Advertisement

Chittapur: ಧಾರಾಕಾರ ಮಳೆಗೆ ಕಾಗಿಣಾ ನದಿ ಸೇತುವೆ ಮುಳುಗಡೆ

01:03 PM Sep 01, 2024 | Team Udayavani |

ಚಿತ್ತಾಪುರ: ತಾಲೂಕಿನಾದ್ಯಂದ ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಧಾರಾಕಾರ ಮಳೆಯಿಂದ ತಾಲೂಕಿನ ಕಾಗಿಣಾ ನದಿ ತುಂಬಿ ಹರಿದು ದಂಡೋತಿ ಗ್ರಾಮದ ಕಾಗಿಣಾ ಸೇತುವೆ ಮುಳುಗಡೆಯಾಗಿದೆ. ಇದರಿಂದ ವಾಹನ ಸಂಚಾರ ಸ್ಥಗಿತಗೊಂಡು ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

Advertisement

ಆ.31ರ ಶನಿವಾರ ರಾತ್ರಿಯಿಂದ ನದಿಯಲ್ಲಿ ಪ್ರವಾಹ ವೇಗವಾಗಿ ಏರುಗತಿಯಲ್ಲಿ ಹೆಚ್ಚಾಗಿ ಸೇತುವೆ ಸಮನಾಗಿ ನೀರು ಹರಿಯುತ್ತಿತ್ತು. ಸೆ.1ರ ಭಾನುವಾರ ಬೆಳಗ್ಗೆ ಸೇತುವೆಯ ಮೇಲಿಂದ ನೀರು ಹರಿಯುತ್ತಿದೆ.

ಕಾಗಿಣಾ ನದಿ ಮೇಲ್ಬಾಗದ ಸೇಡಂ, ಚಿಂಚೋಳಿ, ಕಾಳಗಿ ತಾಲೂಕುಗಳಲ್ಲಿ ಹಾಗೂ ನಾಗರಾಳ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹ ಉಕ್ಕೇರಿ ಹರಿಯುತ್ತಿದೆ.

ಸೇತುವೆ ಮಾರ್ಗವಾಗಿ ನಿತ್ಯವೂ ಕಲಬುರಗಿಗೆ ಸಂಚರಿಸುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಸಂಚಾರವನ್ನು ರಾವೂರ್, ಶಹಾಬಾದ ಮಾರ್ಗಕ್ಕೆ ಬದಲಿಸಲಾಗಿದೆ.

Advertisement

ಸರ್ಕಾರಿ ನೌಕರರು, ಸಾರ್ವಜನಿಕರು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಪ್ರಯಾಣಿಕರು ಚಿತ್ತಾಪುರಕ್ಕೆ ಬರಲು ಮತ್ತು ಕಲಬುರಗಿಗೆ ಹೋಗಲು ಶಹಾಬಾದ್ ಮಾರ್ಗದ ಸಂಚಾರ ಅವಲಂಭಿಸಿದ್ದಾರೆ.

ಮರಗೋಳ ಕ್ರಾಸ್, ದಂಡೋತಿ ಗ್ರಾಮ, ಮರಗೋಳ ಕ್ರಾಸ್ ಹತ್ತಿರ ಡಿವೈಎಸ್ಪಿ ಶಂಕತಗೌಡ ಪಾಟೀಲ್, ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐ ಶ್ರೀಶೈಲ್ ಅಂಬಾಟಿ ಹಾಗೂ ಸಿಬ್ಬಂದಿಗಳು ಕಾಗಿಣ ನದಿಯ ಹತ್ತಿರ ಹೋಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ.

ಬೆಳೆ ಸಂಪೂರ್ಣ ಹಾನಿ;

ಧಾರಾಕಾರ ಮಳೆಯಿಂದ ತಾಲೂಕಿನ ವಿವಿಧೆಡೆ ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ದಂಡೋತಿ ಗ್ರಾಮದ ಹೊಲಗಳಲ್ಲಿ ಮಳೆ ನೀರು ಹೊಲಗಳಿಗೆ ನುಗ್ಗಿ‌ ತೊಗರಿ, ಉದ್ದು, ಸೋಯಾ, ಹೆಸರು ಬೆಳೆಗಳು ಹಾನಿಯಾಗಿವೆ.

ಧಾರಾಕಾರ ಮಳೆಗೆ 8 ಮನೆಗಳಿಗೆ ಹಾನಿ

ಚಿತ್ತಾಪುರ ಪಟ್ಟಣ ಸೇರಿದಂತೆ ‌ತಾಲೂಕಿನ ವಿವಿಧ ಗ್ರಾಮಗಳಲ್ಲಿ  ಸುರಿಯುತ್ತಿರುವ ಧಾರಾಕಾರ ಮಳೆಗೆ ಇಲ್ಲಿಯವರೆಗೆ 8 ಮನೆಗಳ ಮೇಲ್ಛಾವಣಿ ಮತ್ತು ಗೋಡೆ ಕುಸಿತಗೊಂಡಿವೆ ಎಂದು ತಹಶಿಲ್ದಾರ್ ಅಮರೇಶ ಬಿರಾದಾರ ಮಾಹಿತಿ ನೀಡಿದ್ದಾರೆ.

ಧಾರಾಕಾರ‌ ಮಳೆ ಸುರಿಯುತ್ತಿರುವುದರಿಂದ ಮನೆಗಳು ಹಾನಿಗೊಳಾಗುತ್ತಿದ್ದು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ‌ ಪರೀಶಿಲನೆ ನಡೆಸಿದ್ದಾರೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದರು.

ಮಳೆಯ ವಿವಿರ:

ಚಿತ್ತಾಪುರ ಪಟ್ಟಣದಲ್ಲಿ 69.8mm, ಅಳ್ಳೋಳ್ಳಿ ವಲಯದಲ್ಲಿ 20.5mm, ನಾಲವಾರ ವಲಯದಲ್ಲಿ 54.2mm, ಗುಂಡಗುರ್ತಿ ವಲಯದಲ್ಲಿ 30.6mm ಮಳೆ ಸುರಿದ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next