ಚಿತ್ತಾಪುರ: ಸಚಿವ ಇರಲಿ ಅಥವಾ ಇರದೇ ಇರಲಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಮೂಲ ಸೌಲಭ್ಯ ಒದಗಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ. ಹೀಗಾಗಿ ನಾನು ಪ್ರಾಮಾಣಿಕವಾಗಿ ಮೂಲ ಸೌಲಭ್ಯ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣದ ತಹಶೀಲ್ ಕಚೇರಿ ಆವರಣದಲ್ಲಿ 6.67 ಕೋಟಿ ರೂ. ವೆಚ್ಚದ ಏಳು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಎಚ್ಕೆಆರ್‌ಡಿಬಿ, ಎಸ್‌ಸಿಸಿಪಿ, ಟಿಎಸ್‌ಪಿ, ನಬಾರ್ಡ್, 14ನೇ ಹಣಕಾಸು ಯೋಜನೆ, ನಗರೋತ್ಥಾನ ಮೂರನೇ ಹಂತ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಹಲವಾರು ಕಾಮಗಾರಿ ನಡೆಸಲಾಗುವುದು ಎಂದರು.
38 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಪಿಯು ಕಾಲೇಜಿಗೆ 2 ಕೋಣೆಗಳ ನಿರ್ಮಾಣ. 40 ಲಕ್ಷ ರೂ. ವೆಚ್ಚದಲ್ಲಿ ವಾರ್ಡ್ ಸಂಖ್ಯೆ 5, 7, 14 ರಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ. ಒಂದು ಕೋಟಿ ರೂ. ವೆಚ್ಚದಲ್ಲಿ ಆಶ್ರಯ ಕಾಲೋನಿಯಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ. 1.10 ಕೋಟಿ ರೂ. ವೆಚ್ಚದಲ್ಲಿ ಆಂಧ್ರ ಪ್ರದೇಶ ಗಡಿಯ ಪುಟಪಾಕ್‌ದಿಂದ ಬೋಸ್ಗಾ ರಾಷ್ಟ್ರೀಯ ಹೆದ್ದಾರಿ-126 ಮಧ್ಯದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ. 1.79 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಸಿಸಿ ರಸ್ತೆ, ಚರಂಡಿ, ನೀರು ಸರಬರಾಜು ಪೈಪ್‌ಲೈನ್, ಉದ್ಯಾನವನ ಅಭಿವೃದ್ಧಿ ಕೆಲಸ ಮಾಡಲಾಗುವುದು. ಎರಡು ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಡಾಂಬರೀಕರಣ, ಸಿಸಿ ರಸ್ತೆ, ಚರಂಡಿ, ಸೇತುವೆ ನಿರ್ಮಾಣ ಕಾಮಗಾರಿ. 50 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಪ.ಜಾ ಬಡಾವಣೆಯಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ನಡೆಸಲಾಗುವುದು. ಎಲ್ಲ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಹಶೀಲ್ದಾರ್ ಉಮಾಕಾಂತ ಹಳ್ಳೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಸದಸ್ಯರಾದ ಶಿವರುದ್ರ ಭೀಣಿ, ಶಿವಾನಂದ ಪಾಟೀಲ, ತಾಪಂ ಅಧ್ಯಕ್ಷ ಜಗದೇವರೆಡ್ಡಿ, ಉಪಾಧ್ಯಕ್ಷ ಹರಿನಾಥ ಚವ್ಹಾಣ, ಎಪಿಎಂಸಿ ಅಧ್ಯಕ್ಷ ಶಿವರೆಡ್ಡಿಗೌಡ ನಾಲವಾರ, ಸದಸ್ಯ ಮನ್ಸೂರ್ ಪಟೇಲ್ ತೊಂಚಿ ಮತ್ತಿತರರು ಇದ್ದರು.