ಚಿತ್ತಾಪುರ: ರಾಜ್ಯದಲ್ಲಿ ಅನೇಕ ಬಡ ಮಹಿಳೆಯರು ತಮ್ಮ ನಿತ್ಯ ಜೀವನ ನಡೆಸಲು ಆಗದೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಅಂತಹ ಬಡ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ವಿಶ್ವ ಜನಾ ಸೇವಾ ಸಂಸ್ಥೆ ವತಿಯಿಂದ ದಿ. ಸತ್ಯನಾರಾಯಣ ಬಜಾಜ್ ಸ್ಮರಾಣಾರ್ಥವಾಗಿ ಹಮ್ಮಿಕೊಂಡಿದ್ದ ಬಡ ಮಹಿಳೆಯರ ಉಚಿತ ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಣೆ ಹಾಗೂ 2ನೇ ತಂಡದ ವಿಶ್ವ ಬಸವಾಂಬೆ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಮಹಿಳೆಯರಿಗೆ ನಿಗಮದಲ್ಲಿನ ಪ್ರತಿಯೊಂದು ಸೌಲಭ್ಯಗಳನ್ನು ದೊರಕಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಈ ಭಾಗದಲ್ಲಿ ಮುಗ್ಧ ಸ್ವಭಾವದ ಬಡ ಮಹಿಳೆಯರು ಇದ್ದಾರೆ. ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಹಿಂಜರಿಯುತ್ತಾರೆ. ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡುವ ಸೌಲಭ್ಯಗಳಿಂದ ಯಾರೂ ವಂಚಿತರಾಗಬಾರದು. ಮಹಿಳೆಯರಿಗಾಗಿ ಅನೇಕ ರೀತಿಯಲ್ಲಿ ಯೋಜನೆಗಳನ್ನು ನೀಡುತ್ತಿದೆ. ಆದ್ದರಿಂದ ಮಹಿಳೆಯರು ತಮ್ಮ ಹಕ್ಕನ್ನು ಕೇಳಿ ಪಡೆಯಬೇಕು ಎಂದು ಹೇಳಿದರು.
ಮಹಿಳಾ ಅಭಿವೃದ್ಧಿ ನಿಗಮದ ಅ ಧಿಕಾರಿ ಶಾಂತಲಾ ಮಾತನಾಡಿ, ಸರ್ಕಾರದ ಯೋಜನೆಗಳ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದು ಈ ಭಾಗದ ಮಹಿಳೆಯರ ಏಳಿಗೆಗೆ ಶ್ರಮಿಸಲಾಗುವುದು ಎಂದು ಹೇಳಿದರು. ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೂರ್ ಮಾತನಾಡಿ, ತಾಲೂಕಿನಲ್ಲಿ ವಿಶ್ವ ಜನಾ ಸೇವಾ ಸಂಸ್ಥೆಯು ಬಡ ಮಹಿಳೆಯರಿಗಾಗಿ ಉಚಿತ ಹೊಲಿಗೆ ತರಬೇತಿ ನೀಡಿ ಸ್ವಾಲಂಬನೆ ಜೀವನ ನಡೆಸಲು ಅನುಕೂಲ ಮಾಡಿ ಕೊಟ್ಟಿದೆ. ಇಂತಹ ಸಂಸ್ಥೆಗೆ ಸರ್ಕಾರ ಹಾಗೂ ನಿಗಮದ ಸಹಾಯ ಸಹಕಾರ ನೀಡಬೇಕು ಎಂದು ಹೇಳಿದರು.
ವಿಶ್ವ ಜನಾ ಸೇವಾ ಸಂಸ್ಥೆ ನಾಗಯ್ನಾ ಸ್ವಾಮಿ ಅಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುವರ್ಣ ಯರಗಲ್, ಪಲ್ಲವಿ ದಂಡೋತಿ ಅನಿಸಿಕೆ ವ್ಯಕ್ತ ಪಡಿಸಿದರು. ಇದೇ ವೇಳೆ ಉಚಿತ ಹೊಲಿಗೆ ತರಬೇತಿ ಪಡೆದ ತರಬೇತಿದಾರರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಬೋಧಕಿ ಜಯಶ್ರೀ ಅಪ್ಪಾಜೀ, ಅಂಬಿಕಾ, ಹಣಿಕೇರಾ, ಭೀಮರಾವ ಕರದಾಳ, ಮಲ್ಲಿಕಾರ್ಜುನ ಪೂಜಾರಿ, ಅಭಿಲಾಷ ದಿಗ್ಗಾಂವ ಇತರರು ಇದ್ದರು. ಶರಣ ಬಸಮ್ಮ ಮರಗೋಳ ಪ್ರಾರ್ಥಿಸಿದರು. ದೇವಿಕಾ ಭಾಗೋಡಿ ಸ್ವಾಗತಿದರು. ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿ, ವಂದಿಸಿದರು.