ಈ ಕುರಿತು ರವಿವಾರ ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ವಕೀಲ, ದಲಿತ ಮುಖಂಡ ಶ್ರವಣಕುಮಾರ ಮೊಸಲಗಿ ಅವರ ನೇತೃತ್ವದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದಲಿತ ಮಹಿಳೆ ರಾಜೇಶ್ವರಿ, ನನ್ನ ಮಗ ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದು ತಪ್ಪಾಗಿದ್ದರೆ ಪೊಲೀಸ್ ಕಂಪ್ಲೇಂಟ್ ಕೊಟ್ಟು ಶಿಕ್ಷೆ ಕೊಡಿಸಬಹುದಾಗಿತ್ತು. ಅಥವ ನನ್ನ ಜಾತಿಯ ಹಿರಿಯ ಗಮನಕ್ಕೆ ತಂದು ನ್ಯಾಯ ಮಾಡಿಸಬಹುದಾಗಿತ್ತು. ಆದರೆ ಹೀಗೆ ಕೊರಳಿಗೆ ಚೂರಿ ಇರಿದು ಸಾಯಿಸಿ ಮೋಸ ಮಾಡಿದರು. ನನಗೆ ಆಸರೆಯಾಗಿದ್ದ ಏಕೈಕ ಮಗನನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದೇನೆ. ಮಗನನ್ನು ಕೊಂದು ರೊಕ್ಕದ ಚೆಕ್ ಕೈಗಿಟ್ಟಿದ್ದಾರೆ. ನನಗೆ ನನ್ನ ಮಗ ಬೇಕು ಯಾರು ತಂದು ಕೊಡುತ್ತಾರೆ? ಎಂದು ಪ್ರಶ್ನಿಸುವ ಮೂಲಕ ರಾಜೇಶ್ವರಿ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
Advertisement
ಈ ವೇಳೆ ಮಾತನಾಡಿದ ವಕೀಲ, ದಲಿತ ಮುಖಂಡ ಶ್ರವಣಕುಮಾರ ಮೊಸಲಗಿ, ಮುಸ್ಲಿಂ ಯುವತಿಯನ್ನು ದಲಿತ ಯುವಕ ವಿಜಯ ಪ್ರೀತಿಸಿರುವುದು ಅಕ್ಷರಶಃ ನಿಜ. ಆ ಯುವತಿಯೂ ಕೂಡ ಅಷ್ಟೇ ಗಾಢವಾಗಿ ವಿಜಯ್‌ನನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿಯನ್ನು ಬೆಂಬಲಿಸಿ ಸೌಹಾರ್ಧತೆ ಮೆರೆಯಬೇಕಾದ ಕುಟುಂಬ ಕೊಲ್ಲುವ ಕೃತ್ಯಕ್ಕೆ ಕೈಹಾಕಿದ್ದು ಖಂಡನಾರ್ಹವಾಗಿದೆ. ಯಾವುದೋ ಒಂದು ಗುಂಪಿನ ಪ್ರಚೋದನೆಯಿಂದ ಯುವತಿಯ ಸಹೋದರರು ದುಷ್ಕೃತ್ಯಕ್ಕೆ ಕೈಹಾಕಿರುವ ಅನುಮಾನವಿದೆ. ಪಟ್ಟಣದಲ್ಲಿ ಕೆಲವು ಯುವಕರ ಗುಂಪುಗಳು ಸಮಾಜ ಸೇವೆಯ ಹೆಸರಿನಲ್ಲಿ ತಲೆ ಎತ್ತಿವೆ. ಅವು ಪ್ರಚೋದಕ ಕೃತ್ಯಗಳಿಗೆ ಮುಂದಾಗುತ್ತಿವೆ. ದಾಳಿಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ಕಾರಣಕ್ಕೆ ಇಂತಹ ಕೊಲೆ ಘಟನೆಗಳು ನಡೆಯುತ್ತಿವೆ. ಇವುಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಬೇಕು ಎಂದು ಒತ್ತಾಯಿಸಿದರು.
ಪಟ್ಟಣದಲ್ಲಿ ನಡೆದ ದಲಿತ ಯುವಕನ ಕೊಲೆ ಪ್ರಕರಣವನ್ನು ಕೆಲ ಕೋಮು ಶಕ್ತಿಗಳು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲು ಹವಣಿಸುತ್ತಿವೆ. ಈ ಹಿಂದೆ ನಡೆದ ಯಾವೊಬ್ಬ ದಲಿತರ ಕೊಲೆ ದೌರ್ಜನ್ಯಗಳ ವಿರುದ್ಧ ಮಾತನಾಡದ ಬಿಜೆಪಿಯವರಿಗೆ ಇದ್ದಕಿದ್ದಂತೆ ದಲಿತ ಯುವಕ ವಿಜಯ್ ಹತ್ಯೆಯಿಂದ ನೋವುಂಟಾಗಿದೆ. ಕೊಲೆಗೀಡಾದ ಯುವಕನ ತಾಯಿಗೆ ಸಾಂತ್ವನ ಹೇಳಲು ಮನೆಗೆ ಬಂದು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಬಾಯಿಬಿಟ್ಟರೆ ಹಿಂದು-ಮುಸ್ಲಿಂ ಸಂಘರ್ಷದ ಬಗ್ಗೆ ಬೆಂಕಿ ಕಾರುವ ಆಂದೋಲಾ ಸಿದ್ಧಲಿಂಗ ಸ್ವಾಮೀಜಿಗೂ ದಲಿತ ಯುವಕ ಹಿಂದೂವಾಗಿ ಕಾಣಿಸಿದ್ದಾನೆ. 30/40 ಕ್ರಿಮಿನಲ್ ಪ್ರಕರಣಗಳಿರುವ ಸ್ವಾಮೀಜಿಯೊಬ್ಬ ದಲಿತ ಕುಟುಂಬದ ಕೊಲೆ ಪ್ರಕರಣದಲ್ಲಿ ದಲಿತ-ಮುಸ್ಲಿಂ ಎಂಬ ಕೋಮು ಕಿಡಿ ಹೊತ್ತಿಸುವ ಪ್ರಯತ್ನಕ್ಕೆ ಮುಂದಾಗಿರುವುದು ಅವರ ಕೀಳು ಮನಸ್ಥಿತಿ ಅರಿವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ದಲಿತ ಸೇನೆಯ ನಗರ ಸಮಿತಿ ಅಧ್ಯಕ್ಷ ರಘುವೀರ ಪವಾರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.