾಹನಗಳು ಜಮಾಯಿಸಿ ಸಾರ್ವಜನಿಕರ ಓಡಾಟಕ್ಕೆ ಅಡಚಣೆಯಾಗಿದೆ.

ಪಟ್ಟಣದ ಕೇಂದ್ರ ಸ್ಥಾನಕ್ಕೆ ಅಂದಾಜು 20ರಿಂದ 25ಕ್ಕೂ ಹೆಚ್ಚು ಗ್ರಾಮಸ್ಥರು ಸಂತೆಗೆ ಆಗಮಿಸುತ್ತಾರೆ. ಪಟ್ಟಣವಲ್ಲದೇ ಸುತ್ತಲಿನ ಹೊಸ್ಸುರ್‌, ಅಳ್ಳೊಳ್ಳಿ, ಡೋಣಗಾಂವ, ಸಾತನೂರ್‌, ಭಂಕಲಗಾ, ಸಂಕನೂರ್‌, ಕರದಳ್ಳಿ, ಹಣ್ಣಿಕೇರಾ, ಹಣ್ಣಿಕೇರಾ ತಾಂಡ, ಮೋಗಲಾ, ಇಟಗಾ, ದಿಗ್ಗಾಂವ, ರಾಮತೀರ್ಥ, ಭೀಮನಳ್ಳಿ, ಅಲ್ಲೂರ (ಕೆ), ಅಲ್ಲೂರ (ಬಿ), ದಂಡೋತಿ, ಮುಡಬೂಳ, ಭಾಗೋಡಿ, ಮರಗೋಳ, ಕದ್ದರಗಿ, ಯರಗಲ್, ಮುತ್ತಗಾ ಗ್ರಾಮಸ್ಥರು ವಾರಕ್ಕೊಮ್ಮೆ ಸಂತೆಗೆ ವ್ಯಾಪಾರಕ್ಕಾಗಿ ಬರುತ್ತಿದ್ದಾರೆ.

ಪಟ್ಟಣದ 23 ವಾರ್ಡಗಳಲ್ಲಿ ಅಂದಾಜು 30ರಿಂದ 35 ಸಾವಿರ ಮತದಾರರು ಇದ್ದಾರೆ. ಇವರೆಲ್ಲ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಈ ಸಂತೆಯನ್ನೇ ಅವಲಂಭಿಸಿದ್ದಾರೆ.

Advertisement

ಸಂತೆ ದಿನ ಗ್ರಾಹಕರು ಅನೇಕ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಪರಿಣಾಮ ಪರದಾಡುವಂತಾಗಿದೆ. ಮಳೆ, ಚಳಿ, ಬೇಸಿಗೆಯಲ್ಲಿ ವ್ಯಾಪಾರಸ್ಥರು, ಗ್ರಾಹಕರ ಸಮಸ್ಯೆ ಹೇಳದಂತಾಗಿದೆ. ಸಂತೆ ನಡೆಸಲು ಪ್ರತ್ಯೇಕ ಮಾರುಕಟ್ಟೆ ವಾಣಿಜ್ಯ ಮಳಿಗೆ ನಿರ್ಮಿಸಬೇಕು ಎಂದು ಪುರಸಭೆ ಆಡಳಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ. ಈಗಲಾದರೂ ಪುರಸಭೆ ಆಡಳಿತ ಮಂಡಳಿ ಹಾಗೂ ಜನ ಪ್ರತಿನಿಧಿಗಳು ಸಂತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂತೆ ಮಾರುಕಟ್ಟೆ ಇಲ್ಲದೇ ವ್ಯಾಪಾರಸ್ಥರು, ಗ್ರಾಹಕರು ಹರಸಾಹಸ ಪಡುತ್ತಿದ್ದಾರೆ. ಪ್ರತಿ ವಾರಕ್ಕೊಮ್ಮೆ ನಡೆಯುವ ಸಂತೆ ದಿನದಂದು ವಾಹನಗಳ ದಟ್ಟಣೆಯಿಂದ ಜನರು ತೊಂದರೆ ಎದುರಿಸುತ್ತಿದ್ದಾರೆ. ಹೀಗಾಗಿ ಪುರಸಭೆ ಅಧಿಕಾರಿಗಳಿಗೆ ಸೂಕ್ತ ಮಾರುಕಟ್ಟೆಗೆ ಸ್ಥಳವಕಾಶ ಮಾಡಿಕೊಡಬೇಕೆಂದು ಮನವಿ ಮಾಡಲಾಗಿತ್ತು. ಆದರೆ ಇಲ್ಲಿವರೆಗೆ ಮನವಿಗೆ ಸ್ಪಂಸಿಲ್ಲ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.
ಲಕ್ಷ್ಮೀಕಾಂತ ತಾಂಡೂರಕರ್‌,
ಬೀದಿ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ

ಸಂತೆ ಮಾರುಕಟ್ಟೆ ನಿರ್ಮಿಸಬೇಕು ಎಂದು ನಾನು ಪುರಸಭೆ ಮುಖ್ಯಾಧಿಕಾರಿಯಾಗಿ ಬಂದಾಗಿನಿಂದ ಸಾರ್ವಜನಿಕರಿಂದ ಯಾವುದೇ ಮನವಿ ಬಂದಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಪೊಲೀಸರ ಜೊತೆ, ಬೀದಿ ವ್ಯಾಪಾರಿಗಳ ಜೊತೆ ಚರ್ಚಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲು ಪ್ರಯತ್ನಿಸಲಾಗುವುದು. ಪುರಸಭೆಗೆ ಸಂಬಂಧ ಪಟ್ಟ ಜಾಗ ಕೂಡಾ ಇದೆ. ಅಲ್ಲಿ ಎಲ್ಲ ವ್ಯಾಪಾರಸ್ಥರಿಗೂ ಅನುಕೂಲ ಮಾಡಿ ಕೊಡಲು ಆಗುವುದಿಲ್ಲ. ಬೀದಿ ವ್ಯಾಪಾರಿಗಳು ಬೇರೆ ಕಡೆ ಹೋಗಲು ಇಚ್ಛಿಸಿದರೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು.
• ಮನೋಜಕುಮಾರ ಗುರಿಕಾರ,
  ಪುರಸಭೆ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next